Advertisement
ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಹೂವಿನಹೆಡಗಿ ಗ್ರಾಮದ ನದಿ ತೀರದಲ್ಲಿನ ಶ್ರೀ ಗಡ್ಡೆಗೂಳಿ ಬಸವೇಶ್ವರ ದೇಗುಲ ಮುಳುಗಡೆ ಆಗಿದ್ದು, ದೇವಸ್ಥಾನದಲ್ಲಿ ಪ್ರತಿ ಸೋಮವಾರ ನಡೆಯುವ ವಿಶೇಷ ಪೂಜೆ, ಪುನಸ್ಕಾರ ಸ್ಥಗಿತವಾಗಿವೆ. ಯಾವುದೇ ಸಂದರ್ಭದಲ್ಲಾದರೂ ನಾರಾಯಣಪುರ ಬಸವಸಾಗರ ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನದಿ ದಂಡೆಯ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೊಪ್ಪರ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ, ಅಣೆಮಲ್ಲೇಶ್ವರ ದೇವಸ್ಥಾನದಲ್ಲಿ ಮುಂಜಾಗ್ರತಾ ಕ್ರಮ ವಹಿಸುವಂತೆ ತಾಲೂಕು ಆಡಳಿತ ದೇವಸ್ಥಾನ ಮಂಡಳಿಗಳಿಗೆ ಎಚ್ಚರಿಸಿದೆ.
ನದಿಗೆ ಇಳಿಯಬೇಡಿ: ಬಸವಸಾಗರ ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದ್ದರಿಂದ ನದಿ ಮೈದುಂಬಿ ಹರಿಯುತ್ತಿದ್ದು, ತಾಲೂಕು ಆಡಳಿತ ನದಿಗೆ ಇಳಿಯದಂತೆ ನದಿ ತೀರದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದೆ.
ತಾಲೂಕಿನ ಕೃಷ್ಣಾನದಿ ತೀರದ ನಿಲವಂಜಿ, ಲಿಂಗದಹಳ್ಳಿ, ಬಾಗೂರು, ಅಂಜಳ, ಅಂಚೆಸೂಗುರು, ಹೇರುಂಡಿ, ಗೋಪಾಳಪುರು, ವಗಂಡಬಳಿ, ಹೂವಿನಹೆಡಗಿ, ದೊಂಡಂಬಳಿ, ಕೊಣಚಪ್ಪಳ್ಳಿ, ಮ್ಯಾದರಗೋಳು, ಕರ್ಕಿಹಳ್ಳಿ, ಪರ್ತಾಪುರು, ಹೂನ್ನೂರು, ಅರಷಿಣಗೆ, ಹಿರೇರಾಯಕುಂಪಿ, ಕೂಳ್ಳೂರು, ಮದರಕಲ್ ಸೇರಿ ಇನ್ನಿತರ ಗ್ರಾಮಗಳ ನಿವಾಸಿಗಳಿಗೆ ನದಿ ಪ್ರವೇಶಕ್ಕೆ ಹೋಗದಂತೆ ತಾಲೂಕು ಆಡಳಿತ ಸೂಚನೆ ನೀಡಿದೆ. ದನಕರುಗಳಿಗೆ ನೀರು ಕುಡಿಸಲು ನದಿ ದಡಕ್ಕೆ ಹೋಗದಂತೆ ಎಚ್ಚರಿಕೆ ನೀಡಿದೆ. ನದಿ ಪ್ರವಾಹಕ್ಕೆ ಸಿಲುಕುವ ಗ್ರಾಮಗಳಲ್ಲಿ ಕಳೆದೆರಡು ದಿನಗಳಿಂದ ಗ್ರಾಮ ಲೆಕ್ಕಾಧಿಕಾರಿಗಳು ಬೀಡು ಬಿಟ್ಟಿದ್ದು ಗ್ರಾಮದಲ್ಲಿ ಕೈಗೊಳ್ಳುವ ಮುಂಜಾಗ್ರತಾ ಕ್ರಮದ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸುತ್ತಿದ್ದಾರೆ.
Related Articles
Advertisement