ಬೆಳಗಾವಿ: ಡಿ.10ರಿಂದ 21ರ ವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಿಐಪಿಗಳ ಸಂಚಾರ ಸಮಯದಲ್ಲಿ ಜಿರೋ ಟ್ರಾಫಿಕ್ ನಿರ್ಮಾಣ ಹಾಗೂ ಎಲ್ಲ ತರಹದ ಫ್ಲೆಕ್ಸ್-ಬ್ಯಾನರ್‌ಗಳಿಗೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಅಧಿವೇಶನ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ವಿಐಪಿಗಳು ಸಂಚರಿಸುವಾಗ ಜಿರೋ ಟ್ರಾಫಿಕ್‌ಗೆ ಕಡಿವಾಣ ಹಾಕಲಾಗುವುದು.
ಸಾಧ್ಯವಾದಷ್ಟು ಸಂಚಾರ ದಟ್ಟಣೆ ಆಗದಂತೆ ನೋಡಿಕೊಳ್ಳಲಾಗುವುದು. ವಿಐಪಿಗಳ ವಾಹನಗಳು ಸಂಚರಿಸುವಾಗ 5 ನಿಮಿಷಕ್ಕಿಂತ ಹೆಚ್ಚು ಹೊತ್ತು ಜನರು ಕಾಯದಂತೆ ಟ್ರಾಫಿಕ್ ಸಮಸ್ಯೆ ನಿಭಾಯಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸುವರ್ಣ ವಿಧಾನಸೌಧ ಸುತ್ತಲೂ ಸೇರಿದಂತೆ ವಿವಿಧ ಕಡೆ ಯಾವುದೇ ರಾಜಕಾರಣಿಗಳು, ಸಂಘ-ಸಂಸ್ಥೆಗಳು ಹಾಗೂ ಜಿಲ್ಲಾಡಳಿತದವರು ಫ್ಲೆಕ್ಸ್-ಬ್ಯಾನರ್‌ಗಳನ್ನು ಅಳವಡಿಸಬಾರದು. ಸ್ವಾಗತ-ಶುಭಾಶಯ ಕೋರುವ ಫ್ಲೆಕ್ಸ್‌ಗಳಿಂದ ನಗರದ ಅಂದ ಕೆಡುತ್ತದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕುವಂತ ಸೂಚಿಸಲಾಗಿದೆ ಎಂದರು.
ಅಧಿವೇಶನ ವೇಳೆ ವಾಸ್ತವ್ಯ ಹೂಡಲಿರುವ 249 ಶಾಸಕರಿಗೆ, 1,350 ಸಿಬ್ಬಂದಿ, 450 ಸರಕಾರಿ ವಾಹನ ಚಾಲಕರಿಗಾಗಿ ಹೊಟೇಲ್ ಸೇರಿದಂತೆ ಬಹುತೇಕ ಎಲ್ಲ ಕಡೆ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ವಿಐಪಿಗಳಿಗೆ ನೀಡುವ ಸೌಲಭ್ಯಗಳಂತೆಯೇ ಇನ್ನಿತರ ಸಿಬ್ಬಂದಿ ಹಾಗೂ ಪೊಲೀಸರಿಗೂ ಸೌಲಭ್ಯ ಕಲ್ಪಿಸಬೇಕು. ಯಾವುದೇ ಅವ್ಯವಸ್ಥೆ ಹಾಗೂ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೊಠಡಿಗಳ ಕೊರತೆಯಿಂದ ಮದುವೆ ಕಾರ್ಯಗಳಿಗೆ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದೆ. ವಿಐಪಿಗಳಿಗಾಗಿ ಪ್ರತಿ ಊಟಕ್ಕೆ ನಿಗದಿ ಪಡಿಸಿದ ದರ ಏನೂ ಅಲ್ಲ. ಕರಾವಳಿ, ಬೆಂಗಳೂರು, ಮೈಸೂರು ಹಾಗೂ ಉತ್ತರ ಕರ್ನಾಟಕ ಭಾಗದ ಊಟ ತಯಾರಿಸಲಾಗುವುದು. ಯಾರಿಗೂ ಆರೋಗ್ಯ ಸಮಸ್ಯೆ ಆಗದಂತೆ ಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಾರಿಯ ಅಧಿವೇಶನಕ್ಕೆ ಖರ್ಚು-ವೆಚ್ಚಕ್ಕೆ ಕಡಿವಾಣ ಹಾಕಲಾಗುವುದು. ದುಂದು ವೆಚ್ಚ ಮಾಡದೇ ಮಿತವ್ಯಯ ಮಾಡುವಂತೆ ಸೂಚಿಸಲಾಗಿದೆ. ಈ ಬಾರಿಯ ಊಟದ ಗುತ್ತಿಗೆಯನ್ನು ಒಬ್ಬ ಕೆಟರರ್‌ಗೆ ಮಾತ್ರ ನೀಡಲಾಗಿದೆ ಎಂದರು.
ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಅಧಿವೇಶನ ವೇಳೆ ವಿದ್ಯುತ್ ಕಡಿತ ಆಗದಂತೆ ನೋಡಿಕೊಳ್ಳಬೇಕು. ಸಂಜೆ 6:30ರಿಂದ ರಾತ್ರಿ 11 ಗಂಟೆವರೆಗೆ ಯಾವುದೇ ಕಾರಣಕ್ಕೂ ವಿದ್ಯುತ್ ತೆಗೆಯಬಾರದು ಎಂದು ಸೂಚಿಸಲಾಗಿದೆ. ಜತೆಗೆ, ಗರ್ಭಿಣಿಯರು ಹಾಗೂ ಅನಾರೋಗ್ಯ ಪೀಡಿತ ಪೇದೆಗಳನ್ನು ಕರ್ತವ್ಯಕ್ಕೆ ನಿಯೋಜಿಸಬಾರದು. ಕರ್ತವ್ಯಕ್ಕೆ ಬರುವ ಎಲ್ಲರಿಗೂ ಸೂಕ್ತ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಗೈರು ಉಳಿಯದಂತೆ ಎಲ್ಲರಿಗೂ ಪತ್ರ
ಹೊಸಬರು ಸೇರಿದಂತೆ ಎಲ್ಲ ಶಾಸಕರು-ವಿಧಾನ ಪರಿಷತ್ ಸದಸ್ಯರು ಯಾವುದೇ ಕಾರಣಕ್ಕೂ ಸದನಕ್ಕೆ ಗೈರಾಗದೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಈಗಾಗಲೇ ಎಲ್ಲರಿಗೂ ಪತ್ರ ಬರೆಯಲಾಗಿದೆ. ಹೊಸದಾಗಿ ಆಯ್ಕೆಯಾದ 78 ಶಾಸಕರಿಗೆ ತರಬೇತಿ ನೀಡಲಾಗಿದೆ. ಎಲ್ಲರೂ ಚರ್ಚೆಯಲ್ಲಿ ಭಾಗವಹಿಸಬೇಕು ಎಂದು ಮನದಟ್ಟು ಮಾಡಲಾಗಿದೆ. ಆಸಕ್ತಿ ಇದ್ದವರು ಬರುತ್ತಾರೆ. ನಿರಂತರವಾಗಿ ಗೈರು ಉಳಿದರೆ ಅಧಿವೇಶನ ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು ಎಂದು ಬಸವರಾಜ ಹೊರಟ್ಟಿ ತಿಳಿಸಿದರು.