Advertisement
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಿರಿಯ ಐಪಿಎಸ್ ಅಧಿಕಾರಿಗಳ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರು ಸುತ್ತ ಹಲವು ಭೂ ವಿವಾದಗಳಿದ್ದು, ಸಿವಿಲ್ ವಿಚಾರಗಳಲ್ಲಿ ಸಾಮಾನ್ಯವಾಗಿ ಪೊಲೀಸರು ಕೈಹಾಕಬಾರದು. ಆದರೆ, ಈ ವ್ಯವಹಾರಗಳಲ್ಲಿ ಪೊಲೀಸರ ಮಧ್ಯಪ್ರವೇಶದ ಬಗ್ಗೆ ದೂರುಗಳು ಕೇಳಿಬಂದಿವೆ. ಇದರಲ್ಲಿ ಅನಗತ್ಯ ಮೂಗು ತೂರಿಸಬಾರದು. ಜತೆಗೆ ನದಿಪಾತ್ರದಿಂದ ಅಕ್ರಮವಾಗಿ ಮರಳು ಸಾಗಿಸುವವರೊಂದಿಗೂ ಕೈಜೋಡಿಸಬಾರದು ಎಂದರು.
Related Articles
ಅಪರಾಧ ಪ್ರಕರಣಗಳ ನಿಯಮಿತ ನಿರ್ವಹಣೆ, ವಿಶ್ಲೇಷಣೆ, ತಪ್ಪಿತಸ್ಥರಿಗೆ ಶಿಕ್ಷೆ ಒದಗಿಸುವಲ್ಲಿ ಯಾವುದೇ ರೀತಿ ಕಾನೂನು ಪ್ರಕ್ರಿಯೆಯಲ್ಲಿ ಲೋಪ ಉಂಟಾಗದಂತೆ ಎಚ್ಚರ ವಹಿಸಲು ಡಿಜಿಪಿಯಿಂದ ಹಿಡಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳವರೆಗೆ ಅಧಿಕಾರಿಗಳು ಪ್ರತ್ಯೇಕ ಡ್ಯಾಶ್ ಬೋರ್ಡ್ ಹೊಂದಬೇಕು. ಇದರಲ್ಲಿ ಅಪರಾಧ ಕೃತ್ಯಗಳ ಮಾಹಿತಿಯನ್ನು ಕ್ರೋಡೀಕರಿಸಿರಬೇಕು ಎಂದು ಸೂಚಿಸಿದರು.
Advertisement
ರಾಜ್ಯದಲ್ಲಿ ಅಪರಾಧ ಪ್ರಕರಣಗಳಲ್ಲಿ ಶಿಕ್ಷಾ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹಿನ್ನಡೆ ಕಂಡಿದೆ. ಈ ಹಿನ್ನೆಲೆಯಲ್ಲಿ ಡ್ಯಾಶ್‌ಬೋರ್ಡ್ ಅನುಕೂಲ ಆಗುತ್ತದೆ ಎಂದು ಅಭಿಪ್ರಾಯಪಟ್ಟ ಮುಖ್ಯಮಂತ್ರಿ, ಅಪರಾಧ ಪ್ರಕರಣಗಳ ಸಂಬಂಧ ತನಿಖೆ ಬಗ್ಗೆ ಪೊಲೀಸ್ ಮಹಾನಿರ್ದೇಶಕರು, ಆಯುಕ್ತರು, ಐಜಿಪಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು ಎಂದರು.
ರಾಜ್ಯ ಪೊಲೀಸ್ ಇಲಾಖೆಯ ಬಲವರ್ಧನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೆಎಸ್‌ಆರ್‌ಪಿಗೆ ಮತ್ತೂಂದು ಬೆಟಾಲಿಯನ್, ಹೊಸದಾಗಿ ಆರು ವಿಧಿ ವಿಜ್ಞಾನ ಪ್ರಯೋಗಾಲಯಗಳ (ಎಫ್ಎಸ್‌ಎಲ್) ಸ್ಥಾಪನೆ ಹಾಗೂ ಅಗ್ನಿ ಶಾಮಕ ಮತ್ತು ತುರ್ತು ಸೇವಾ ದಳಕ್ಕೆ ಹೊಸ ಅತ್ಯಾಧುನಿಕ ಉಪಕರಣ ಖರೀದಿಗೆ ಮಂಜೂರಾತಿ ನೀಡಲಾಗಿದೆ. ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳಿಗೆ ಕೇಂದ್ರ ರಕ್ಷಣ ತರಬೇತಿ (ಎನ್‌ಡಿಎ) ಮಟ್ಟದ ತರಬೇತಿಗೆ ಹೊಸ ಕೇಂದ್ರ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗಿದೆ. ಆರ್ಥಿಕ ವಂಚನೆಗಳು ಹಾಗೂ ಸೈಬರ್ ಕ್ರೈಂ ನಿಯಂತ್ರಣಕ್ಕೆ ಪ್ರತ್ಯೇಕ ತಾಂತ್ರಿಕ ವಿಭಾಗವನ್ನು ರಚಿಸಲಾಗುತ್ತದೆ ಎಂದು ವಿವರಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಹಾಗೂ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮತ್ತಿತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಕಾಫಿ ಟೇಬಲ್ ಬುಕ್ ಅನ್ನು ಬಿಡುಗಡೆ ಮಾಡಲಾಯಿತು. ಅಲ್ಲದೆ, ಅಪರಾಧ ಹಿನ್ನೆಲೆವುಳ್ಳ ವ್ಯಕ್ತಿಗಳ ಮುಖ ಚಹರೆ ಗುರುತಿಸುವ ವ್ಯವಸ್ಥೆ (ಫೇಶಿಯಲ್ ರೆಕಗ್ನಿಷನ್ ಸಿಸ್ಟ್‌ಂ)ಗೆ ಚಾಲನೆ ದೊರೆಯಿತು.