Advertisement

ಬೆಳ್ಳಿ ಹಬ್ಬಕ್ಕೆ ಬಸವೇಶ್ವರ ಕಾಲೇಜು ಸಿದ್ಧ

11:25 AM Mar 16, 2019 | |

ಬಸವಕಲ್ಯಾಣ: ನಗರದ ಹೌಸಿಂಗ್‌ ಬೋರ್ಡ್‌ ಕಾಲೋನಿಯ ಬಸವೇಶ್ವರ ಚಿತ್ರಕಲಾ ಮಹಾವಿದ್ಯಾಲಯದ ಬೆಳ್ಳಿ ಹಬ್ಬ ಕಾರ್ಯಕ್ರಮ ಮಾ.29ರಂದು ಸಂಜೆ 7 ಗಂಟೆಗೆ ಹಳೆ ತಹಶೀಲ್‌ ಕಚೇರಿ ಆವರಣದಲ್ಲಿ ನಡೆಯಲಿದ್ದು, ತನ್ನಿಮಿತ್ತ ಸಮುದಾಯ ಭವನದಲ್ಲಿ ಮೂರು ದಿನಗಳ ಕಾಲ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿದೆ.

Advertisement

ಸರ್ಕಾರ ಹಾಗೂ ಸಂಘ ಸಂಸ್ಥೆಗಳ ಸಹಾಯವಿಲ್ಲದಿದ್ದರೂ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವ ಉದ್ದೇಶದಿಂದ 25 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಬಸವೇಶ್ವರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಬೆಳ್ಳಿ ಹಬ್ಬ ಕಾರ್ಯಕ್ರಮ ನಿಮಿತ್ತ ಬಳಕೆಗೆ ಬಾರದ ವಸ್ತುಗಳಿಂದ ಕಲಾಕೃತಿಗಳನ್ನು ತಯಾರಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ ನಡೆಯುತ್ತಿದ್ದು, ವಿಜೇತರಿಗೆ ಬಹುಮಾನ ನೀಡಲಾಗುತ್ತಿದೆ.

1994ರ ಜೂನ್‌ ತಿಂಗಳಲ್ಲಿ ಕೆಲವೇ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಕಾಲೇಜು ಇಂದು ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ಬೆಳೆದಿದೆ. ಇಲ್ಲಿ ಅಭ್ಯಾಸ ನಾಡಿದ ಬಹುತೇಕ ವಿದ್ಯಾರ್ಥಿಗಳು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರಾಗಿ ಮತ್ತು ಸ್ವಯಂ ಉದ್ಯೋಗಿಗಳಾಗಿ ಜೀವನ ಕಟ್ಟಿಕೊಂಡಿದ್ದಾರೆ. ಪ್ರತಿವರ್ಷ ಮಾರ್ಚ್‌ ನಲ್ಲಿ ನಡೆಯುವ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ನಾಡಿನ ಹಿರಿಯ ಕಲಾವಿದರಾದ ಶರಂಕಗೌಡ ಬೆಟ್ಟದೂರ, ಜೆ.ಎಸ್‌.ಖಂಡೇರಾವ್‌, ವಿ.ಜಿ.ಅಂದಾನಿ, ಬಸವರಾಜ ಹಾಗೂ ಅನೇಕ ಖ್ಯಾತನಾಮ ಕಲಾವಿದರು ಆಗಮಿಸಿ ಪ್ರಾತ್ಯಕ್ಷಿಕೆ-ಕಲಾಕೃತಿ ರಚನೆ ಮಾಡಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುತ್ತಾರೆ. ಇದಕ್ಕೆ ಇಲ್ಲಿ ಸಂಗ್ರಹಿಸಿದ ಚಿತ್ರ ಕಲಾಕೃತಿಗಳೇ ನಿದರ್ಶನ.

ಪ್ರತಿವರ್ಷ ಬೆಂಗಳೂರು ಹಾಗೂ ಕಲಬುರಗಿಯಲ್ಲಿ ನಡೆಯುವ ಚಿತ್ರಸಂತೆಯಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಕಲಾಕೃತಿಗಳು ಮತ್ತ ಕರಕುಶಲ ವಸ್ತುಗಳನ್ನು ಪ್ರದರ್ಶಿಸಿ ಕಲಾಸಕ್ತರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹಾಗಾಗಿ ಬೆಳ್ಳಿಹಬ್ಬ ಕಾರ್ಯಕ್ರಮ ನಿಮಿತ್ತ ಇಲ್ಲಿ ಕಲಿತ ವಿದ್ಯಾರ್ಥಿಗಳು ಆಗಮಿಸಿ ಉಪಯೋಗಕ್ಕೆ ಬಾರದ ವಸ್ತುಗಳನ್ನು ಬಳಸಿಕೊಂಡು ಮತ್ತು ಕ್ರಾಫ್ಟ್‌ ಮತ್ತು ವಿದ್ಯಾರ್ಥಿನಿಯರು ದಾರದಿಂದ ವಿವಿಧ ಗೊಂಬೆ, ಗೃಹ ಅಲಂಕಾರಿಕ ಸಾಮಗ್ರಿಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಅವು ಕಡಿಮೆ ದರದಲ್ಲಿ ಕಲಾಸಕ್ತರಿಗೆ ಸಿಗುವಂತೆ ಕಾರ್ಯ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

ಹಳೆ ವಿದ್ಯಾರ್ಥಿಗಳು ಸಿಮೆಂಟ್‌ನಿಂದ ತಯಾರಿಸಿದ ಹಾರಕೂಡದ ಶ್ರೀ ಚನ್ನಬಸವ ಶಿವಯೋಗಿಗಳು ಮತ್ತು ಬಸವಣ್ಣನವರ ಮೂರ್ತಿಗಳು ಗಮನ ಸೆಳೆಯುತ್ತಿವೆ. ಕಲಾನಿಕೇತನವು ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಉತ್ತಮ ಬೋಧನೆ ಮಾಡುತ್ತ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ 25 ವರ್ಷಗಳಿಂದ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯ. 

Advertisement

ಕಲಾಕೃತಿ ಸಂಗ್ರಹ: ನಾಡಿನ ಹಿರಿಯ ಕಲಾವಿದರಾದ ಎಂ.ಬಿ.ಪಾಟೀಲ, ಎಂ.ಎಫ್‌.ಹುಸೇನ್‌, ಎಸ್‌.ಎಂ.ಪಂಡೀತ ಹಾಗೂ ಅನೇಕ ಕಲಾವಿದರ ಲಕ್ಷಾಂತ ರೂ. ಮೌಲ್ಯದ ಕಲಾಕೃತಿಗಳು, ಪ್ರತಿಕೃತಿ ಮತ್ತು ಪೋಸ್ಟರ್‌ಗಳನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಅಭ್ಯಾಸಕ್ಕಾಗಿ ಇಲ್ಲಿ ಸಂಗ್ರಹಿಸಿ ಇಡಲಾಗಿದೆ. 

ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ನಡುವೆಯೂ ಸ್ವಾವಲಂಬಿ ಬದುಕಿಗೆ ಚಿತ್ರಕಲೆ ಪೂರಕವಾಗಿದೆ. ಆದರೆ ಸರ್ಕಾರದ ನಿರ್ಲಕ್ಷéದಿಂದ ಕಲಾ ಸಂಸ್ಥೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಹಾಗಾಗಿ ಸರ್ಕಾರ ಅರ್ಹತೆಯ ಮೇಲಾದರು, ಕಲಾ ಕಾಲೇಜುಗಳಿಗೆ ಅನುದಾನ ನೀಡಬೇಕು. ಪ್ರತಿಯೊಂದು ಶಾಲೆಯಲ್ಲಿ ಕಲಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು.  ಪ್ರಭುಲಿಂಗಯ್ನಾ ಟಂಕಸಾಲಿ ಮಠ, ಪ್ರಾಚಾರ್ಯರು, ಬಸವೇಶ್ವರ ಚಿತ್ರಕಲಾ ಮಹಾವಿದ್ಯಾಲಯ ಪ್ರಾಚಾರ್ಯರ ಸತತ ಪರಿಶ್ರಮ ಹಾಗೂ ವಿದ್ಯಾರ್ಥಿಗಳ ಮೇಲಿನ ಕಾಳಜಿಯಿಂದಾಗಿ ಇಂದು ನೂರಾರು ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಸ್ಥಾನಮಾನದಲ್ಲಿ ಇರಲು ಸಾಧ್ಯವಾಗಿದೆ. ಯಾವುದೇ ನೇಮಕವಾದರು ಈ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ನೇಮಕವಾಗಿರುವುದೇ ಇವರ ಕಾರ್ಯಕ್ಕೆ ಸಾಕ್ಷಿಯಾಗಿದೆ.  ಯಲ್ಲಾಲಿಂಗ ಪೂಜಾರಿ, ಕಲಾಶಿಕ್ಷಕ-ಹಳೆ ವಿದ್ಯಾರ್ಥಿ

ವೀರಾರೆಡ್ಡಿ ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next