Advertisement

ನಿಡೋಣಿಯಲ್ಲಿ ಬಸವೇಶ್ವರ ಪುತ್ಥಳಿಗೆ ಅವಮಾನ: ಆಕ್ರೋಶ

12:53 PM Jan 16, 2017 | Team Udayavani |

ಕಲಬುರಗಿ: ನೆರೆಯ ವಿಜಯಪುರ ಜಿಲ್ಲೆಯ ನಿಡೋಣಿ ಗ್ರಾಮದಲ್ಲಿ ವಿಶ್ವಗುರು ಬಸವೇಶ್ವರರ ಮೂರ್ತಿಗೆ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿರುವ ಘಟನೆ ಖಂಡಿಸಿ ಅಖೀಲ ಭಾರತ ವೀರಶೈವ ಮಹಾಸಭಾದ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ, ಟೈರ್‌ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. 

Advertisement

ಮೂರ್ತಿಗೆ ಅವಮಾನ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಧಿಸಬೇಕೆಂದು ಆಗ್ರಹಿಸಿ ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ನಗರದ ಜಗತ್‌ ವೃತ್ತದ ಬಳಿ ರವಿವಾರ ರಸ್ತೆ ತಡೆ ಚಳುವಳಿ ನಡೆಸಲಾಯಿತು. ಪದೇ ಪದೇ ಬಸವೇಶ್ವರ ಮೂರ್ತಿಗೆ ಅವಮಾನವಾಗುತ್ತಿರುವ ಘಟನೆಗಳು ನಡೆಯುತ್ತಿವೆಯಲ್ಲದೇ ಲಿಂಗಾಯಿತರ ಮೇಲೂ ಹಲ್ಲೆಗಳು ನಡೆಯುತ್ತಿವೆ.

ಹೀಗಾಗಿ ಲಿಂಗಾಯಿತರ ತಾಳ್ಮೆ ಮೀರುತ್ತಿದೆ. ಒಂದು ವೇಳೆ ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ನಿಡೋಣಿಯಲ್ಲಿ ಬಸವೇಶ್ವರರ ಮೂರ್ತಿಗೆ ಆದ ಅವಮಾನ ಖಂಡನೀಯ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. 

ಹಠಾತ್‌ ಪ್ರತಿಭಟನೆಯಿಂದಾಗಿ ಜಗತ್‌ ವೃತ್ತದ ನಾಲ್ಕೂ ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಯಿತು. ಮಹಾಸಭಾ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖಂಡರಾದ ಜಂಬನಗೌಡ ಶೀಲವಂತ, ಕಲ್ಯಾಣಪ್ಪ ಪಾಟೀಲ, ಚಂದ್ರಶೇಖರ ತಳ್ಳಳ್ಳಿ,

ಶರಣಗೌಡ ಪಾಟೀಲ, ಅಪ್ಪು ಕಣಕಿ, ಶರಣು ಪಪ್ಪಾ, ಮಂಜುನಾಥ ಹಾಗರಗಿ, ಈರಣ್ಣ ಗೊಳೇದ, ಮಹಾಂತೇಶ ಪಾಟೀಲ, ಮಂಜು ರೆಡ್ಡಿ, ಶಾಂತಕುಮಾರ್‌ ಖ್ಯಾಮ್‌, ರಾಜು ಕೋಟೆ, ರಮೇಶ ಕಡಾಳೆ, ರಾಜು ವಾಡೇಕರ್‌, ಗುರುರಾಜ್‌ ಕೋರವಾರ್‌, ಅಂಬರೀಷ ನೂಲಾ, ಅಪ್ಪಾಸಾಬ್‌ ಪಾಟೀಲ, ನ್ಯಾಯವಾದಿ ಶಿವರಾಜ ಅಂಡಗಿ, ಶಿವು ಕಾಳಗಿ, ನಾಗಭೂಷಣ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next