ಬೆಂಗಳೂರು : ಕೋವಿಡ್ ನಿಯಂತ್ರಣಕ್ಕೆ ಬರುತ್ತಿರುವ ಈ ಸಂದರ್ಭದಲ್ಲಿ ಇನ್ನೊಂದು 3-4 ದಿನ ಮನೆಯಲ್ಲಿಯೇ ಇದ್ದು ಸಹಕಾರ ನೀಡಿ. ಲಾಕ್ಡೌನ್ ಗೆ ವಿನಾಯಿತಿ ನೀಡಿರುವುದು ಜೂನ್14 ರ ನಂತರ ಎಂಬುದನ್ನು ಅರ್ಥಮಾಡಿಕೊಳ್ಳಿ. ಇದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ರಾಜ್ಯದ ಜನತೆಗೆ ಮಾಡಿಕೊಂಡ ಮನವಿ.
ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಘೋಷಣೆ ಆಗಿರುವ ಲಾಕ್ಡೌನ್ ವಿನಾಯತಿ ಇಂದಿನಿಂದಲೇ ಜಾರಿಗೆ ಎಂಬಂತೆ ಜನ ವರ್ತಿಸುತ್ತಿದ್ದಾರೆ. ಮನೆಯಿಂದ ಹೊರ ಬರುತ್ತಿದ್ದಾರೆ. ಇದು ಸರಿಯಲ್ಲ . ಪೊಲೀಸರೊಂದಿಗೆ ಜನ ಸಹಕರಿಸಬೇಕು. ಪೊಲೀಸ್ ಬಲ ಪ್ರಯೋಗಕ್ಕೆ ಅವಕಾಶ ನೀಡಬಾರದು ಎಂದು ಅವರು ಮನವಿ ಮಾಡಿದರು.
ಕೆಲವು ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನಿನ್ನೆ ಕೆಲ ರಿಯಾಯಿತಿಗಳನ್ನು ಘೋಷಣೆ ಮಾಡಿದ್ದಾರೆ. ಕೈಗಾರಿಕಾ ಕ್ಷೇತ್ರಗಳಲ್ಲಿ ಶೇಕಡಾ 50ರಷ್ಟು ಸಿಬ್ಬಂದಿಗೆ ಕೆಲಸಕ್ಕೆ ಅನುಮತಿ ನೀಡಿದ್ದಾರೆ. ಕಾರ್ಮಿಕರ ಸಾರಿಗೆ ವ್ಯವಸ್ಥೆಯನ್ನು ಹಾಗೂ ಅವರಿಗೆ ವ್ಯಾಕ್ಸಿನ್ ಕೊಡಿಸುವ ಕೆಲಸವನ್ನು ಮಾಲೀಕರೆ ಮಾಡಬೇಕು. ಸಾರ್ವಜನಿಕರು ಮತ್ತು ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ದಿನನಿತ್ಯದ ವಸ್ತುಗಳ ಖರೀದಿಗೆ ನಿಗದಿಪಡಿಸಿರುವ ಅವಧಿಯನ್ನು ಮುಂಜಾನೆ 6 ಗಂಟೆಯಿಂದ 02.00 ವರೆಗೆ ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದರು.
ಜನನಿಬಿಡ ಪ್ರದೇಶಗಳಾದ ಮಾಲ್, ಬಾರ್, ರೆಸ್ಟೋರೆಂಟ್ ಸೇರಿದಂತೆ ಧಾರ್ಮಿಕ ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ ಎಂದು ಅವರು ವಿವರಿಸಿದರು.
ಬೆಂಗಳೂರಿನಿಂದ ಬಹಳಷ್ಟು ಜನ ಹೊರಗೆ ಹೋಗಿದ್ದಾರೆ. ಅನ್ಲಾಕ್ ಆದ ನಂತರ ಅವರು ಮತ್ತೆ ವಾಪಸ್ ಬೆಂಗಳೂರಿಗೆ ಬರುತ್ತಾರೆ. ಇಂಥ ಸಂದರ್ಭಗಳಲ್ಲಿ ಹೆಚ್ಚು ಜನರು ಸೇರುವ ರೈಲು ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಬಸ್ ನಿಲ್ದಾಣದಲ್ಲಿ RAT TEST ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಲು ಯೋಚನೆ ಮಾಡುತ್ತಿರುವುದಾಗಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಕಾಂಗ್ರೆಸ್ ವಿರುದ್ಧ ಟೀಕೆ
ಕಾಂಗ್ರೆಸ್ ಪಕ್ಷದವರು ಎಲ್ಲವನ್ನು ಉಲ್ಲಂಘನೆ ಮಾಡುವ ಪ್ರವೃತ್ತಿಯನ್ನು ಹೊಂದಿದೆ. ಮೊದಲು ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂದರೆ ಯಾಕೆ ಹಾಕಿಸಿಕೊಳ್ಳಬೇಕು ಅಂದರು. ಮೊದಲು ಪ್ರಧಾನಿ ನರೇಂದ್ರ ಮೋದಿ ವ್ಯಾಕ್ಸಿನ್ ಹಾಕಿಸಿಕೊಳ್ಳಲಿ ಅಂದ್ರು. ಈಗ ವ್ಯಾಕ್ಸಿನ್ ಯಾಕೆ ಕೊಟ್ಟಿಲ್ಲ ಅಂತ ಕೇಳುತ್ತಿದ್ದಾರೆ.
ಬೆಲೆ ಏರಿಕೆ ವಿಚಾರದಲ್ಲಿ ಇಂತಹ ಕೋವಿಡ್ ಸಂದರ್ಭದಲ್ಲಿಯೂ ಮನೆಯಿಂದ ಹೊರಬಂದು ಹೋರಾಟ ಮಾಡುವುದು ಕೋವಿಡ್ ಸಂದರ್ಭವನ್ನು ಉಲ್ಲಂಘಿಸುವ ಪ್ರವೃತ್ತಿಯನ್ನು ತೋರಿಸುತ್ತದೆ. ಇದು ಕಾಂಗ್ರೆಸ್ ಪಕ್ಷದ ನಕಾರಾತ್ಮಕ ಪೊಲಿಟಿಕ್ಸ್ ಎಂದು ಬೊಮ್ಮಾಯಿ ಆರೋಪಿಸಿದರು.