Advertisement

ಬೇಸ್‌ಬಾಲ್‌: ಭಾರತ ತಂಡದ ಏಕೈಕ ಕನ್ನಡತಿ ಕೊಡಗಿನ ಭವ್ಯಾ

07:40 AM Aug 14, 2017 | Team Udayavani |

ಸೋಮವಾರಪೇಟೆ: ಮೂಲತಃ ಅಮೇರಿಕಾದ ಕ್ರೀಡೆಯಾಗಿದ್ದು, ಭಾರತದಲ್ಲಿ ಅಪರಿಚಿತವಾಗಿಯೇ ಉಳಿದಿರುವ ಬೇಸ್‌ಬಾಲ್‌ನಲ್ಲಿ ಭಾರತ ತಂಡವನ್ನು ಕೊಡಗಿನ ಕುವರಿ ಪ್ರತಿನಿಧಿಸುತ್ತಿದ್ದಾಳೆ. ಸಾಮಾನ್ಯವಾಗಿ ಕ್ರಿಕೆಟ್‌ ಆಟವನ್ನೇ ಹೋಲುವಂತಹ ಬೇಸ್‌ಬಾಲ್‌ ಕ್ರೀಡೆಯ ಬಗ್ಗೆ ಅರಿವು ಹೊಂದಿರುವವರು ವಿರಳ ವಾಗಿದ್ದು ಕೊಡಗಿನ ಮಟ್ಟಿಗಂತೂ ಈ ಕ್ರೀಡೆ ಅಪರಿಚಿತವೇ ಸರಿ.

Advertisement

ಇಂತಹ ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಹಂತ ಹಂತವಾಗಿ ತರಬೇತಿ ಪಡೆದಿರುವ ಕೊಡಗಿನ ಯುವತಿ ಇದೀಗ ಭಾರತೀಯ ತಂಡಕ್ಕೆ ಆಯ್ಕೆ ಯಾಗಿದ್ದು, ಸೆಪ್ಟಂಬರ್‌ನಲ್ಲಿ ಹಾಂಗ್‌ಕಾಂಗ್‌ನಲ್ಲಿ ನಡೆಯಲಿರುವ ಏಷ್ಯಾ ಕಪ್‌ ಬೇಸ್‌ಬಾಲ್‌ ಟೂರ್ನಮೆಂಟ್‌ನಲ್ಲಿ ಭಾರತ ವನ್ನು ಪ್ರತಿನಿಧಿಸಲಿದ್ದಾರೆ.

ಮೂಲತಃ ಮೂರ್ನಾಡು ಬಾಡಗ ನಿವಾಸಿಯಾಗಿದ್ದು, ಸದ್ಯ ಸೋಮವಾರ ಪೇಟೆ ಸಮೀಪದ ಯಡವಾರೆಯ ತಂಗವಳ್ಳಿ ಎಸ್ಟೇಟ್‌ನಲ್ಲಿ ರೈಟರ್‌ ಆಗಿ ಕೆಲಸ ಮಾಡುತ್ತಿರುವ ಯು.ಬಿ. ಸುರೇಶ್‌ ಮತ್ತು ಯು.ಎಸ್‌.  ಇಂದಿರಾ ದಂಪತಿ ಪುತ್ರಿ ಯು.ಎಸ್‌. ಭವ್ಯಾ ಅವರು ಅಪರಿಚಿತ ಕ್ರೀಡೆಯಲ್ಲಿ ಸಾಧನೆ ತೋರಿರುವ ಕ್ರೀಡಾಪಟು.

ವಿರಾಜಪೇಟೆಯ ಸೈಂಟ್‌ ಆನ್ಸ್‌ನಲ್ಲಿ ಪ್ರೌಢಶಾಲೆ ಶಿಕ್ಷಣ, ಕಾವೇರಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿದ ಭವ್ಯಾ ಅನಂತರ ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡಿದ್ದಾರೆ. 

ಕಳೆದ 2016ರಲ್ಲಿ ಬೆಂಗಳೂರಿನ ಸಾಯಿ ಕ್ರೀಡಾ ಶಾಲೆಯಲ್ಲಿ ನಡೆದ ಬೇಸ್‌ಬಾಲ್‌ ವರ್ಲ್ಡ್ ಕಪ್‌ ಕ್ಯಾಂಪ್‌ನಲ್ಲಿ ಭಾಗವಹಿಸಿ ಉತ್ತೀರ್ಣರಾದರೂ ಸಹ ವಿದೇಶಕ್ಕೆ ತೆರಳಲು ಅಸಾಧ್ಯವಾಗಿತ್ತು. ಅನಂತರ ಒಂದು ವರ್ಷಗಳ ಕಾಲ ಕಠಿನ ಅಭ್ಯಾಸ ಮಾಡಿದ ಫ‌ಲವಾಗಿ ಈ ಬಾರಿಯೂ ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಬೇಸ್‌ಬಾಲ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.

Advertisement

ಸೆಪ್ಟಂಬರ್‌ 2ರಿಂದ 7ರ ವರೆಗೆ ಹಾಂಗ್‌
ಕಾಂಗ್‌ನಲ್ಲಿ ನಡೆಯುವ ಏಷ್ಯಾ ಕಪ್‌ ಬೇಸ್‌ಬಾಲ್‌ ಟೂರ್ನಮೆಂಟ್‌ನಲ್ಲಿ ಭಾಗವಹಿಸು ತ್ತಿರುವ ಭವ್ಯಾ ಪ್ರತಿನಿಧಿಸುತ್ತಿ ರುವ ಭಾರತ ತಂಡದೊಂದಿಗೆ ಜಪಾನ್‌, ಹಾಂಗ್‌ಕಾಂಗ್‌, ಪಾಕಿಸ್ಥಾನ, ನೆದರ್‌ಲ್ಯಾಂಡ್‌, ನೇಪಾಳ ತಂಡಗಳು ಭಾಗವಹಿಸಲಿವೆ. ಭವ್ಯಾ ಅವರಿಗೆ ಬೆಂಗಳೂರಿನಲ್ಲಿ ಸಾಯಿ ಕ್ರೀಡಾ ತರಬೇತಿ ಶಾಲೆಯ ಹಿರಿಯ ತರಬೇತುದಾರ ಗೋಪಿನಾಥ್‌ ಅವರು ತರಬೇತಿ ನೀಡಿದ್ದಾರೆ.

ಹಲವಷ್ಟು ಮಂದಿಗೆ ತಿಳಿದೇ ಇಲ್ಲದ ಕ್ರೀಡೆಯಲ್ಲಿ ತಾನು ಆಸಕ್ತಿ ವಹಿಸಿ ಕಠಿಣ ಪರಿಶ್ರಮ, ತರಬೇತುದಾರರ ಉತ್ತಮ ತರಬೇತಿ, ಪೋಷಕರ ಪ್ರೋತ್ಸಾಹದಿಂದ ಭಾರತ ತಂಡಕ್ಕೆ ಆಯ್ಕೆಯಾಗಿರುವದು ಸಂತಸ ತಂದಿದ್ದು, ಉತ್ತಮ ಪ್ರದರ್ಶನ ನೀಡುವ ಆಶಯ ಹೊಂದಿದ್ದೇನೆ ಎಂದು ಭವ್ಯಾ ಸಂತಸ ಹಂಚಿಕೊಂಡಿದ್ದಾರೆ. 2020ರಲ್ಲಿ ನಡೆಯುವ ಒಲಂಪಿಕ್ಸ್‌ಗೂ
ನೂತನವಾಗಿ ಬೇಸ್‌ಬಾಲ್‌ ಸೇರ್ಪಡೆ ಗೊಂಡಿದೆ. ಹಾಂಗ್‌ಕಾಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಒಲಂಪಿಕ್ಸ್‌ ನಲ್ಲೂ ಈಕೆ ಭಾರತವನ್ನು ಪ್ರತಿನಿಧಿಸಲಿ ಎಂದು ಹಾರೈಸೋಣ. 

Advertisement

Udayavani is now on Telegram. Click here to join our channel and stay updated with the latest news.

Next