ಹಾವೇರಿ: ಹುಬ್ಬಳ್ಳಿಯಲ್ಲಿನ ಕಾಶ್ಮೀರಿ ವಿದ್ಯಾರ್ಥಿಗಳ ದೇಶದ್ರೋಹಿ ಪ್ರಕರಣವು ಬೆಳಗಾವಿಗೆ ವರ್ಗಾವಣೆ ಆಗಿದೆ. ಅಲ್ಲಿಯ ಐಜಿಪಿಯವರು ಅದನ್ನು ನೋಡುತ್ತಿದ್ದಾರೆ. ಬೆಂಗಳೂರಿನಲ್ಲಿ ಕೆಲವು ವಕೀಲರು ಅವರ ಪರ ವಾದ ಮಾಡಲು ಮುಂದೆ ಬಂದಿದ್ದಾರೆ. ಮತ್ತು ವಕೀಲರು ರಕ್ಷಣೆ ಕೇಳಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿಯಲ್ಲಿ ಮಾತನಾಡಿದ ಅವರು, ಅಪ್ಜಲ್ ಗುರುಗೆ ಗಲ್ಲು ಹಾಕಿದಾಗ ಅದರ ವಿರುದ್ಧ ಕನ್ಹಯ್ಯ ಕುಮಾರ ಧ್ವನಿ ಎತ್ತಿದ. ಅವನ ವಿರುದ್ಧ ಕ್ರಮಕ್ಕೆ ಮುಂದಾದ್ರೆ ಕೆಲವರು, ಕೆಲವು ಸಂಘಟನೆಗಳು ಅವನ ಪರ ನಿಂತವು. ಅದರಿಂದ ಇತರರಿಗೆ ಕುಮ್ಮಕ್ಕು ಸಿಕ್ಕಂತಾಗಿದೆ ಎಂದರು.
ಪೌರತ್ವ ಕಾಯ್ದೆ ಬಗ್ಗೆ ಮಾತನಾಡಿದ ಅವರು, ಸಿಎಎ ಪೌರತ್ವ ಕಿತ್ತು ಕೊಳ್ಳುವುದಲ್ಲ. ಪೌರತ್ವ ಕೊಡುವುದು. ಇದರ ವಿರುದ್ಧ ವಿರೋಧ ಪಕ್ಷಗಳು ಕುಮ್ಮಕ್ಕು ನೀಡ್ತಿವೆ. ಎಲ್ಲೆಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೀತಿವೆ ಅಲ್ಲಿ ಕುಮ್ಮಕ್ಕು ನೀಡುವಂಥಹ ಪ್ರಕರಣಗಳು ನಡೆಯುತ್ತಿವೆ. ಇದೆಲ್ಲದರ ಬಗ್ಗೆ ಪೊಲೀಸರು ತನಿಖೆ ಮಾಡ್ತಿದ್ದಾರೆ
ನಾಳೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯಲಿದೆ. ದೇಶದ್ರೋಹಿಗಳನ್ನು ಕರ್ನಾಟಕದಿಂದ ಬೇರು ಸಮೇತ ಕಿತ್ತು ಹಾಕಲು ಕ್ರಮ ಕೈಗೊಳ್ಳುತ್ತೇವೆ. ಇನ್ನು ವಿದ್ಯಾಸಂಸ್ಥೆ, ಹಾಸ್ಟೇಲ್ ಆಡಳಿತಗಳು ಇಂಥಹ ಘಟನೆಗಳ ಬಗ್ಗೆ ನಿಗಾ ವಹಿಸಬೇಕು. ಗೊತ್ತಿದ್ದೂ ಸುಮ್ಮನಿದ್ದರೆ ಅಂಥಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ವಾಟ್ಸ್ ಅಪ್, ಫೇಸ್ ಬುಕ್ ನಲ್ಲಿ ಫೋಸ್ಟಿಂಗ್ ಬಗ್ಗೆ ಪರಿಶೀಲನೆ ಮಾಡುವ ಕೆಲಸ ಆಗಬೇಕಿದೆ. ಇದಕ್ಕೆ ನಿರ್ಬಂಧ ಹಾಕಬೇಕಿದೆ. ಈ ಬಗ್ಗೆ ಭಾರತ ಸರಕಾರದ ಗಮನಕ್ಕೆ ತರುತ್ತೇವೆ. ಕೆಲವು ಸಂಘಟನೆಗಳಿಗೆ ವಿದೇಶದಿಂದ ಹಣ ಬರುತ್ತಿರುವ ಬಗ್ಗೆ ಈಗಾಗಲೇ ತನಿಖೆ ನಡೀತಿದೆ ಎಂದ ಅವರು ಹುಬ್ಬಳ್ಳಿ ಪ್ರಕರಣದಲ್ಲಿ ಪೊಲೀಸರ ನೈತಿಕತೆ ಕುಗ್ಗುವ ರೀತಿ ಮಾತನಾಡುವುದಿಲ್ಲ. ಮೊದಲ ಹಂತದಲ್ಲಿ ಪೊಲೀಸರ ಕ್ರಮ ಊರ್ಜಿತವಾಗಿದೆ ಎಂದು ಅಭಿಪ್ರಾಯಪಟ್ಟರು.