ಹುಬ್ಬಳ್ಳಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದೇ ಚುರುಕುತನದಿಂದ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ. ಅಮಾನವೀಯವಾಗಿ ವರ್ತಿಸಲು ಕಾನೂನಿನಲ್ಲಿ ಯಾರಿಗೂ ಅವಕಾಶವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಅಮಾನವೀಯ ವರ್ತನೆಯಾಗಿದೆ. ಸೆಲೆಬ್ರಿಟಿ, ಅಧಿಕಾರದಲ್ಲಿರುವವರು ಯಾರೇ ಆದರೂ ಈ ರೀತಿ ನಡೆದುಕೊಳ್ಳಲು ಅಧಿಕಾರವಿಲ್ಲ. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಯಾವುದೇ ವಿಚಾರಗಳಿರಲಿ ಕೊಲೆ ಹಂತಕ್ಕೆ ಹೋಗುತ್ತವೆ ಅಂದರೆ ಹೇಗೆ ಎಂದು ಪ್ರತಿಕ್ರಿಯಿಸಿದರು.
ಗಂಭೀರವಾಗಿರುವ ಪ್ರಕರಣವನ್ನು ಪ್ರಾರಂಭದಲ್ಲಿ ಪೊಲೀಸರು ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಕೊನೆವರೆಗೂ ಚುರುಕಾಗಿ ಹಾಗೂ ಕಾನೂನು ಬದ್ಧವಾಗಿ ಕೆಲಸ ಮಾಡಿದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತೆ ಎಂದರು.
ಶಿಗ್ಗಾವಿ ಉಪಚುನಾವಣೆ ಪ್ರಕ್ರಿಯೆ ಇನ್ನು ಪ್ರಾರಂಭವಾಗಿಲ್ಲ. ನಾನು ಇನ್ನು ರಾಜೀನಾಮೆ ಕೊಟ್ಟಿಲ್ಲ. ನಾನು ಇನ್ನು ಶಿಗ್ಗಾವಿ ಕ್ಷೇತ್ರದ ಶಾಸಕ. ರಾಜೀನಾಮೆ ಕೊಟ್ಟ ಮೇಲೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಟಿಕೆಟ್ ನೀಡುವುದು ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರು ಪ್ರಾಮಾಣಿಕವಾಗಿ ಗೆಲ್ಲಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಇದನ್ನೂ ಓದಿ: Court Verdict: ವಿಚ್ಛೇದನ ಕೋರಿ ನಟ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿ ವಜಾ