Advertisement

ಹಿರಿಯ ಸಾಹಿತಿ ಚಂಪಾಗೆ ಬಸವಶ್ರೀ ಪ್ರಶಸ್ತಿ ಗರಿ

02:14 PM Apr 23, 2019 | Team Udayavani |

ಚಿತ್ರದುರ್ಗ: ಮುರುಘಾಮಠದಿಂದ ಪ್ರತಿ ವರ್ಷ ಕೊಡಮಾಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ 2018ನೇ ಸಾಲಿಗೆ ಹಿರಿಯ ಸಾಹಿತಿ ಡಾ| ಚಂದ್ರಶೇಖರ ಪಾಟೀಲ್ ಭಾಜನರಾಗಿದ್ದಾರೆ.

Advertisement

ಇಲ್ಲಿನ ಮುರುಘಾ ಮಠದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಡಾ| ಶಿವಮೂರ್ತಿ ಮುರುಘಾ ಶರಣರು ಈ ವಿಷಯ ತಿಳಿಸಿದರು. ಬಸವಾದಿ ಪ್ರಮಥರ ತತ್ವ ಚಿಂತನೆ, ಸಾಮಾಜಿಕ ಆಂದೋಲನ ಮತ್ತು ವಚನ ಸಾಹಿತ್ಯ ಕುರಿತು ವಿಶೇಷ ಅಧ್ಯಯನದಲ್ಲಿ ತೊಡಗಿ ಗ್ರಂಥ ರಚಿಸುವ ವಿದ್ವಾಂಸರಿಗೆ ಹಾಗೂ ಶರಣರ ಆದರ್ಶಗಳನ್ನಾಧರಿಸಿ ಋಜುಮಾರ್ಗದಲ್ಲಿ ನಡೆಯುವ ಮಹನೀಯರಿಗೆ ಪ್ರದಾನ ಮಾಡುವ ಸಲುವಾಗಿ ಮುರುಘಾಮಠ ಬಸವಶ್ರೀ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿ ಐದು ಲಕ್ಷ ರೂ.ಗಳ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದರು.

ಕನ್ನಡ ನಾಡು-ನುಡಿ, ಅಭಿವೃದ್ಧಿಗೆ ಅವಿರತವಾಗಿ ಹೋರಾಟ ಮಾಡುತ್ತಿರುವ, ದಲಿತ-ಬಂಡಾಯ ಸಾಹಿತಿಯಾಗಿ ಚಂಪಾ ತಮ್ಮದೇ ನೆಲೆ ಕಂಡುಕೊಂಡಿದ್ದಾರೆ.

ಪ್ರಗತಿಪರ ಚಿಂತಕರಾಗಿ, ಪತ್ರಿಕಾ ಸಂಪಾದಕರಾಗಿ, ಮೌಡ್ಯ, ಪೌರೋಹಿತ್ಯ ಮತ್ತು ಊಳಿಗಮಾನ್ಯ ವ್ಯವಸ್ಥೆ ವಿರುದ್ಧದ ನಿರಂತರ ಪ್ರತಿಭಟನೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇಂತಹ ಸಾಧಕರಿಗೆ ಬಸವಶ್ರೀ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಮೇ 7 ರಂದು ಬೆಳಿಗ್ಗೆ 11 ಗಂಟೆಗೆ ಮುರುಘಾ ಮಠದ ಆವರಣದ ಅನುಭವ ಮಂಟಪದಲ್ಲಿ ನಡೆಯುವ ಬಸವ ಜಯಂತಿ, ಸರ್ವಶರಣ, ಸಂತ ಮತ್ತು ದಾರ್ಶನಿಕರ ಸ್ಮರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಸಾನ್ನಿಧ್ಯ ವಹಿಸುವರು. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಬೆಂಗಳೂರು ಐಪಿಸಿ ಚರ್ಚ್‌ ಮಾಜಿ ಅಧ್ಯಕ್ಷ ರೆವರೆಂಡ್‌ ಟಿ.ಡಿ. ಥಾಮಸ್‌, ಎಸ್‌.ಎಸ್‌.ಎಫ್‌ ಜಿಲ್ಲಾಧ್ಯಕ್ಷ ಜುನೈದ್‌ ಸಖಾಫಿ ಎಂ.ಎಸ್‌.ಎಂ, ತುಮಕೂರಿನ ಉದ್ಯಮಿ ವೆಂಕಟೇಶ್‌ ಲಾಡ್‌ ಪಾಲ್ಗೊಳ್ಳುವರು ಎಂದರು.

Advertisement

ಸುದ್ದಿಗೋಷ್ಠಿಯಲ್ಲಿ ಎಸ್‌.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ| ಜಿ.ಎನ್‌. ಮಲ್ಲಿಕಾರ್ಜುನಪ್ಪ, ಡಾ| ಈ. ಚಿತ್ರಶೇಖರ್‌, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಪಟೇಲ್ ಶಿವಕುಮಾರ್‌, ಡಿ.ಎಸ್‌. ಮಲ್ಲಿಕಾರ್ಜುನ್‌, ದಾದಾಪೀರ್‌, ವಕೀಲ ಉಮೇಶ್‌, ದಸಂಸದ ಮಹಾಲಿಂಗಪ್ಪ, ಪೈಲ್ವಾನ್‌ ತಿಪ್ಪೇಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next