Advertisement

ಶಿಕ್ಷಣ ವ್ಯವಸ್ಥೆ ಪಾತಾಳಕ್ಕೆ; ಬಸವರಾಜ ಜಾಬಶೆಟ್ಟಿ ಟೀಕೆ

04:30 PM Sep 07, 2020 | Suhan S |

ಬೀದರ: ಆಡಳಿತಾರೂಢ ಬಿಜೆಪಿ ಆಂತರಿಕ ಯುದ್ಧದಲ್ಲಿ ಮುಳುಗಿರುವ ಕಾರಣ ರಾಜ್ಯದಲ್ಲಿ ಇಡೀ ಶಿಕ್ಷಣ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಆರೋಪಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವಅವರು, ಕೋವಿಡ್ ಸೋಂಕಿನ ಮಧ್ಯೆ ಪರೀಕ್ಷೆ ಎದುರಿಸುವಂತೆ ಮಕ್ಕಳ ಮೇಲೆ ಒತ್ತಡ ಹೇರುವುದರಿಂದ ಹಿಡಿದು ಮತ್ತೆ ಶಾಲೆ ಆರಂಭಿಸಲು ಯಾವುದೇ ಯೋಜನೆಗಳು ಇಲ್ಲದಿರುವುದರಿಂದ ಅಸಂಖ್ಯಾತ ಮಕ್ಕಳ ಭವಿಷ್ಯ ಅಂಧಕಾರದಲ್ಲಿ ಮುಳುಗಿದೆ. ಸರ್ಕಾರಿ ಶಾಲೆ ಮಕ್ಕಳ ಪರಿಸ್ಥಿತಿ ಹೀನಾಯವಾಗಿದ್ದು, ಬಡವರ ಮಕ್ಕಳಿಗೆ ಶಿಕ್ಷಣ ಒದಗಿಸಲು ಸರ್ಕಾರದ ಬಳಿ ಯಾವುದೇ ಯೋಜನೆ ಇಲ್ಲವಾಗಿದೆ ಎಂದು ಟೀಕಿಸಿದ್ದಾರೆ.

ಕೋವಿಡ್ ದಿಂದಾಗಿ ಶಿಕ್ಷಣ ವ್ಯವಸ್ಥೆ ಅಲ್ಲೋಲ, ಕಲ್ಲೋಲವಾಗಿದೆ. ಖಾಸಗಿ ಶಾಲೆಗಳು ಸೇರಿದಂತೆ ಉಳ್ಳವರ ಮಕ್ಕಳು ಆನ್‌ಲೈನ್‌ ಶಿಕ್ಷಣ, ತಾಂತ್ರಿಕ ಜ್ಞಾನದ ಮೂಲಕ ಶಿಕ್ಷಣ ಪಡೆಯುವತ್ತ ಹೆಜ್ಜೆ ಹಾಕಿದ್ದಾರೆ. ಗ್ರಾಮೀಣ ಭಾಗದ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ ಒದಗಿಸಲು ಸರ್ಕಾರ ಈವರೆಗೆ ಯೋಜನೆ ರೂಪಿಸಿಲ್ಲ ಎಂದು ಆಪಾದಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬೇಜವಾಬ್ದಾರಿಯಿಂದಾಗಿ ಕೇವಲ ಮಕ್ಕಳಷ್ಟೇ ಅಲ್ಲದೆ, ಶಿಕ್ಷಕರು, ಶಾಲಾ ಆಡಳಿತ ವರ್ಗದವರು, ಕಾರ್ಮಿಕರು ಹಾಗೂ ಪೋಷಕರೂ ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದಾರೆ. ಅಸಂಖ್ಯಾತ ಶಿಕ್ಷಕರ ಬದುಕು ಕೆಲಸವಿಲ್ಲದೆ ಮೂರಾಬಟ್ಟೆಯಾಗಿದೆ ಎಂದು ಹೇಳಿದ್ದಾರೆ.

ಮಧ್ಯಾಹ್ನದ ಬಿಸಿಯೂಟ ವಿದ್ಯಾರ್ಥಿಗಳ ಮನೆಗೆ ತಲುಪಿಸಿ, ಅವರ ಪೌಷ್ಟಿಕತೆ ಕಾಪಾಡಬೇಕು.ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ನಡೆಸಿ, ಪೋಷಕರ ಮನವೊಲಿಸಿ ಅವರನ್ನು ಮರಳಿ ಶಾಲೆಗೆ ಕರೆ ತರುವ ಯೋಜನೆ ರೂಪಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗದಲ್ಲಿ ಇರುವವರಿಗೆ ಆರ್ಥಿಕ ಪರಿಹಾರ ಪ್ಯಾಕೇಜ್‌ ಒದಗಿಸಬೇಕು. ಕೊರೊನಾ ವಿರುದ್ಧ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಶಿಕ್ಷಕರ ಕುಟುಂಬಗಳಿಗೆ ಪರಿಹಾರ ಕೊಡಬೇಕು. ಬಡ್ಡಿ ರಹಿತ ಸಾಲ ನೀಡುವ ಮೂಲಕ ಶಾಲೆಗಳ ಆರ್ಥಿಕ ಸಾಮರ್ಥಯ ವೃದ್ಧಿಸುವತ್ತ ಗಮನ ಹರಿಸಬೇಕು. ಖಾಸಗಿ ಶಾಲೆಗಳಿಗೆ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು. ಈ ಮೂಲಕ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಶಾಲಾ ಶುಲ್ಕ ಕಡಿಮೆ ಮಾಡುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಒತ್ತಡ ಹೇರಬೇಕು. ಆದ್ಯತೆ ಮೇರೆಗೆ ತಂತ್ರಜ್ಞಾನ ಬಳಸಿಕೊಳ್ಳುವ ಅಂತರ ಕಡಿಮೆಗೊಳಿಸಬೇಕು. ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಮಾರ್ಗಸೂಚಿಗಳನ್ನು ಹೊರಡಿಸಬೇಕು. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಆದ್ಯತೆಯಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next