Advertisement

ಜಾಗೀರನಂದಿಹಾಳ ಜನರಿಗೆ ಬಸಿ ನೀರಿನ ಬಿಸಿ!

03:31 PM Oct 22, 2019 | Suhan S |

ಲಿಂಗಸುಗೂರು: ತಾಲೂಕಿನ ಜಾಗೀರ ನಂದಿಹಾಳ ಗ್ರಾಮದಲ್ಲಿ ಬಸಿ ನೀರಿನಿಂದಾಗಿ ಗ್ರಾಮಸ್ಥರು ನೂರೆಂಟು ಸಮಸ್ಯೆ ಎದುರಿಸುವಂತಾಗಿದೆ.

Advertisement

ಚಿತ್ತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಗೀರ ನಂದಿಹಾಳ ಗ್ರಾಮ ತಗ್ಗು ಪ್ರದೇಶದಲ್ಲಿದೆ. ಗ್ರಾಮದಲ್ಲಿ 170ಕ್ಕೂ ಹೆಚ್ಚು ಮನೆಗಳಿವೆ. ಈ ಪೈಕಿ ಸುಮಾರು 90ಕ್ಕೂ ಅಧಿಕ ಮನೆಗಳಲ್ಲಿ ನೀರು ಬಸಿಯುತ್ತತ್ತಿದ್ದು, ಗ್ರಾಮಸ್ಥರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.

ಗ್ರಾಮಕ್ಕೆ ಹೊಂದಿಕೊಂಡು ಹಳ್ಳವಿದೆ. ಅಲ್ಲದೇ ರಾಂಪುರ ಏತ ನೀರಾವರಿ ಯೋಜನೆಯ ನಾಲೆ ನಿರ್ಮಿಸಲಾಗಿದೆ. ನಾಲೆಯಲ್ಲಿ ನೀರಿದ್ದಾಗ ಮತ್ತು ನಿರಂತರ ಮಳೆ ಸುರಿಯಲು ಆರಂಭಿಸಿದರೆ ಗ್ರಾಮದ 90ಕ್ಕೂ ಹೆಚ್ಚು ಮನೆಗಳ ಗೋಡೆಗಳಿಂದ ನೀರು ಚಿಮ್ಮುತ್ತಿದೆ. ಇದರಿಂದ ಮನೆ ಒಳಗೆ ಮತ್ತು ಅಂಗಳದಲ್ಲಿ ನೀರು ನಿಲ್ಲುತ್ತದೆ. ಮನೆಯೊಳಗೆ ಎರಡು ಅಡಿವರೆಗೂ ನೀರು ಸಂಗ್ರಹವಾಗುತ್ತದೆ. ನಿವಾಸಿಗಳು ಈ ನೀರನ್ನು ಮೋಟಾರ್‌ ಇಲ್ಲವೇ ಬಕೆಟ್‌ ನಿಂದ ತುಂಬಿ ಹೊರಚೆಲ್ಲುವುದು ನಿತ್ಯ ಕಾಯಕವಾಗಿದೆ.

ಮನೆಯ ಗೋಡೆಗಳು ಕನಿಷ್ಠವೆಂದರೂ ಮೂರು ಅಡಿ ಎತ್ತರದವರೆಗೆ ತೇವಾಂಶ ಹೊಂದಿರುತ್ತವೆ. ಹೀಗಾಗಿ ಅನೇಕ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡು ನೆಲಕ್ಕುರುಳಿವೆ. ಸ್ವಂತ ಮನೆ ಬಿಟ್ಟು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸುತ್ತಾರೆ ಬಸಿ ನೀರಿನಿಂದ ಬಾಧಿತರಾದ ಗ್ರಾಮಸ್ಥರು. ಮನೆಗಳಲ್ಲಿ ನಿಲ್ಲುವ ನೀರನ್ನು ನಿವಾಸಿಗಳು ಹೊರ ಚೆಲ್ಲುವುದರಿಂದ ಮತ್ತು ರಸ್ತೆಗಳಲ್ಲೂ ಬಸಿ ನೀರು ನಿಲ್ಲುವುದರಿಂದ ರಸ್ತೆಗಳು ಕೆಸರುಗದ್ದೆಯಂತಾಗಿದೆ.  ಜನ, ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ.

ಇನ್ನು ಗ್ರಾಮದಲ್ಲಿನ ಚರಂಡಿ ಸ್ವತ್ಛ ಮಾಡದ್ದರಿಂದ ರಸ್ತೆಗಳಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆ ಹಾವಳಿ ಹೆಚ್ಚಿದೆ. ಡೆಂಘೀ, ಚಿಕೂನ್‌ ಗುನ್ಯಾ ಸೇರಿ ವಿವಿಧ ಸಾಂಕ್ರಾಮಿಕ ರೋಗ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ. ಸದಾ ತೇವಾಂಶದಿಂದಾಗಿ ಗ್ರಾಮಸ್ಥರಿಗೆ ಚರ್ಮರೋಗ ಕೂಡ ಕಾಡುತ್ತಿದೆ. ಇಷ್ಟೆಲ್ಲ ಸಮಸ್ಯೆಯಿದ್ದರೂ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಗ್ರಾಮವನ್ನು ತಾತ್ಸಾರದಿಂದ ಕಾಣುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಬಸಿ ನೀರಿನ ಸಮಸ್ಯೆ ಇಂದು, ನಿನ್ನೆಯದಲ್ಲಾ ಇದು ರಾಂಪುರ ಏತ ನೀರಾವರಿ ಯೋಜನೆ ಪ್ರಾರಂಭವಾದಾಗಿನಿಂದ ಗ್ರಾಮಸ್ಥರನ್ನು ಕಾಡುತ್ತಿದೆ. ತಾಲೂಕು ಕೇಂದ್ರದಿಂದ 16 ಕಿ.ಮೀ. ದೂರವಿರುವ ಈ ಗ್ರಾಮದ ಸಮಸ್ಯೆ ಪರಿಹರಿಸುವಲ್ಲಿ ತಾಲೂಕು ಆಡಳಿತವೂ ನಿರ್ಲಕ್ಷ ವಹಿಸಿದೆ ಎನ್ನುತ್ತಾರೆ ಗ್ರಾಮಸ್ಥರು.

Advertisement

 

-ಶಿವರಾಜ ಕೆಂಬಾವಿ

Advertisement

Udayavani is now on Telegram. Click here to join our channel and stay updated with the latest news.

Next