ಬೆಂಗಳೂರು: ಕಲಬುರಗಿಯಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಸಿ ಸುಳ್ಳು ಹೇಳುವ ಮೂಲಕ ಸಮುದಾಯದ ದಾರಿ ತಪ್ಪಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶಕ್ಕೆ ಸುಮಾರು 5 ಲಕ್ಷ ಜನ ಸೇರಿಸುತ್ತೇವೆ ಎಂದು ಬೊಬ್ಬೆ ಹಾಕಿದ್ದರು, ಆದರೆ ಸೇರಿದ್ದು 40 ರಿಂದ 50 ಸಾವಿರ ಜನ ಮಾತ್ರ. ಅಲ್ಲಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಸೇರಿ ಸಭೆಯಲ್ಲಿ ಮಾತನಾಡಿದ ಪ್ರತಿಯೊಬ್ಬರೂ ನನ್ನನ್ನು ಮತ್ತು ಮಲ್ಲಿಕಾರ್ಜುನ ಖರ್ಗೆಯವರನ್ನು ಗುರಿಯಾಗಿರಿಸಿಕೊಂಡು ಸುಳ್ಳುಗಳನ್ನು ಹೇಳಿ, ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಒಂದು ಆದೇಶದ ಪ್ರತಿ ಹಿಡಿದುಕೊಂಡು ಹೋಗಿ ನಾನು ಬರಿಗೈಲಿ ಬಂದಿಲ್ಲ, ಕುರಿಗಾರರಿಗೆ ದೊಡ್ಡ ಕಾರ್ಯಕ್ರಮ ನೀಡಿದ್ದೇವೆ. 20 ಸಾವಿರ ಮಂದಿಗೆ ತಲಾ 1.75 ಲಕ್ಷ ರೂ. ನಂತೆ 354 ಕೋಟಿ ರೂ. ವೆಚ್ಚ ಯೋಜನೆ ಎಂದು ಘೋಷಿಸಿದರು. 1.75 ಲಕ್ಷ ರೂ. ಪೈಕಿ ಶೇ. 50 ರಷ್ಟು ಹಣ ಎನ್‌ಸಿಡಿಸಿ ಮೂಲಕ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಶೇ.25 ಸರ್ಕಾರದ ಸಬ್ಸಿಡಿ ಮತ್ತು ಉಳಿದ ಶೇ.25 ಹಣ ಫಲಾನುಭವಿ ಹಾಕಬೇಕು. ಆದರೆ ಭಾಷಣದಲ್ಲಿ ಉಚಿತವಾಗಿ ಎಲ್ಲರಿಗೂ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನು ಸಚಿವ ಸಂಪುಟ ಸಭೆಯ ಮುಂದೆ ಕೂಡು ಇಡದೆ ತರಾತುರಿಯಲ್ಲಿ ಆದೇಶ ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಕುರುಬರನ್ನು ಸಚಿವರೇ ಮಾಡಿಲ್ಲ ಎಂದು ಆರೋಪ ಮಾಡಿದ್ದಾರೆ. ಎಚ್.ಎಂ ರೇವಣ್ಣ, ಎಚ್.ವೈ.ಮೇಟಿ ಮಂತ್ರಿಯಾಗಿದ್ದದ್ದು ಯಾರ ಸರ್ಕಾರದಲ್ಲಿ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಂಟಿಬಿ ನಾಗರಾಜ ಮಂತ್ರಿಯಾಗಿರಲಿಲ್ವಾ. ಈ ತರ ಯಾಕೆ ಸುಳ್ಳು ಹೇಳಬೇಕಪ್ಪ. ಮರಾಠ ಜಾತಿಯ ಸಂತೋಷ್ ಲಾಡ್, ನೇಕಾರ ಜನಾಂಗದ ಉಮಾಶ್ರೀ, ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಸೊರಕೆ, ಕಾಗೋಡು ತಿಮ್ಮಪ್ಪ, ಬಾಬುರಾವ್ ಚಿಂಚನಸೂರ್, ಪುಟ್ಟರಂಗಶೆಟ್ಟಿ ಇವರೆಲ್ಲ ಹಿಂದುಳಿದ ಜಾತಿಗಳಿಗೆ ಸೇರಿದವರಲ್ವಾ.
ಮುಖ್ಯಮಂತ್ರಿಯಾಗಿದ್ದ ನಾನು ಕುರುಬ ಜಾತಿಯವನಲ್ವಾ. ಆದರೂ ಬಿಜೆಪಿಯವರು ಕುರುಬರಿಗೆ ಕಾಂಗ್ರೆಸ್ ಪಕ್ಷ ಏನು ಮಾಡಿಲ್ಲ ಎನ್ನುತ್ತಾರೆ. ಕರ್ನಾಟಕದಲ್ಲಿ ಹಿಂದುಳಿದ ಜಾತಿಯವರು ಮುಖ್ಯಮಂತ್ರಿಯಾಗಿದ್ದರೆ ಅದು ಕಾಂಗ್ರೆಸ್‌ನಲ್ಲಿ ಮಾತ್ರ. ಕುರುಬರ ಬಗ್ಗೆ ತುಂಬಾ ಪ್ರೀತಿ ಇದ್ದರೆ ರಾಜೀನಾಮೆ ನೀಡಿ ಈಶ್ವರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ ನೋಡೋಣ ಅಥವಾ ಇನ್ಯಾವುದಾರೂ ಹಿಂದುಳಿದ ಜಾತಿಗೆ ಸೇರಿದವರನ್ನು ಮುಖ್ಯಮಂತ್ರಿ ಮಾಡಿ ನೋಡೋಣ ಎಂದು ಸವಾಲು ಹಾಕಿದರು.
ಆದರೆ ಕುರಿ ಮತ್ತು ಉಣ್ಣೆ ಮಹಾಮಂಡಲ ರಚನೆ ಮಾಡಿದ್ದು ಹಿಂದಿನ ನಮ್ಮ ಸರ್ಕಾರ. ನನ್ನ ಪ್ರಕಾರ ಈ ಕಾರ್ಯಕ್ರಮ ಅನುಷ್ಠಾನವೇ ಆಗಲ್ಲ. ಇದನ್ನು ಸುಮ್ಮನೆ ದೊಡ್ಡದಾಗಿ ಪ್ರಚಾರ ಮಾಡಲಾಗಿದೆ ಅಷ್ಟೆ. ಈಗ ಗೊಲ್ಲರು ಸೇರಿದಂತೆ ಹಿಂದುಳಿದ ಜಾತಿಯ ಜನ ಕುರಿ ಸಾಕಾಣಿಕೆ ಮಾಡುತ್ತಾರೆ. ನಮ್ಮ ಕಾಲದಲ್ಲಿ ಪಶುಭಾಗ್ಯ ಯೋಜನೆ ಜಾರಿ ಮಾಡಿದ್ದೆವು. ಇದರಡಿ 1,20,000 ಹಣವನ್ನು ಎಮ್ಮೆ, ಹಸು, ಕುರಿ, ಮೇಕೆ ಸಾಕಾಣಿಕೆ ಮಾಡುವವರಿಗಾಗಿ ನೀಡಲಾಗುತ್ತಿತ್ತು. ಈಗ ಈ ಕಾರ್ಯಕ್ರಮ ಎಲ್ಲಿದೆ ಎಂದು ಪ್ರಶ್ನಿಸಿದರು.
ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದು ಸಂತೋಷದ ವಿಚಾರ. ನಟನೆಯ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಹೊಂದಿದ್ದರು. ಅವರಂತಹ ನಟ ಕರ್ನಾಟಕದಲ್ಲಿ ಬೇರೊಬ್ಬರಿಲ್ಲ. ಕಾರ್ಯಕ್ರಮಕ್ಕೆ ಪ್ರತಿಪಕ್ಷ ನಾಯಕನಾದ ನನಗೆ ಅಧಿಕೃತ ಆಹ್ವಾನ ಕೊಡದ ಕಾರಣ ನಾನು ಹೋಗಲಿಲ್ಲ.
ಬಿಜೆಪಿಗೆ ನನ್ನ ಕಂಡರೆ ಎಷ್ಟು ಭಯ ಎಂದರೆ ದೊಡ್ಡಬಳ್ಳಾಪುರ, ಕಲಬುರಗಿ ಎಲ್ಲಿ ಹೋದರೂ ನನ್ನ ಬಗ್ಗೆ ಮಾತು. ತಮ್ಮ ಸರ್ಕಾರ ಹಿಂದುಳಿದ ಜಾತಿಗಳಿಗೆ ಏನು ಮಾಡಿದೆ ಹೇಳಲಿ, ನಮ್ಮ ಸರ್ಕಾರ ಏನು ಮಾಡಿದೆ ಹೇಳುತ್ತೇನೆ, ಈ ಬಗ್ಗೆ ಬಹಿರಂಗ ಚರ್ಚೆ ಆಗಲಿ. ಹಾನಗಲ್ ಉಪಚುನಾವಣೆಯಲ್ಲೇ ಈ ಸವಾಲು ಹಾಕಿದ್ದೆ ಆದರೆ ಇವತ್ತಿನವರೆಗೆ ಅವರು ಬರಲು ತಯಾರಾಗಿಲ್ಲ.
-ಸಿದ್ದರಾಮಯ್ಯ,