Advertisement

ಬಿಎಸ್‌ವೈ ಸಂವಹನಕಾರನಿಗೆ ಒಲಿದ ಸಿಎಂ ಪಟ್ಟ!

09:38 AM Jul 28, 2021 | Team Udayavani |

ದಾವಣಗೆರೆ: ಬಿ.ಎಸ್‌. ಯಡಿಯೂರಪ್ಪ ಅವರಿಗೆ ಅಘೋಷಿತ ಆಪ್ತ ಸಂವಹನಕಾರರಾಗಿ ಕೆಲಸ ಮಾಡುತ್ತ ಬಂದಿರುವ ಬಸವರಾಜ ಬೊಮ್ಮಾಯಿ ಅವರಿಗೆ ಯಡಿಯೂರಪ್ಪ ಅವರ ಉತ್ತರಾಧಿಕಾರಿ ಪಟ್ಟ ಒಲಿದು ಬಂದಂತಾಗಿದೆ.

Advertisement

ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಪರಮಾಪ್ತರಲ್ಲಿ ಒಬ್ಬರು. ತಾವು ಮುಖ್ಯ ಮಂತ್ರಿ ಆದಾಗಲೆಲ್ಲ ಯಡಿಯೂರಪ್ಪ ಅವರು ಬೊಮ್ಮಾಯಿ ಅವರನ್ನು ತಮ್ಮ ಹತ್ತಿರದಲ್ಲಿಯೇ ಇಟ್ಟುಕೊಂಡಿರುತ್ತಿದ್ದರು. ಪಕ್ಷ ಹಾಗೂ ರಾಜಕೀಯ ವಿಚಾರವಾಗಿ ಕಂಡು ಬರುವ ಬೆಳವಣಿಗೆ, ಬದಲಾ ವಣೆ, ಸರಕಾರ, ಪಕ್ಷದ ವಿಷಯವಾಗಿ ವಿಚಾರ ವಿಮರ್ಶೆ ಹಾಗೂ ಪ್ರಮುಖ ನಿರ್ಧಾರಗಳನ್ನು ಯಡಿಯೂರಪ್ಪ ಪರವಾಗಿ ಕೇಂದ್ರದ ನಾಯಕರಿಗೆ ಇಂಗ್ಲಿಷ್‌ ಇಲ್ಲವೇ ಹಿಂದಿ ಭಾಷೆ ಯಲ್ಲಿ ಸ್ಪಷ್ಟವಾಗಿ ತಿಳಿಸುವಲ್ಲಿ ಬೊಮ್ಮಾಯಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಹೀಗಾಗಿ ಯಡಿಯೂರಪ್ಪ ಅವರು ದಿಲ್ಲಿಗೆ ಹೋಗುವಾಗಲೆಲ್ಲ ಬಸವರಾಜ ಬೊಮ್ಮಾಯಿ ಅವರನ್ನು ಕರೆದುಕೊಂಡೇ ಹೋಗುತ್ತಿದ್ದರು.

ಯಡಿಯೂರಪ್ಪ ಅವರು ಬೊಮ್ಮಾಯಿ ಅವರನ್ನು ಕೇವಲ ಆಪ್ತ ಸಂವಹನಕಾರರನ್ನಾಗಿ ಮಾಡಿಕೊಳ್ಳದೇ ಪ್ರಮುಖ ರಾಜಕೀಯ ವಿದ್ಯಮಾನಗಳ ಬಗ್ಗೆ ಸಲಹೆ ಗಳನ್ನೂ ಪಡೆದು ಕೊಳ್ಳುತ್ತಿದ್ದರು. ಪಕ್ಷದ ಆಂತರಿಕ, ಬಹಿರಂಗವಷ್ಟೇ ಅಲ್ಲದೆ ಯಡಿಯೂರಪ್ಪ ಅವರ ಕೆಲವು ವೈಯಕ್ತಿಕ ವಿಚಾರದಲ್ಲಿಯೂ ಬೊಮ್ಮಾಯಿ ವಾಸ್ತವಿಕತೆಯ ಚಿತ್ರಣ ಅನಾವರಣಗೊಳಿಸುವ ಕೈಗನ್ನಡಿಯಂತೆ ಕೆಲಸ ಮಾಡಿದ್ದಾರೆ. ಈ ಕಾರಣ ದಿಂದಾಗಿ ಬೊಮ್ಮಾಯಿ ಅವರಿಗೆ ಕೇಂದ್ರದ ಬಹುತೇಕ ಎಲ್ಲ ನಾಯಕರೊಂದಿಗೆ ಹಲವು ವರ್ಷಗಳಿಂದ ಉತ್ತಮ ಸಂವಹನ, ಸ್ನೇಹ ಬೆಳೆಸಲು ಸಾಧ್ಯವಾಗಿತ್ತು. ಕೇಂದ್ರದ ಪ್ರಮುಖರ ನಾಯಕರೊಂದಿಗೆ ಯಡಿಯೂರಪ್ಪ ಅವರ ಪರವಾಗಿ ಮಾಡಿದ ಸಂವಹನ‌ ಕಾರ್ಯ ಈಗ ರಾಜ್ಯದ ಮುಖ್ಯಮಂತ್ರಿ ಯನ್ನಾಗಿಸುವಲ್ಲಿಯೂ ಪರೋಕ್ಷವಾಗಿ ಸಹಕಾರಿಯಾಯಿತು ಎಂಬುದನ್ನು ಅವರ ಆಪ್ತರು ವಿಶ್ಲೇಷಿಸುತ್ತಾರೆ. ರಾಜಕೀಯ  ತಂತ್ರಜ್ಞ:  ಬಸವರಾಜ ಬೊಮ್ಮಾಯಿ ರಾಜಕಾರಣದ ಎಲ್ಲ ಪಟ್ಟುಗಳನ್ನು ಬಲ್ಲವರೂ ಹೌದು. ಬಿಜೆಪಿ ಆಡಳಿತಾವಧಿಯಲ್ಲಿ ಎದುರಾದ ಹತ್ತು ಹಲವು ಸಂಕಷ್ಟಗಳ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಸರಕಾರದ ಕಾರ್ಯವನ್ನು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾವೇರಿಯಲ್ಲಿ ಗೋಲಿಬಾರ್‌ ನಡೆದು ಇಬ್ಬರು ರೈತರು ಮೃತಪಟ್ಟ ಘಟನೆಯನ್ನು ವಿಪಕ್ಷದವರು ಬಳಸಿಕೊಂಡು ಸರಕಾರಕ್ಕೆ ಮುಖಭಂಗ ಮಾಡಲು ಮುಂದಾದಾಗ ಅದನ್ನು ನಾಜೂಕಾಗಿ ನಿಭಾಯಿಸಿದ್ದು ಒಂದು ಉದಾಹರಣೆಯಷ್ಟೆ.

ಬಿಎಸ್‌ವೈ ಮರಳಿ ಪಕ್ಷಕ್ಕೆ ಕರೆ ತಂದ ಚಾಣಾಕ್ಷ  :

ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಆಪ್ತರಾಗಿದ್ದರೂ ಈ ಆಪ್ತತೆಯನ್ನು ತಮ್ಮ ರಾಜಕೀಯ ಭವಿಷ್ಯಕ್ಕೆ ಅಡ್ಡಿಯಾಗದಂತೆ ನೋಡಿಕೊಂಡ ಚಾಣಾಕ್ಷ. ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಕೆಜೆಪಿ ಪಕ್ಷ ಕಟ್ಟಿದಾಗ ಬೊಮ್ಮಾಯಿ ಬಿಜೆಪಿಯಲ್ಲಿಯೇ ಉಳಿದು ತಮ್ಮ ರಾಜಕೀಯ ಭವಿಷ್ಯಕ್ಕೆ ಬಿಜೆಪಿಯೇ ಬೆಳಕು ಎಂಬುದನ್ನು ನಿರ್ಧರಿಸಿದ್ದರು. ಬಳಿಕ ಯಡಿಯೂರಪ್ಪ ಅವರನ್ನು ಮರಳಿ ಬಿಜೆಪಿಗೆ ಕರೆತರುವಲ್ಲಿಯೂ ಬೊಮ್ಮಾಯಿಯವರೇ ಪ್ರಮುಖ ಪಾತ್ರ ವಹಿಸಿದ್ದು ವಿಶೇಷ.

Advertisement

 

-ಎಚ್‌.ಕೆ. ನಟರಾಜ

 

Advertisement

Udayavani is now on Telegram. Click here to join our channel and stay updated with the latest news.

Next