ದೊಡ್ಡಬಳ್ಳಾಪುರ: ಹಿಂದೆ ಭತ್ತ ಬೆಳೆಯುತ್ತಿದ್ದ ಬಾಶೆಟ್ಟಿಹಳ್ಳಿಯಲ್ಲಿ ಇಂದು ಕೈಗಾರಿಕೆಗಳು ಸ್ಥಾಪನೆಯಾಗಿ ಬೆಳೆಯೇ ಇಲ್ಲವಾಗಿದೆ. ಆದರೆ ಕುಡಿಯುವ ನೀರಿಗಾದರೂ ಕೆರೆ ಉಳಿಸಿಕೊಳ್ಳಬೇಕು ಎಂದು ಸಾಕಷ್ಟು ಬಾರಿ ಪ್ರಯತ್ನಪಟ್ಟಿದ್ದರು ಸಾಧ್ಯವಾಗಿರಲಿಲ್ಲ.ನಮ್ಮ ಕಣ್ಣ ಮುಂದೆಯೇ ನೋಡ ನೋಡುತ್ತಲೇ ಕೆರೆ ಒಣಗಿ ಹೋಗಿದ್ದನ್ನು ನೋಡಿ ವ್ಯಸನಪಟ್ಟಿದ್ದೆವು. ಈಗ ಕೆರೆ ನೋಡಿದರೆ ಮತ್ತೆ ಹಳೆಯ ನೆನಪುಗಳು ಮರುಕಳಿಸುತ್ತಿವೆ ಎಂದು ಗ್ರಾಪಂ ಸದಸ್ಯ ಬಿ.ಕೃಷ್ಣಪ್ಪ ಹೇಳಿದರು.
ಬಾಶೆಟ್ಟಿಹಳ್ಳಿ ಗ್ರಾಪಂ, ಕೆರೆ ಸಂರಕ್ಷಣಾ ಸಮಿತಿ ಸಹಯೋಗದಲ್ಲಿ, ಕೈಗಾರಿಕೆಗಳು, ಸಾರ್ವಜನಿಕರು ಹಾಗೂ ವತಿಯಿಂದ ಅಭಿವೃದ್ಧಿಗೊಳಿಸಲಾದ ಬಾಶೆಟ್ಟಿಹಳ್ಳಿ ಕೆರೆ ಪುನಶ್ಚೇತನ ಸಂಭ್ರಮಾಚರಣೆಯಲ್ಲಿ ಮಾತನಾಡಿದರು.
ಜಿಲ್ಲಾಧಿಕಾರಿಯಿಂದ ತುಂಬಿದ ಕೆರೆ: ಕೆರೆ ಅಂಗಳದಲ್ಲಿ ದನ, ಕುರಿಗಳು ಮೇಯುತ್ತ ಇದ್ದ ದಿನಗಳು ಮತ್ತೆ ಬರುತ್ತದೆಯೇ? ಕೆರೆಯಲ್ಲಿ ನೀರು ನಿಲ್ಲುವುದನ್ನು ನಮ್ಮ ಜೀವಿತ ಕಾಲದಲ್ಲಿಯೇ ಮತ್ತೆ ನೋಡಲು ಸಾಧ್ಯವ ಎನ್ನುವಂತಾಗಿತ್ತು. ಬಾಶೆಟ್ಟಿಹಳ್ಳಿಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾದ ನಂತರ ಕೆರೆ ನಿಧಾನವಾಗಿ ಹೂಳು ತುಂಬಿಕೊಳ್ಳುತ್ತ, ಕೊಳಚೆ ನೀರಿನಿಂದ ತುಂಬಿಕೊಳ್ಳುತ್ತ, ಕೆರೆ ಅಂಗಳದಲ್ಲಿ ಜಾಲಿ ಮರ ಸೇರಿದಂತೆ ಬೇಡವಾದ ಗಿಡಗಳು ಬೆಳೆಯಲಾರಂಭಿಸಿದವು ಎಂದರು.
2 ದಿನದಲ್ಲಿ ಅಭಿವೃದ್ಧಿ: ಕೆರೆಯಲ್ಲಿ ಮಣ್ಣು ತುಂಬಿಕೊಳ್ಳಲು ಹಲವಾರು ಜನ ಅಡ್ಡಾದಿಡ್ಡಿಯಾಗಿ ಬೃಹತ್ ಗುಂಡಿಗಳು ತೋಡಿದ್ದರು. ಕೆರೆಯನ್ನು ಹೇಗಾದರೂ ಮಾಡಿ ಅಭಿವೃದ್ಧಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ಅವರ ಬಳಿ ಕೆರೆ ಅಭಿವೃದ್ಧಿ ಕುರಿತು ಪ್ರಸ್ತಾಪಿಸಿದ ಎರಡೇ ದಿನಗಳಲ್ಲಿ ವಿಶ್ವ ಜಲದಿನಾಚರಣೆ ದಿನ ಕಾಮಗಾರಿಯನ್ನೇ ಪ್ರಾರಂಭಿಸಿದರು. ಈಗ ನೋಡಿದರೆ ನಮ್ಮೂರಿನ ಕೆರೆಯಲ್ಲಿ ನೀರು ನಿಂತಿದ್ದು ಎಲ್ಲರೂ ಕೆರೆ ಅಂಚಿನಲ್ಲಿ ನಿಂತು ಸಂಭ್ರಮಪಡುವಂತಾಗಿದೆ ಎಂದರು.
ಸಂತಸ ತಂದಿದೆ: ಬಾಶೆಟ್ಟಿಹಳ್ಳಿ ಕೈಗಾರಿಕೋದ್ಯಮಿಗಳ ಸಂಘದ ಸಿಇಒ ಆಂಜನೇಯಲು ಮಾತನಾಡಿ, 80ರ ದಶಕದಲ್ಲಿ ಬಾಶೆಟ್ಟಿಹಳ್ಳಿಯಲ್ಲಿ ಕೈಗಾರಿಕೆಗಳು ಹೊಸದಾಗಿ ಸ್ಥಾಪನೆಯಾಗುತ್ತಿದ್ದ ಕಾಲದಲ್ಲಿ ಇಲ್ಲಿನ ಕೆರೆ ಹಾಗೂ ಕೆರೆಯ ಮುಂಭಾಗದ ಕಾಲುವೆಗಳಲ್ಲಿ ಸದಾ ನೀರು ಹರಿಯುತ್ತಿದ್ದವು. ಆದರೆ ಕೈಗಾರಿಕಾ ಪ್ರದೇಶ ಬೃಹತ್ ಆಗಿ ಬೆಳೆದ ನಂತರ ಕೆರೆ ಎಲ್ಲಿದೆ ಎನ್ನುವುದೇ ತಿಳಿಯದಂತೆ ಹಾಳಾಗಿತ್ತು. ಕೆರೆ ಅಭಿವೃದ್ಧಿಗೆ ಹಲವಾರು ಬಾರಿ ಸಭೆಗಳನ್ನು ನಡೆಸಿದ್ದರೂ ಸಹ ಸರ್ಕಾರದ ವಿವಿಧ ಇಲಾಖೆಗಳಿಂದ ಅನುಮತಿಯೇ ದೊರೆತಿರಲಿಲ್ಲ. ಆದರೆ ಜಿಲ್ಲಾಧಿಕಾರಿಗಳ ಆಸಕ್ತಿಯಿಂದಾಗಿ ಕೈಗಾರಿಕೆಗಳವರು ಸೇರಿದಂತೆ ಎಲ್ಲರೂ ಸಹಕಾರ ನೀಡಿದ್ದು ಕೆರೆ ಸುಂದರವಾಗಿ ಅಭಿವೃದ್ಧಿಗೊಂಡಿರುವುದನ್ನು ನೋಡಿದರೆ ಸಂತಸವಾಗಿದೆ ಎಂದರು.
ಕೆರೆ ಸಂರಕ್ಷಣೆಗೆ ಒಳ್ಳೆಯ ಉದಾಹರಣೆ: ಡಬ್ಲ್ಯೂಡಬ್ಲ್ಯೂಎಫ್-ಇಂಡಿಯಾವು ನೋಕಿ ಯಾದ ಪಾಲುದಾರಿಕೆಯಲ್ಲಿ, ಕೆರೆಗಳ ಸಂರಕ್ಷಣೆಯಲ್ಲಿ ತೊಡಗಿದ್ದು ಬಾಶೆಟ್ಟಿಹಳ್ಳಿ ಕೆರೆ ಅಭಿವೃದ್ಧಿಯು ಸಮುದಾಯ ನೇತೃತ್ವದ ಕೆರೆ ಸಂರಕ್ಷಣೆಗೆ ಒಳ್ಳೆಯ ಉದಾಹರಣೆ. ಗ್ಲೋಬಲ್ ವೆಟ್ಲ್ಯಾಂಡ್ ಔಟ್ಲುಕ್ 2018 ರ ಪ್ರಕಾರ, ಕೆರೆಗಳ ನಾಶವು ಅರಣ್ಯಗಳಿಗಿಂತ ಮೂರು ಪಟ್ಟು ವೇಗವಾಗಿ ಆಗುತ್ತಿದೆ. ಹಾಗಿದ್ದರೂ, ಬಾಶೆಟ್ಟಿಹಳ್ಳಿ ಕೆರೆ ಇದಕ್ಕೆ ವ್ಯತಿರಿಕ್ತವಾಗಿ ಮಹೋನ್ನತ ಉದಾಹರಣೆಯಾಗಿ ಕಂಗೊಳಿಸುತ್ತಿದೆ ಎಂದು ಡಬ್ಲ್ಯೂಡಬ್ಲ್ಯೂಎಫ್-ಇಂಡಿಯಾದ ನದಿ, ಕೆರೆ ಹಾಗೂ ಜಲ ನಿಯಮ ಯೋಜನೆಯ ನಿರ್ದೇಶಕ ಸುರೇಶ ಬಾಬು ತಿಳಿಸಿದರು.
ಬಾಶೆಟ್ಟಿಹಳ್ಳಿ ಕೈಗಾರಿಕಾ ಸಂಘಗಳ ಅಧ್ಯಕ್ಷ ಗುಲ್ಲಟ್ಟಿ, ಬಾಶೆಟ್ಟಿಹಳ್ಳಿ ಗ್ರಾಪಂ ಅಧ್ಯಕ್ಷೆ ನಾರಾಯಣಮ್ಮಗುಂಡಪ್ಪ, ಉಪಾಧ್ಯಕ್ಷೆ ಶಿಲ್ಪಮುನಿಶಂಕರ್, ಡಬ್ಲ್ಯೂ ಡಬ್ಲ್ಯೂ ಎಫ್ ನಿರ್ದೇಶಕ ಸುರೇಶ್ ಬಾಬು, ತಾಪಂ ಸದಸ್ಯ ಚಿಕ್ಕಆಂಜಿನಪ್ಪ, ಗ್ರಾಪಂ ಸದಸ್ಯ ಮುನಿರಾಜು, ರಾಮಾಂಜಿನಪ್ಪ ಇದ್ದರು.
ಕೆರೆ ಅಂಚಿನಲ್ಲಿ ಸಸಿಗಳನ್ನು ನೆಡಲಾಯಿತು. ಜವಾಹರ್ ನವೋದಯ ವಿದ್ಯಾಲಯದ ಹಾಗೂ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ನೀರಿನ ಮಹತ್ವ ಕುರಿತು ನಾಟಕ ಪ್ರದರ್ಶನ ನಡೆಯಿತು. ಡಬ್ಲ್ಯೂ ಡಬ್ಲ್ಯೂ ಎಫ್ ಅಧಿಕಾರಿ ವೈ.ಟಿ.ಲೋಹಿತ್ ಕಾರ್ಯಕ್ರಮ ನಿರ್ವಹಿಸಿದರು.