Advertisement

ಮೇಟಿ ಪ್ರಕರಣವನ್ನು ಮುಚ್ಚಿ ಹಾಕಿದವರಿಂದ ನೈತಿಕತೆ ಕಲಿಯಬೇಕಿಲ್ಲ : ಬೊಮ್ಮಾಯಿ

01:19 PM May 28, 2021 | Team Udayavani |

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾಧಿಕಾರಿಗಳ ಮೇಲೆ ಪ್ರಭಾವವಿರುವ ದುರುದ್ದೇಶದಿಂದ ಪ್ರತಿಪಕ್ಷ ಕಾಂಗ್ರೆಸ್ ಮುಖಂಡರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಮಾಜಿ ಸಚಿವ ಎಚ್ ವೈ ಮೇಟಿ ಪ್ರಕರಣವನ್ನೇ ಮುಚ್ಚಿ ಹಾಕಿರುವ ಕಾಂಗ್ರೆಸ್ ಮುಖಂಡರಿಂದ ನಾವು ನೈತಿಕತೆ ಪಾಠ ಕಲಿಯಬೇಕಿಲ್ಲ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

Advertisement

ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಈ ವಿಷಯ ತಿಳಿಸಿದರು. ‌ಕಾಂಗ್ರೆಸ್ ಮುಖಂಡರು ಇಷ್ಟು ದಿನ ಬಿಟ್ಟು ಈಗಲೇ ಯಾಕೆ ಈ ವಿಷಯವನ್ನು ಕೈಗೆತ್ತಿಕೊಂಡರು? ಹೈಕೋರ್ಟಿನಲ್ಲಿ ದಾಖಲಾಗಿರುವ ರಿಕ್ಟ್ ಪಿಟಿಸಶನ್ ಇದಕ್ಕೆ ಕಾರಣವೇ ಎಂಬ ಸಂಶಯವನ್ನು ಸಚಿವರು ವ್ಯಕ್ತಪಡಿಸಿದರು. ಈ ಪ್ರಕರಣದಲ್ಲಿ ಆಗುವ ಬೆಳವಣಿಗೆಗಳ ಕುರಿತು ತನಿಖಾಧಿಕಾರಿಗಳು ಹೈಕೋರ್ಟಿಗೆ ವರದಿ ಸಲ್ಲಿಸುತ್ತಾರೆ. ಹೀಗಾಗಿ ತನಿಖಾಧಿಕಾರಿಗಳ ಮೇಲೆ ಪ್ರಭಾವವಿರುವ ದುರುದ್ದೇಶದಿಂದ ಕಾಂಗ್ರೆಸ್ ಮುಖಂಡರು ಈಗ ಈ ಪ್ರಕರಣದಲ್ಲಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದರು.

ಈ ಹಿಂದೆ ಮಾಜಿ ಸಚಿವ ಎಚ್ ವೈ ಮೇಟಿ ಪ್ರಕರಣದಲ್ಲಿ ಏನಾಯ್ತು? ಸಂತ್ರಸ್ತ ಮಹಿಳೆ ದೂರು ನೀಡಿದರೂ ಮಾಜಿ ಸಚಿವರ ಹೆಸರನ್ನೇ ದೂರಿನಲ್ಲಿ ದಾಖಲಿಸಿ ಕೊಳ್ಳಲಿಲ್ಲ. ಮಾಜಿ ಸಚಿವರ ಹೆಸರಿಲ್ಲದೆ ಪ್ರಕರಣವನ್ನು ತನಿಖೆ ನಡೆಸಿ ಮುಚ್ಚಿ ಹಾಕಲಾಯಿತು. ಆಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರು. ಅಂಥವರಿಂದ ನಾವು ನೈತಿಕತೆಯ ಪಾಠ ಕಲಿಯಬೇಕಿಲ್ಲ ಎಂದು ಬಸವರಾಜ ಬೊಮ್ಮಾಯಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಲಾಕ್ಡೌನ್ ನಲ್ಲಿ ಯಾವುದೇ ರೀತಿಯ ಸಡಿಲಿಕೆ ಇಲ್ಲ. ಕಟ್ಟು ನಿಟ್ಟಾಗಿ ಲಾಕ್ಡೌನ್ ಜಾರಿ ಮಾಡುವಂತೆ ಸೂಚಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿದ್ದಾರೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ. ಯಾರೂ ಯಾರ ಮೇಲೆ ಪ್ರಭಾವವನ್ನು ಬೀರಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next