Advertisement

ಗಡಿ ಚೆಕ್‌ ಪೋಸ್ಟ್‌ ಗಳಲ್ಲಿ ಮೂಲ ಸೌಲಭ್ಯ

04:28 PM Apr 28, 2021 | Team Udayavani |

ಅಫಜಲಪುರ: ಕೋವಿಡ್‌ ನಿಯಂತ್ರಣಕ್ಕಾಗಿ ತಾಲೂಕಿನ ಅರ್ಜುಣಗಿ, ಮಾಶಾಳ, ಬಳೂರ್ಗಿ ಗ್ರಾಮಗಳಲ್ಲಿ ನಿರ್ಮಿಸಿರುವ ಚೆಕ್‌ ಪೋಸ್ಟ್‌ಗಳು ನಾಮಕೇವಾಸ್ತೆ ಎನ್ನುವಂತಾಗಿದ್ದು, ಮೂಲಭೂತ ಸೌಲಭ್ಯ ಕಲ್ಪಿಸುವ ಅವಶ್ಯಕತೆಯಿದೆ. ಹೊರರಾಜ್ಯಗಳಿಂದ ತಾಲೂಕಿಗೆ ಪ್ರವೇಶ ಪಡೆಯುವ ಜನರ ಮೇಲೆ ಚೆಕ್‌ ಪೋಸ್ಟ್‌ ಸಿಬ್ಬಂದಿ ನಿಗಾ ಇಡುತ್ತಿದ್ದಾರೆ.

Advertisement

ಆದರೆ ಚೆಕ್‌ಪೋಸ್ಟ್‌ಗಳಲ್ಲಿ ಸಮರ್ಪಕ ಸೌಲಭ್ಯಗಳು ಇಲ್ಲದ್ದರಿಂದ ಸಿಬ್ಬಂದಿ ಪರದಾಡುವಂತೆ ಆಗಿದೆ. ಸಂಬಂಧಪಟ್ಟವರು ಕೂಡಲೇ ಚೆಕ್‌ ಪೋಸ್ಟ್‌ಗಳಲ್ಲಿ ಸಕಲ ರೀತಿಯ ಸೌಲಭ್ಯ ಕಲ್ಪಿಸಬೇಕು. ಅಂದಾಗ ಎಲ್ಲರ ಮೇಲೂ ನಿಗಾ ಇಡಲು ಮತ್ತು ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸಾಧ್ಯವಾಗುತ್ತದೆ. ವಿದ್ಯುತ್‌-ಟಾರ್ಚ್‌ ಸಮಸ್ಯೆ: ತಾಲೂಕಿನ ಮೂರು ಚೆಕ್‌ಪೋಸ್ಟ್‌ ಪೈಕಿ ಅರ್ಜುಣಗಿ ಚೆಕ್‌ಪೋಸ್ಟ್‌ನಲ್ಲಿ ವಿದ್ಯುತ್‌ ಸಮಸ್ಯೆಯಿದೆ. ಇಲ್ಲಿ ಕೇವಲ ಸೋಲಾರ ವಿದ್ಯುತ್‌ ಬಲ್ಬ್ ಅಳವಡಿಸಿದ್ದರಿಂದ ರಾತ್ರಿ ಸರಿಯಾಗಿ ಬೆಳಕು ನೀಡುತ್ತಿಲ್ಲ. ಅರ್ಧಂಬರ್ಧ ಬೆಳಕಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ದೂರದಿಂದ ಬರುವ ವಾಹನಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಮಾಶಾಳ, ಬಳೂರ್ಗಿ ಚೆಕ್‌ಪೋಸ್‌ rಗಳಲ್ಲಿ ವಿದ್ಯುತ್‌ ಸಂಪರ್ಕವಿದ್ದರೂ ಸಿಬ್ಬಂದಿ ಕೈಯಲ್ಲೊಂದು ಟಾರ್ಚ್‌ ವ್ಯವಸ್ಥೆ ಆಗಬೇಕು. ದೂರದಿಂದ ಬರುವ ವಾಹನಗಳ ಮೇಲೆ ನಿಗಾ ಇಡಲು ಟಾರ್ಚ್‌ ಅವಶ್ಯಕತೆ ಇದೆ. ಅಲ್ಲದೇ ವಾಹನಗಳ ನಂಬರ್‌ ನೋಡಲು ಟಾರ್ಚ್‌ ಬೇಕೇ ಬೇಕು. ಮಳೆಗಾಲದಲ್ಲಿ ತೊಂದರೆ: ಬೇಸಿಗೆ ಬಿರು ಬಿಸಿಲಿನಲ್ಲಿ ತಗಡಿನ ಶೆಡ್‌ಗಳಲ್ಲೇ ಮೈಯೊಡ್ಡಿ ಕೆಲಸ ಮಾಡಿದ ಸಿಬ್ಬಂದಿ ಇನ್ನು ಮಳೆಗಾಲದಲ್ಲಿ ಇನ್ನೊಂದು ಸಮಸ್ಯೆ ಅನುಭವಿಸುವಂತೆ ಆಗುತ್ತದೆ. ಮಳೆ ನೀರು ಚೆಕ್‌ಪೋಸ್ಟ್‌ ತುಂಬಾ ತುಂಬಿಕೊಳ್ಳುತ್ತದೆ. ಇರುವ ಶೆಡ್‌ ಗಳಿಗೆ ಹಿಂಬದಿ ಮತ್ತು ಅಕ್ಕ ಪಕ್ಕ ಕಿಟಕಿ ವ್ಯವಸ್ಥೆ ಮಾಡಿದರೆ, ಮಳೆ ನೀರು ಒಳಗೆ ಬರುವುದಿಲ್ಲ.

ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಿದೆ. ಈಡೇರಿಲ್ಲ ಸಂಸದರ ಭರವಸೆ: ಕಳೆದ ವರ್ಷ ನಿರ್ಮಿಸಿದ್ದ ಚೆಕ್‌ಪೋಸ್ಟ್‌ ಮಳೆ ಮತ್ತು ಬಿರುಗಾಳಿ ಹೊಡೆತಕ್ಕೆ ಸಿಲುಕಿ ಹಾರಿ ಹೋಗಿತ್ತು. ಅಲ್ಲದೇ ಚೆಕ್‌ಪೋಸ್ಟ್‌ ಸಿಬ್ಬಂದಿಗೆ ಗಾಯಗಳಾಗಿದ್ದವು. ಈ ವೇಳೆ ಗುಣಮಟ್ಟದ ಹೊಸ ಚೆಕ್‌ ಪೋಸ್ಟ್‌ ನಿರ್ಮಿಸಲಾಗುತ್ತದೆ. ಸಿಬ್ಬಂದಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಸಂಸದ ಡಾ| ಉಮೇಶ ಜಾಧವ ಭರವಸೆ ನೀಡಿದ್ದರು. ಈ ಭರವಸೆ ಇನ್ನೂ ಈಡೇರಿಲ್ಲ. ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next