ಬೆಂಗಳೂರು: ಪಕ್ಷದಲ್ಲಿ ಭುಗಿಲೆದ್ದಿರುವ ಆಂತರಿಕ ಭಿನ್ನಮತ, ಮೀಸಲಾತಿ ಬೇಡಿಕೆ ಹಾಗೂ ಸಂಪುಟ ವಿಸ್ತರಣೆ ಕಗ್ಗಂಟು ನಿವಾರಿಸಿಕೊಳ್ಳಲು ಹೈಕಮಾಂಡ್ ಜತೆ ಚರ್ಚಿಸುವುದಕ್ಕಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಸದ್ಯದಲ್ಲೇ ಮತ್ತೆ ದಿಲ್ಲಿಗೆ ತೆರಳಲಿದ್ದಾರೆ.
ಸರ್ಕಾರದ ಅಧಿಕೃತ ಮೂಲಗಳ ಪ್ರಕಾರ, ಸೋಮವಾರ ಬೆಳಗಾವಿಯಿಂದಲೇ ಅವರು ದಿಲ್ಲಿಗೆ ತೆರಳಲಿದ್ದಾರೆ.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಬಿಜೆಪಿಯಲ್ಲಿರುವ ಪ್ರಬಲ ವ್ಯಕ್ತಿಗಳ ಸಲಹೆ ಮೇರೆಗೆ ಬಂಡೆದಿದ್ದಾರೆ ಎಂಬುದು ಬೊಮ್ಮಾಯಿ ಅಭಿಮತವಾಗಿದೆ. ಚುನಾವಣೆ ಹೊಸ್ತಿಲಲ್ಲಿ ಅವರನ್ನು ಎದುರು ಹಾಕಿಕೊಂಡರೆ ಗೊಂದಲ ಸೃಷ್ಟಿಯಾಗುವುದು ನಿಶ್ಚಿತ ಎನ್ನಲಾಗಿದೆ. ಹೀಗಾಗಿ ವರಿಷ್ಠರ ಸಲಹೆ ಪಡೆದು ಸಂಪುಟ ವಿಸ್ತರಣೆ ಅಥವಾ ಪುನಾರ್ರಚನೆ ಮಾಡಲು ಅವರು ನಿರ್ಧರಿಸಿದ್ದಾರೆ.
ಇದನ್ನೂ ಓದಿ:ಗುಜರಾತ್: ಆಪರೇಷನ್ ಥಿಯೇಟರ್ ನ ಕಪಾಟಿನಲ್ಲಿ ಮಗಳ, ಬೆಡ್ ಕೆಳಗೆ ತಾಯಿ ಶವ ಪತ್ತೆ!
ಸಂಘದ ಹಿರಿಯರು ಕೂಡಾ ಸಂಪುಟ ವಿಸ್ತರಣೆ ಮಾಡುವಂತೆ ಸಲಹೆ ನೀಡಿರುವುದರಿಂದ ಬೊಮ್ಮಾಯಿ ಈಗ ವರಿಷ್ಠರತ್ತ ಮತ್ತೆ ಮುಖ ಮಾಡಿದ್ದು ಸೋಮವಾರ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ.