ಕೋಟೇಶ್ವರದ ಕುದುರೆಕೆರೆಬೆಟ್ಟುವಿನ “ಮಂಜುಶ್ರೀ’ ಕಾವ್ಯನಾಮದ ಬಸವರಾಜ ಶೆಟ್ಟಿಗಾರ ಅವರನ್ನು ಯಕ್ಷಾಭಿಮಾನಿಗಳು ಗುರುತಿಸುವುದೇ ಕ್ಷೇತ್ರ ಮಹಾತ್ಮೆಗಳ ಸರದಾರ ಎಂದು.ಅವರ ಲೇಖನಿಯಿಂದ ಮೂಡಿಬಂದ ಹಲವಾರು ಕ್ಷೇತ್ರಗಳ ಪ್ರಸಂಗಗಳೇ ಇದಕ್ಕೆ ಕಾರಣ.
ದಿ| ಶ್ರೀನಿವಾಸ ಶೆಟ್ಟಿಗಾರ ಹಾಗೂ ಫಣಿಯಮ್ಮ ಶೆಟ್ಟಿಗಾರ ದಂಪತಿಗಳ ಪುತ್ರನಾದ ಬಸವರಾಜ ಅವರು ಬಿ.ಎ. ಪದವೀಧರ. ಇಲೆಕ್ಟ್ರಿಕಲ್ ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೋಮ, ಕೃಷಿಯಲ್ಲಿ ವಿಶೇಷ ತರಬೇತಿ ಪಡೆದವರು ಹಾಗೂ ವಾಸ್ತುತಜ್ಞ.
ಕನ್ನಾರು, ಮಾರಾಳಿ, ಸೂರಾಲು, ಹಿರಿಯಡಕ, ಬೇಲೂರು, ಮಡಾಮಕ್ಕಿ, ಆರೂರು, ಕೋಡಿ ಚಕ್ರೇಶ್ವರಿ, ಮೊಗವೀರಪೇಟೆ, ಕುರುಡುಂಜೆ, ಸಾಲಿಕೇರಿ, ಹಂಗಳೂರು, ಬಸರೂರು, ತಲ್ಲೂರು, ವಸುಪುರ, ಮೂರೂರು, ಬಾರ್ಕೂರು, ಹಟ್ಟಿಯಂಗಡಿ ಮುಂತಾದ ಹತ್ತು ಹಲವು ಕ್ಷೇತ್ರಗಳ ಮಹಾತ್ಮೆಯಾಧಾರಿಸಿ ಯಕ್ಷಗಾನ ಪ್ರಸಂಗಗಳನ್ನು ರಚಿಸಿರುವರು. ಸಾಲಿಗ್ರಾಮ, ಪೆರ್ಡೂರು, ಕದ್ರಿ, ಪುತ್ತೂರು, ಕುಂಟಾರು, ಸೌಕೂರು, ಕಮಲಶಿಲೆ, ಹಾಲಾಡಿ, ಮಡಾಮಕ್ಕಿ, ಮಂದಾರ್ತಿ, ಹಿರಿಯಡಕ, ಗೋಳಿಗರಡಿ, ಅಮೃತೇಶ್ವರಿ, ಸಿಗಂಧೂರು, ಬಪ್ಪನಾಡು, ಹಟ್ಟಿಯಂಗಡಿ ಮುಂತಾದ ಮೇಳಗಳು ಇವರ ಪ್ರಸಂಗಗಳನ್ನು ಆಡಿ ತೋರಿಸಿವೆ. ಕಾದಂಬರಿ, ಕಥೆ, ಕವನ, ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆ, ಮಾತ್ರವಲ್ಲ ಹಲವು ನಾಟಕಗಳನ್ನೂ ಬರೆದಿರುವರು. ವಾಲಿ, ಸುಗ್ರೀವ, ಭೀಮ, ಅರ್ಜುನ, ಹನುಮಂತ, ಬ್ರಹ್ಮ, ವಿಷ್ಣು, ಮಹೇಶ್ವರ, ಬಲರಾಮ, ಜಟಾಯು, ಮನ್ಮಥ, ವಿಶ್ವಾಮಿತ್ರ ಮುಂತಾದ ಪಾತ್ರಗಳಲ್ಲಿ ಮಿಂಚಿರುವರು. ದೂರದರ್ಶನ ಹಾಗೂ ಆಕಾಶವಾಣಿಯಲ್ಲೂ ಇವರ ಸಂದರ್ಶನಗಳು ಪ್ರಸಾರವಾಗಿವೆ. ಪತ್ರಕರ್ತರಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಜ್ಯೋತಿಷ್ಯ ತಜ್ಞರಾಗಿ, ಗೌರವ ಶಿಕ್ಷಕರಾಗಿ, ಚಲನಚಿತ್ರ ನಟರಾಗಿ ಸೇವೆ ಸಲ್ಲಿಸಿದ್ದಾರೆ. ದುಬೈ, ಅಬುದಾಬಿ, ಬಹರೈನ್, ಶಾರ್ಜಾ, ಮಲೇಶಿಯಾ, ಆಫ್ರಿಕಾ ದೇಶಗಳಲ್ಲೂ ಸತ್ಯನಾರಾಯಣ ವ್ರತ, ಗಣಪತಿ ಹೋಮ, ನವಗ್ರಹ ಹೋಮ ಹಾಗೂ ಧಾರ್ಮಿಕ ಪ್ರವಚನ ನೀಡಿದ್ದಾರೆ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸ್ಕಂದ ಪ್ರಶಸ್ತಿ, ಡಾ| ಶಿವರಾಮ ಕಾರಂತ ಸದ್ಭಾವನ ರಾಜ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ, ಮನೋಲ್ಲಾಸ ಕಲಾಸಾಧಕ ರಾಜ್ಯ ಪ್ರಶಸ್ತಿ, ನೇಕಾರ ರತ್ನ ರಾಷ್ಟ್ರೀಯ ಪ್ರಶಸ್ತಿ, ವಿಶ್ವಮಾನ್ಯ ಕನ್ನಡಿಗ ಅಂತರಾಷ್ಟ್ರೀಯ ಪ್ರಶಸ್ತಿ ಸೇರಿ 333 ಪ್ರಶಸ್ತಿ, ಬಿರುದಾವಳಿ ಹಾಗೂ ಸಮ್ಮಾನಗಳಿಗೆ ಪಾತ್ರರಾಗಿದ್ದಾರೆ.
ಪಿ.ಜಯವಂತ ಪೈ