ಬೆಂಗಳೂರು: ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳು ಆವಿಷ್ಕಾರ, ಅಭಿವೃದ್ಧಿ ಮತ್ತು ಸಂಶೋಧನೆಗೆ ಆದ್ಯತೆ ನೀಡುವ ಮೂಲಕ ಯುವ ಪೀಳಿಗೆಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ಬುಧವಾರ ಮೈಸೂರು ರಸ್ತೆಯಲ್ಲಿನ “ಆರ್.ವಿ.ವಿಶ್ವವಿದ್ಯಾಲಯ’ ಉದ್ಘಾಟಿಸಿ ಮಾತನಾಡಿದ ಅವರು, ಹೊಸದಾಗಿ ಆರಂಭವಾಗುವ ಸಂಸ್ಥೆಗಳ ಫಲಿತಾಂಶಗಳು ಹತ್ತಾರು ವರ್ಷಗಳ ಬಳಿಕ ತಿಳಿಯುವುದರಿಂದ ಆರಂಭದಲ್ಲಿಯೇ ತಮ್ಮ ಗುರಿ ಏನು ಎಂಬ ದೂರದೃಷ್ಟಿತ್ವ ಹೊಂದಿರಬೇಕಾಗುತ್ತದೆ ಎಂದು ತಿಳಿಸಿದರು.
ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳುವುದಕ್ಕಾಗಿ ಸರ್ಕಾರವು ಕೌಶಲ್ಯಾಭಿವೃದ್ಧಿ ಯೋಜನೆ ಅನುಷ್ಠಾನ ಮಾಡಿದೆ. ತಾಂತ್ರಿಕ ಮತ್ತು ಆರ್ಥಿಕ ನೆರವು, ಸಹಕಾರ ನೀಡುತ್ತಿದೆ. ಆವಿಷ್ಕಾರಗಳ ಅರಿವು, ರಾಜ್ಯದ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಬಗೆಹರಿಸಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಹೇಳಿದರು.
ಈಗಾಗಲೇ ಶೈಕ್ಷಣಿಕ ಅನುಭವ ಹೊಂದಿರುವ ಆರ್.ವಿ. ವಿಶ್ವವಿದ್ಯಾಲಯ ಮಾದರಿಯಾಗಿದೆ. ಕೆಲವೇ ಸಿಬ್ಬಂದಿ, ವಿದ್ಯಾರ್ಥಿಗಳಿಂದ ಆರಂಭವಾಗಿ ತನ್ನ ಅವಿರತ ಶ್ರಮದಿಂದ ಬೃಹತ್ ಸಂಸ್ಥೆಯಾಗಿ ಬೆಳೆದಿದೆ. ಗುಣಮಟ್ಟದ ಶಿಕ್ಷಣ ನೀಡಲು ಉತ್ತಮ ಆಲೋಚನೆ, ಗುರಿ, ಉದೇಶ ಇದ್ದರೆ ಫಲಿತಾಂಶವು ಅತ್ಯುತ್ತಮವಾಗಿರುತ್ತದೆ ಎಂಬುದಕ್ಕೆ ಆರ್.ವಿ.ವಿವಿ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಮಾತನಾಡಿ, ಜಾಗತಿಕವಾಗಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲಕ್ಕೆ ಅಪಾರ ಬೇಡಿಕೆ ಇದೆ. ಇದಕ್ಕೆ ತಕ್ಕಂತೆ ರಾಜ್ಯದಲ್ಲಿ ಉದ್ಯೋಗ ಆಧಾರಿತ ಶಿಕ್ಷಣ ನೀಡಲಾಗುತ್ತಿದೆ. ಎಲ್ಲ ವಲಯಗಳಲ್ಲೂ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸುವ ಜೊತೆಗೆ ಡಿಜಿಟಲ್ ಎಕಾನಮಿ ಮಿಷನ್ ಯೋಜನೆಯು ಸಮಗ್ರ ಬೆಳವಣಿಗೆಗೆ ಒತ್ತು ನೀಡಲಾಗಿದೆ. ಸಿಂಗಾಪುರದ ನಂತರ ಡಿಜಿಟಲ್ ಎಕಾನಮಿಗೆ ಆದ್ಯತೆ ನೀಡಿರುವುದು ರಾಜ್ಯದಲ್ಲಿ ಮಾತ್ರ ಎಂದು ಹೇಳಿದರು.
ಇದನ್ನೂ ಓದಿ :ಗೋವಾ: ತೃಣಮೂಲ ಕಾಂಗ್ರೆಸ್ ಪ್ರವೇಶದಿಂದ ಬಿಜೆಪಿಗೆ ಭೀತಿ: ಟ್ರೋಜನ್ ಡಿಮೆಲೊ
ಕರ್ನಾಟಕವು ಜಾಗತಿಕ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಉಜ್ವಲ ಅವಕಾಶಗಳಿಗೆ ಹೇಳಿಮಾಡಿಸಿದ ರಾಜ್ಯವಾಗಿದೆ. ಇಡೀ ದೇಶದಲ್ಲಿ ಶಿಕ್ಷಣ ರಂಗದಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೆ, ಎಂಟು ಸಾವಿರ ಸ್ಮಾರ್ಟ್ ಕ್ಲಾಸ್ ರೂಮುಗಳನ್ನು ತೆರೆಯಲಾಗಿದ್ದು, 3.50 ಲಕ್ಷ ಆಧುನಿಕ ಕೋರ್ಸುಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ಲಭ್ಯವಿವೆ. ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್ ಗಳನ್ನು ವಿತರಿಸಲಾಗಿದೆ ಎಂದು ಅವರು ವಿವರಿಸಿದರು.
ವಿವಿ ಕುಲಾಧಿಪತಿ ಡಾ. ಎಂ.ಕೆ. ಪಾಂಡುರಂಗ ಶೆಟ್ಟಿ, ಕುಲಪತಿ ಡಾ. ವೈ.ಎಸ್.ಆರ್.ಮೂರ್ತಿ, ಸಹ ಕುಲಪತಿ ಪ್ರೊ. ಎ.ವಿ.ಎಸ್.ಮೂರ್ತಿ, ಖಜಾಂಚಿ ಕೆ.ಜಿ. ಸುಬ್ಬರಾಮಶೆಟ್ಟಿ ಉಪಸ್ಥಿತರಿದ್ದರು.