Advertisement

ಬಸವೇಶ್ವರ ಏತ ನೀರಾವರಿಗೆ ಪಾದಯಾತ್ರೆ

06:06 PM Jan 18, 2022 | Team Udayavani |

ಸಂಬರಗಿ/ಅಥಣಿ: ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದೆ. ಸರ್ಕಾರ ಶೀಘ್ರ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಭಿಸಬೇಕು.

Advertisement

ಇಲ್ಲದಿದ್ದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಬೇಕೆಂದು ಬೀದಿಗಿಳಿದು ಹೋರಾಟ ಮಾಡುವುದಾಗಿ ಅಥಣಿ ತಾಲೂಕು ನ್ಯಾಯವಾದಿ ಸಂಘದ ಆಡಳಿತ ಮಂಡಳಿ ಸದಸ್ಯ ಹಾಗೂ ಹೋರಾಟಗಾರ ಎಸ್‌.ಎಸ್‌. ಪಾಟೀಲ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಖಿಳೇಗಾಂವ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಪಕ್ಷಾತೀತವಾಗಿ ಖೀಳೇಗಾಂವ ಬಸವೇಶ್ವರ ಏತ ನೀರಾವರಿ ಪಾದಯಾತ್ರೆ ಹೋರಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಹಾಗೂ ನೀರಾವರಿ ಕುರಿತು ಯಾವುದೇ ಚರ್ಚೆಯಾಗಿಲ್ಲ. ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆಗಣಿಸಿದೆ. ಖೀಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ಮಾರ್ಚ್‌ 6, 2017ರಲ್ಲಿ ಚಾಲನೆ ನೀಡಲಾಗಿತ್ತು.

ಇಲ್ಲಿಯವರೆಗೆ ಒಟ್ಟು 84,482 ಕೋಟಿ ರೂ. ಖರ್ಚಾಗಿದೆ. ಕೆಲಸ ಪೂರ್ಣಗೊಳಿಸಲು 36 ತಿಂಗಳ ಅವಧಿ  ನಿಗದಿಪಡಿಸಿದ್ದರು. ಆದರೆ ಗುತ್ತಿಗೆದಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷದಿಂದ ನಿಧಾನಗತಿಯಿಂದ ನಡೆಯುತ್ತಿದೆ. ಸರ್ಕಾರ ಶೀಘ್ರ ಗಮನಹರಿಸಿ ಅನುದಾನ ಬಿಡುಗಡೆ ಮಾಡಿ ಬರಡು ಭೂಮಿ ನೀರಾವರಿ ಮಾಡಬೇಕು. ಈ ಬಗ್ಗೆ ಈಗಾಗಲೇ ರೈತರೆಲ್ಲ ಕೂಡಿಕೊಂಡ ಸರ್ವೋಚ್ಛ ನ್ಯಾಯಲಯ ಮತ್ತು ಉತ್ಛ ನ್ಯಾಯಲಯದಲ್ಲಿ ಸೇವೆ ಸಲ್ಲಿಸುತ್ತಿರುವ
ನ್ಯಾಯವಾದಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ.

Advertisement

ಈ ಬಗ್ಗೆ ಉಚ್ಛ ನ್ಯಾಯಲಯದಲ್ಲಿ ರಿಟ್‌ ಪಿಟಿಷನ್‌ ದಾಖಲಿಸುವ ಚಿಂತನೆ ನಡೆಸಿದ್ದೇವೆ ಎಂದರು.  ಅಥಣಿ ತಾಲೂಕು ನ್ಯಾಯವಾದಿ ಸಂಘದ ಅಧ್ಯಕ್ಷ ಎ.ಎಸ್‌. ಹುಚ್ಚಗೌಡರ ಮಾತನಾಡಿ, ನೀರಾವರಿ ಯೋಜನೆ ಪೂರ್ಣಗೊಳ್ಳುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಬರುವ ದಿನದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಕರವೇ ತಾಲೂಕು ಅಧ್ಯಕ್ಷ ಬಸನಗೌಡ ಪಾಟೀಲ ಮಾತನಾಡಿದರು. ಪಕ್ಷಾತೀತ ಹೋರಾಟಕ್ಕೆ ಬಸವೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ನಂತರ ತಹಶೀಲ್ದಾರ್‌ ಪರ ಕಂದಾಯ ನಿರೀಕ್ಷಕ ಟಿ.ಜಿ. ಕಲಾಟಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ನ್ಯಾಯವಾದಿಗಳಾದ ಬಿ.ಎಸ್‌. ಅಂಬಿ, ಸಂಜೀವ ಚಟ್ಟರಗಿ, ಕರವೇ ಮುಖಂಡ ಶಬ್ಬೀರ್‌ ಸಾತಬಚ್ಚೆ, ಅನಂತಪುರ ಗ್ರಾಪಂ ಅಧ್ಯಕ್ಷ ರುದ್ರಗೌಡ ಪಾಟೀಲ, ರೈತ ಸಂಘದ ತಾಲೂಕು ಅಧ್ಯಕ್ಷ ಮಹಾದೇವ ಮಡಿವಾಳ, ಖಿಳೇಗಾಂವ ಗ್ರಾಪಂ ಮಾಜಿ ಅಧ್ಯಕ್ಷ ರಮೇಶ ಪಾಟೀಲ, ರೈತ ಮುಖಂಡರಾದ ರವೀಂದ್ರ ರಜಪೂತ, ಕಿರಣ ಮಿಸಾಳ, ಮಲಗೌಡ ಪಾಟೀಲ, ಸಿದರಾಯ ಕರೋಲಿ, ಅಣ್ಣಾಸಾಹೇಬ ಪಾಟೀಲ, ಕಾಡಗೌಡ ಪಾಟೀಲ, ಗುರುಸ್ವಾಮಿ, ಆನಂದ ಜಾಧವ, ಪಿ.ಎನ್‌. ಚುನಮುರಿ, ಪಿ.ಎಸ್‌. ಕುಳ್ಳಳಿ, ಎಲ್‌.ಡಿ. ಹಳಿಂಗಳಿ, ಬಿ.ಎಂ. ಹಿಪ್ಪಲಕರ್‌, ಎ.ಎಂ. ಚಟ್ಟರಕಿ, ಬಿ.ಟಿ. ಕಾಂಬಳೆ ಇದ್ದರು.

ಹೆದ್ದಾರಿಯಲ್ಲಿ ಪ್ರತಿಭಟನೆ
ಅಥಣಿಯಿಂದ ಬಾಗಲಕೋಟೆಗೆ ಸ್ಥಳಾಂತರಗೊಂಡ ನೀರಾವರಿ ನಿಗಮ ಕಾರ್ಯಾಲಯ ಮರಳಿ ಅಥಣಿಗೆ ಸ್ಥಳಾಂತರ ಮಾಡುವಂತೆ ಖಿಳೇಗಾಂವ-ಅಥಣಿ ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಹೋರಾಟಕ್ಕೆ ಅಥಣಿ ತಾಲೂಕು ನ್ಯಾಯವಾದಿ ಸಂಘದಿಂದ ಬೆಂಬಲ ಸೂಚಿಸಲಾಯಿತು. ಖೀಳೇಗಾಂವ ಗ್ರಾಮದ ಪೊಲೀಸ್‌ ಪಾಟೀಲ ಹಾಗೂ ಕನ್ನಡ ಹೋರಾಟಗಾರರಾದ ಲಗಮಗೌಡ ಬಸಗೌಡ ಪಾಟೀಲ (80) ತಮ್ಮ ಇಳಿ ವಯಸ್ಸಿನಲ್ಲೂ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಮತ್ತಷ್ಟು ಹುರುಪು ತಂದರು.

Advertisement

Udayavani is now on Telegram. Click here to join our channel and stay updated with the latest news.

Next