ಗಜೇಂದ್ರಗಡ: ಪಟ್ಟಣದ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆಗೆ ಕ್ರೀಡಾ ಸಾಮಗ್ರಿಗಳು, ಕುಡಿಯುವ ನೀರು, ಶೌಚಾಲಯ ಸೇರಿ ಮೂಲ ಸೌಲಭ್ಯ ದೊರೆತ ಹಿನ್ನೆಲೆಯಲ್ಲಿ ಮಕ್ಕಳ ಬಯಲು ಶೌಚಕ್ಕೆ ಮುಕ್ತಿ ದೊರೆತಂತಾಗಿದೆ. ಕಳೆದ ವರ್ಷದಿಂದ ಪಟ್ಟಣದಲ್ಲಿ ಆರಂಭವಾಗಿರುವ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 116ಕ್ಕೂ ಅಧಿಕ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಇವರಿಗೆ ಕನಿಷ್ಠ ಸೌಲಭ್ಯಗಳು ಮರಿಚಿಕೆಯಾಗಿದ್ದವು. ಜು. 19ರಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಗಡ್ಡಪ್ಪ ಜಿಗಳಿಕೊಪ್ಪ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ಅವ್ಯವಸ್ಥೆ ಕಂಡು, ಇನ್ನೊಂದು ವಾರದಲ್ಲಿ ಎಲ್ಲ ಮೂಲ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರನ್ವಯ ಇದೀಗ ಶಾಲೆಗೆ ಶುದ್ಧ ಕುಡಿಯುವ ನೀರು ಒದಗಿಸಲಾಗಿದೆ. ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳ ಕ್ರೀಡಾ ಚಟುವಟಿಕೆಗಾಗಿ ಕ್ರೀಡಾ ಸಾಮಗ್ರಿಗಳನ್ನು ನೀಡಲಾಗಿದೆ. ಇದಲ್ಲದೇ ಶಿಕ್ಷಕರು ಕುಳಿತುಕೊಳ್ಳಲು ಖುರ್ಚಿಗಳನ್ನು ಪೂರೈಸಲಾಗಿದೆ. ಶೀಘ್ರದಲ್ಲೇ ಮಕ್ಕಳು ಕುಳಿತುಕೊಳ್ಳುವ ಡೆಸ್ಕ್ಗಳು ಮತ್ತು ಸಮವಸ್ತ್ರ ಒದಗಿಸಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಗಡ್ಡಪ್ಪ ಜಿಗಳಿಕೊಪ್ಪ ತಿಳಿಸಿದ್ದಾರೆ.