Advertisement

ಮೂಲಭೂತ ಸಮಸ್ಯೆಗಳ ಆಗರ ಮಾಂಬಳ್ಳಿ

02:12 PM Aug 26, 2019 | Suhan S |

ಸಂತೆಮರಹಳ್ಳಿ: ತಾಲೂಕಿನ ಮಾಂಬಳ್ಳಿಯ ಮುಸ್ಲಿಂ ಬಡಾವಣೆಯಲ್ಲಿ ಮೂಲಭೂತ ಸಮಸ್ಯೆಗಳೇ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿಯು ಬಡಾವಣೆಗಳ ಅಭಿವೃದ್ಧಿಗೆ ಕಿಂಚಿತ್ತು ಗಮನ ನೀಡದಿರುವುದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ತಾಲೂಕಿನ ದೊಡ್ಡ ಗ್ರಾಮವಾಗಿರುವ ಮಾಂಬಳ್ಳಿ ಗ್ರಾಮದಲ್ಲಿ ಪ.ಜಾತಿ, ಮುಸ್ಲಿಂ, ಈಡಿಗ, ಬ್ರಾಹ್ಮಣ ಸೇರಿದಂತೆ ಇತರೆ ಜಾತಿಗಳ ಸುಮಾರು 8 ಸಾವಿರಕ್ಕೂ ಹೆಚ್ಚು ಜನ ವಾಸವಿದ್ದಾರೆ.

ಗ್ರಾಮದ ಮುಸ್ಲಿಂ ಬಡಾವಣೆಯಲ್ಲಿ ಮೂಲಭೂತ ಸಮಸ್ಯೆಗಳೇ ಹೆಚ್ಚಿದ್ದು ಇಲ್ಲಿನ ರಸ್ತೆ, ಚರಂಡಿ ಸೇರಿದಂತೆ ಇತರೆ ಸಮಸ್ಯೆಗಳು ನಿವಾಸಿಗಳನ್ನು ಹೈರಣಾಗಿಸಿವೆ.

ಕೆಸರು ಮಯವಾದ ರಸ್ತೆ: ಕಳೆದ ಹಲವು ದಿನಗಳಿಂದಲೂ ಸುರಿಯುತ್ತಿರುವ ಮಳೆಯಿಂದಾಗಿ ಬಡಾವಣೆಯ ಬಹುತೇಕ ರಸ್ತೆಗಳು ಕೆಸರುಮಯವಾಗಿ ಮಾರ್ಪಟ್ಟಿವೆ. ಬಡಾವಣೆಯಲ್ಲಿ ಸೂಕ್ತ ಸಿ.ಸಿ. ರಸ್ತೆ ನಿರ್ಮಿಸದ ಕಾರಣ ಹಾಲಿ ಇರುವ ಮಣ್ಣಿನ ರಸ್ತೆಗಳು ಮಳೆಯ ಸಂದರ್ಭದಲ್ಲಿ ಕೆಸರಾಗಿ ಪರಿವರ್ತನೆಗೊಂಡು ಓಡಾಡಲು ಆಗದ ಸ್ಥಿತಿಗೆ ತಲುಪುತ್ತವೆ.

ಬೈಕ್‌ ಸವಾರರ ಸಾಹಸ: ದ್ವಿಚಕ್ರ ವಾಹನಗಳಲ್ಲಿ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟರ ಮಟ್ಟಿಗೆ ರಸ್ತೆಗಳು ಅಪಾಯವನ್ನುಂಟು ಮಾಡುತ್ತವೆ. ಶಾಸರು ಬಡಾವಣೆಯ ಅಭಿವೃದ್ಧಿಗೆ ಗಮನ ನೀಡದಿರುವುದು ನಿವಾಸಿಗಳ ಆಕ್ರೋಶಕ್ಕೂ ಕಾರಣವಾಗಿದೆ.

Advertisement

ಮನೆಗಳಿಗೆ ನುಗ್ಗುವ ಮಳೆ ನೀರು: ಮಳೆ ಬಂದರೆ ಗ್ರಾಮದ ಹೊಸಪೇಟೆ ಹಾಗೂ ಗೌಸಿಯಾ ಮೊಹಲ್ಲಾದಲ್ಲಿರುವ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತದೆ. ಅಲ್ಲದೆ ಆ ನೀರು ಮುಂದೆ ಹೋಗಲು ಸಾಧ್ಯವಿಲ್ಲದೆ ಪಕ್ಕದಲ್ಲಿರುವ ದೊಡ್ಡ ಹಳ್ಳದಲ್ಲೇ ನಿಲ್ಲುತ್ತದೆ. ಇದು ದಶಕಗಳ ಸಮಸ್ಯೆಯಾಗಿದೆ. ಯಾವೊಬ್ಬ ಜನಪ್ರತಿನಿಧಿ ಬಂದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸಾಧ್ಯವಾಗಿಲ್ಲ ಎಂಬುದು ಅಲ್ಲಿನ ನಿವಾಸಿಗಳಾದ ಅಹಮ್ಮದ್‌ ಪಾಷಾ, ಸುಹೇಲ್ ಅವರ ಆರೋಪ.

ಚರಂಡಿ ನೀರಿಂದ ನಿರ್ಮಾಣವಾಗಿರುವ ಕೆರೆ: ಇಲ್ಲಿನ ಬಹುತೇಕ ಚರಂಡಿಗಳು ಸೂಕ್ತ ರೀತಿಯಲ್ಲಿಲ್ಲ. ಇದರಿಂದ ಕಲುಷಿತ ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯದೆ ನಿಂತಲ್ಲೇ ನಿಲ್ಲುತ್ತದೆ. ಇದರಿಂದ ನಿವಾಸಿಗಳಿಗೆ ರೋಗರುಜಿನಗಳ ಭೀತಿ ಎದುರಾಗಿದೆ. ಜೊತೆಗೆ ಅನೇಕ ಚರಂಡಿಗಳು ಕಸ ಕಡ್ಡಿಗಳಿಂದ ತುಂಬಿಕೊಂಡಿದ್ದು ಅನೈರ್ಮಲ್ಯಕ್ಕೆ ಕಾರಣವಾಗಿದೆ. ಇದರ ಜೊತೆಗೆ ಚರಂಡಿಗಳ ನೀರು ಹೊರ ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಬಡಾವಣೆಯ ಮಧ್ಯದಲ್ಲಿಯೇ ಇರುವ ಕುಂಬಾರಕಟ್ಟೆ ಇದ್ದು ಚರಂಡಿಗಳ ನೀರು ಇಲ್ಲಿಗೆ ಬಂದು ಸೇರಿ ಕೆರೆಯೇ ನಿರ್ಮಾಣವಾಗಿದೆ. ಇಲ್ಲಿಂದ ಗಬ್ಬು ವಾಸನೆ ಬರುತ್ತಿದ್ದು ಸುತ್ತಲಿನ ಕುಟುಂಬಗಳು ವಾಸಿಸಲು ಆಗದ ಸ್ಥಿತಿಯಲ್ಲಿವೆ. ಇದರಿಂದ ರೋಗಗಳು ಬರುವ ಭೀತಿಯೂ ಬಡಾವಣೆಯ ನಿವಾಸಿಗಳಲ್ಲಿ ಎದುರಾಗಿದೆ.

ಡೆಂಘೀ ಜ್ವರದಿಂದ ಬಳಲುವ ಜನರು: ಮಳೆ ಗಾಲ ಆರಂಭವಾಗಿ ನಮ್ಮ ಮನೆಯಲ್ಲಿ ಎಲ್ಲರೂ ಡೆಂಘೀ ಜ್ವರದಿಂದ ಬಳಲಿದ್ದೇವೆ. ಇಲ್ಲಿ ಮೂಗು ಮುಚ್ಚಿಕೊಂಡು ಬದುಕುವ ಸ್ಥಿತಿ ಇದೆ. ಬಡವರಾದ ನಮಗೆ ಚುನಾವಣೆಯಲ್ಲಿ ಗೆದ್ದ ಯಾವೊಬ್ಬ ಜನಪ್ರತಿನಿಧಿಯೂ ಮೂಲ ಸೌಲಭ್ಯ ಕಲ್ಪಿಸಿಲ್ಲ. ನಾನು ಶಾಸಕರಲ್ಲಿ ಮನವಿ ಮಾಡಿಕೊಳ್ಳುವುದೆನೆಂದರೆ ಮಾಂಬಳ್ಳಿ ಗ್ರಾಮಕ್ಕೆ ಕುಂಬಾರಕಟ್ಟೆಯಲ್ಲಿ ನೀರು ನಿಲ್ಲದ ಹಾಗೆ ಮಾಡಿ, ಉತ್ತಮ ರಸ್ತೆ, ಚರಂಡಿ ನಿರ್ಮಿಸಿ ಶಾಶ್ವತ ಕೆಲವನ್ನು ಈಗಲಾದರೂ ಮಾಡಿಕೊಡಿ ಎಂಬುದು ಇಲ್ಲಿನ ನಿವಾಸಿ ಬಾಬು, ರೇಣುಕೇಶ ಅವರ ಆಗ್ರಹವಾಗಿದೆ.

ಸಮಸ್ಯೆಗೆ ಸೂಕ್ತ ಸ್ಪಂದನೆಸಿಕ್ಕಿಲ್ಲ: ಆರೋಪ

ಮಾಂಬಳ್ಳಿ ಗ್ರಾಮದಲ್ಲಿ ಹಲವು ದಶಕಗಳಿಂದಲೂ ಕೆಲ ಸಮಸ್ಯೆಗಳು ಮನೆ ಮಾಡಿವೆ. ಇದನ್ನು ಪರಿಹರಿಸಲು ದೊಡ್ಡ ಮೊತ್ತದ ಅನುದಾನದ ಅವಶ್ಯಕತೆ ಇದೆ. ಇದನ್ನು ಒದಗಿಸಲು ಇದುವರೆಗೂ ಆಗಿ ಹೋಗಿರುವ ಸಂಸದರು, ಶಾಸಕರು ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಈಗಲಾದರೂ ಇದಕ್ಕೆ ಒಂದು ಮಾಸ್ಟರ್‌ ಪ್ಲಾನ್‌ ಮಾಡಿ ಶಾಶ್ವತವಾಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶಾಸಕರು ಗಮನ ಹರಿಸಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಜೆ. ಶಕೀಲ್ ಅಹಮ್ಮದ್‌ ಆಗ್ರಹಿಸಿದ್ದಾರೆ.
● ಫೈರೋಜ್‌ ಖಾನ್‌
Advertisement

Udayavani is now on Telegram. Click here to join our channel and stay updated with the latest news.

Next