ಬೆಂಗಳೂರು: ಬಸವರಾಜ್ ಬೊಮ್ಮಾಯಿ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಜನರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಕಾನೂನು ಸುವ್ಯವಸ್ಥೆ ಕುಸಿದಿದೆ. ಇವರಿಂದ ಯಾರನ್ನೂ ರಕ್ಷಣೆ ಮಾಡಲು ಆಗುತ್ತಿಲ್ಲ ಎಂದು ಟೀಕಿಸಿದರು.
ಇಂಟೆಲಿಜೆನ್ಸ್ ಕೂಡ ಸಿಎಂ ಬಳಿಯೇ ಇದೆ. ಆದರೂ ಹತ್ಯೆಗಳಾಗುತ್ತಿವೆ. ಇದರ ಹೊಣೆಯನ್ನು ಬಸವರಾಜ್ ಬೊಮ್ಮಾಯಿ ಹೊರಬೇಕು. ಆರಗ ಜ್ಞಾನೇಂದ್ರ ಗೃಹ ಸಚಿವರಾಗಿ ಮುಂದುವರೆಯಲು ನೈತಿಕತೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮಂಗಳೂರು: ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪೊಲೀಸ್ ವಶಕ್ಕೆ
ಜನರು ಭಯದಿಂದ ಬದುಕುವಂತಾಗಿದೆ. ಕೂಡಲೇ ಅಪರಾಧಿಗಳನ್ನು ಪತ್ತೆ ಹಚ್ಚಬೇಕು. ಫಾಝಿಲ್, ಪ್ರವೀಣ್ ಯಾರೇ ಆದರೂ ಜೀವ ಜೀವನೇ. ಕೂಡಲೇ ಅಪರಾಧಿಗಳಿಗೆ ಕಠಿಣವಾದ ಶಿಕ್ಷೆ ಕೊಡಬೇಕು. ಜನರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಮೊದಲು ಅರೋಪಿಗಳನ್ನು ಬಲಿ ಹಾಕಬೇಕು. ಮತಾಂಧ ಶಕ್ತಿಗಳು ಯಾರೇ ಆಗಲಿ ಕಠಿಣವಾದ ಕ್ರಮಕೈಗೊಳ್ಳಲಿ ಎಂದು ಆಗ್ರಹಿಸಿದರು.