Advertisement

ಸಮಾನತೆಯಿಂದ ಬಸವ ತತ್ವ ಸಾರ್ಥಕ

11:01 AM Mar 03, 2018 | Team Udayavani |

ಜೇವರ್ಗಿ: ದೇವರು, ಧರ್ಮ ಉತ್ಛಕುಲದವರ ಸ್ವತ್ತಲ್ಲ. ದೀನ ದಲಿತರಿಗೆ ದೇವರನ್ನು ಪೂಜಿಸುವ ಹಾಗೂ ಆರಾಧಿಸುವ ಅವಕಾಶ ಸಮಾನವಾಗಿ ಸಿಕ್ಕಾಗ ಮಾತ್ರ ಬಸವ ತತ್ವದ ಆಶಯ ಹಾಗೂ ಕಲ್ಯಾಣ ಕ್ರಾಂತಿ ಉದ್ದೇಶ ಸಾರ್ಥಕವಾಗುತ್ತದೆ ಎಂದು ತಿಕೋಟಾದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬಸವಕೇಂದ್ರ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಅನುಭಾವ ನೀಡಿದರು. ಇತಿಹಾಸದ ಪರಂಪರೆ ಎಂದು ರಾಗ ಹಾಡುತ್ತ ಕುಳಿತರೆ ಬಸವ ತತ್ವ ಆಚರಣೆಗೆ ಬರಲು ಸಾಧ್ಯವಿಲ್ಲ. ಜನಸಾಮಾನ್ಯರನ್ನು ಮೂಢನಂಬಿಕೆ ಯಿಂದ ಹೊರತರುವ ಕೆಲಸವನ್ನು ಮಠಾಧಿಧೀಶರು ಮಾಡಬೇಕು.

12ನೇ ಶತಮಾನದಲ್ಲಿ ಶರಣರು ವೈಚಾರಿಕ ನೆಲೆಗಟ್ಟಿನ ಮೇಲೆ ಸಮಾಜ ಕಟ್ಟಿದ್ದರು. ಈಗ ಸಮಾಜವನ್ನು ಜಾತಿ ಧರ್ಮಗಳ ಆಧಾರದ ಮೇಲೆ ಒಡೆಯಲಾಗುತ್ತಿದೆ. ಜಾತಿ ರಹಿತ, ಲಿಂಗಭೇದ ಹಾಗೂ ಮುಕ್ತ ಧಾರ್ಮಿಕ ನೀತಿ ಅನುಸರಿಸಿದ ಶರಣರು ವಿಶ್ವಕ್ಕೆ ಮಾದರಿಯಾಗಿದ್ದಾರೆ. ಜಾತಿ ಅಹಂಕಾರ ಮತ್ತು ಜಾತಿ ಕೀಳರಿಮೆಯನ್ನು ಶರಣರು ವಿರೋಧಿಸಿದರು. ಎಲ್ಲ ಶೋಷಿತ ಸಮುದಾಯದ ಜನರು ಬಸವ ತತ್ವದ ಆಧಾರದ ಮೇಲೆ ಒಂದಾಗಿ ವೈಚಾರಿಕ ಕ್ರಾಂತಿ ಕಡೆಗೆ ಬರಬೇಕು.

ಬಸವಣ್ಣನವರ ಕಲ್ಪನೆಯನ್ನು ಡಾ| ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಅಳವಡಿಸುವುದರ ಮೂಲಕ ವೈಚಾರಿಕ ಸಮಾಜ ಕಟ್ಟಲು ಕಾರಣರಾದರು. ಬೌದ್ಧ ಧರ್ಮದಲ್ಲಿ ಹೇಳಲಾಗುತ್ತಿರುವ ಸಂದೇಶ ಮತ್ತು ಬಸವೇಶ್ವರರ ಸಂದೇಶಗಳು ಒಂದೆಯಾಗಿದ್ದು, ಇಬ್ಬರ ಸಂದೇಶ ಬೆಸೆಯುವ ಕಾರ್ಯ ಅಗತ್ಯವಾಗಿದೆ ಎಂದು ಹೇಳಿದರು.

ಶಿಕ್ಷಕರ ಪ್ರತಿಭಾ ಪರಿಷತ್‌ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಚಿಂಚೋಳಿ ಅಧ್ಯಕ್ಷತೆ ವಹಿಸಿದ್ದರು. ಪರಿಷತ್‌ ತಾಲೂಕು ಅಧ್ಯಕ್ಷ ನಾನಾಗೌಡ ಕೂಡಿ ಅತಿಥಿಗಳಾಗಿ ಆಗಮಿಸಿದ್ದರು. ಲಿಂ| ಹಣಮಂತ್ರಾಯ ಕಲ್ಲಾ ಅವರ ಪುಣ್ಯಸ್ಮರಣೋತ್ಸವ ನಿಮಿತ್ತ ಅವರ ಕುಟುಂಬ ವರ್ಗ ದಾಸೋಹಿಗಳಾಗಿ ಸೇವೆ ಸಲ್ಲಿಸಿದರು. ಕಸಾಪ ಅಧ್ಯಕ್ಷ ಶಿವಣ್ಣಗೌಡ ಪಾಟೀಲ, ಷಣ್ಮುಖಪ್ಪಗೌಡ ಹಿರೇಗೌಡ, ಮಹಾಂತಗೌಡ ಚನ್ನೂರ, ಸಿದ್ಧು ಯಂಕಂಚಿ, ಬಸವರಾಜ ಕಲ್ಲಾ, ಮಲ್ಲಿಕಾರ್ಜುನ ಮಾಸ್ತರ ಹೂಗಾರ, ವಿಶ್ವನಾಥರೆಡ್ಡಿ ರಾಜಳ್ಳಿ, ಶಾಂತಪ್ಪ ಬಿರಾದಾರ, ಕಲ್ಲಪ್ಪ ಬಡದಾಳ, ಬಸವರಾಜ ಚಿನಗುಡಿ, ವೀರಣ್ಣ ಭೂತಪುರ, ನಿಂಗಣ್ಣ ಹಳಿಮನಿ, ಅಶೋಕ ಸನಗುಂದಿ, ಗುರು ಮಾಲಿಪಾಟೀಲ ಪಾಲ್ಗೊಂಡಿದ್ದರು. ಶಿಕ್ಷಕ ಬಸವರಾಜ ಕಲ್ಲಾ ಸ್ವಾಗತಿಸಿದರು. ಡಾ| ವಿಶ್ವನಾಥ ಡೋಣೂರ ನಿರೂಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next