ಬೀದರ: ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ ಭಾಗ ಮಾತ್ರ ಪ್ರಗತಿ ಕಾಣಲು ಸಾಧ್ಯ ಎಂದು ಶಿಕ್ಷಣ ತಜ್ಞೆ ಪೂರ್ಣಿಮಾ ಜಿ. ಅಭಿಪ್ರಾಯಪಟ್ಟರು.
ಹಾರಕೂಡದಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಬೀದರ ಜಿಲ್ಲೆಯ ಅಭಿವೃದ್ಧಿ ಸಾಧ್ಯತೆಗಳು’ ಕುರಿತ ಗೋಷ್ಠಿಯಲ್ಲಿ ಆಶಯ ನುಡಿಯಾಡಿದ ಅವರು, 2006ರ ಸರ್ವೇ ಪ್ರಕಾರ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ 250 ಜಿಲ್ಲೆಗಳಲ್ಲಿ ಬೀದರ ಸಹ ಸೇರಿರುವುದು ಬೇಸರದ ಸಂಗತಿ. ಶಿಕ್ಷಣವಿಲ್ಲದೇ ಅಭಿವೃದ್ಧಿ ನಿರೀಕ್ಷಿಸುವುದು ಅಸಾಧ್ಯ ಎಂದರು.
ಬಾಲ್ಯವಿವಾಹ ಪದ್ಧತಿ ಬೀದರ ಜಿಲ್ಲೆಯಲ್ಲಿ ಇಂದಿಗೂ ಜೀವಂತವಿದೆ. ದೇಶದ ಸಂಸ್ಕೃತಿ ಮುನ್ನಡೆಸಿಕೊಂಡು ಹೋಗುವ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸದೇ ಬೇಗ ವಿವಾಹ ಮಾಡಿಕೊಡುತ್ತಿರುವುದು ಸರಿಯಲ್ಲ. ಎಂದ ಅವರು, ಬೀದರ ಜಿಲ್ಲೆಗೆ ಉತ್ತಮ ಶಿಕ್ಷಣ ಸಂಸ್ಥೆ, ಕೌಶಲ್ಯ ತರಬೇತಿ ಕೇಂದ್ರಗಳು ಬರಬೇಕು. ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕಾ ಕೇಂದ್ರ ತಂದು ಉದ್ಯೋಗಾವಕಾಶ ಸೃಷ್ಟಿಸಬೇಕು ಎಂದರು.
ಜನಪ್ರತಿನಿಧಿಗಳ ನಿರ್ಲಕ್ಷ್ಯ
ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ಸ್ವಾತಂತ್ರ್ಯ ನಂತರ ಬೀದರ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಗೋದಾವರಿ ಜಲಾನಯನದಲ್ಲಿ ಬರುವ ಏಕೈಕ ಜಿಲ್ಲೆ ಬೀದರ ಆಗಿದ್ದು, ಬಚಾವತ್ ಆಯೋಗದ ತೀರ್ಪಿನ ಪ್ರಕಾರ 10 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ, ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಲೀಟರ್‌ಗಳಲ್ಲಿ ಮಾತ್ರವಲ್ಲದೇ ಪೈಪ್‌ಲೈನ್ ಮೂಲಕ ಕಳುಹಿಸಬಹುದಾದಷ್ಟು ಹಾಲು ಉತ್ಪಾದಿಸಬಹುದು. ಪ್ರತಿ ದಿನ 8 ಲಕ್ಷ ಲೀ. ಹಾಲು ಸಂಗ್ರಹಿಸುವ ಯೋಜನೆ ಕಾರ್ಯರೂಪಕ್ಕೆ ಬಾರದಿರುವುದು ಬೇಸರದ ಸಂಗತಿ ಎಂದರು.