ಬೆಂಗಳೂರು : ತಮಿಳುನಾಡು ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರ ಸಣ್ಣ ವಿಷಯಗಳನ್ನು ದೊಡ್ಡದಾಗಿ ಬಿಂಬಿಸುವ ಮೂಲಕ ರಾಜಕೀಯ ಸಾಹಸ ಪ್ರದರ್ಶನ ಮಾಡುತ್ತಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮಿಳುನಾಡು ನೀರಿನ ವಿಷಯವಾಗಿ ಯಾವಾಗಲೂ ಕರ್ನಾಟಕದೊಂದಿಗೆ ತಕರಾರು ಮಾಡುತ್ತಲೇ ಬಂದಿದೆ ಎಂದರು.
ಅದು ಕಾವೇರಿ ನದಿನೀರು ಹಂಚಿಕೆ ಇರಬಹುದು, ಕಾವೇರಿ ಕಣಿವೆಯಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಗಳೇ ಆಗಿರಬಹುದು. ಅವುಗಳ ಬಗ್ಗೆ ತಮಿಳುನಾಡು ತಕರಾರು ಮಾಡುತ್ತಲೇ ಬಂದಿದೆ. ಕಾವೇರಿ ನ್ಯಾಯ ಮಂಡಳಿ ರಚನೆ ಆದ ಮೇಲೆ ಅವರಿಗೆ ಕಷ್ಟವಾಗುತ್ತಿದೆ ಎಂದು ಅವರು ಹೇಳಿದರು.
ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕೂ ಅನುಕೂಲವಾಗುತ್ತದೆ. ತಮಿಳುನಾಡು ರಾಜ್ಯಕ್ಕೂ ಅನುಕೂಲ ಆಗುತ್ತದೆ. ಅವರ ಪಾಲಿನ ನೀರು ಹರಿಸಲಾಗುವುದು. ಅದಕ್ಕೆಎಲ್ಲಿಯೂ ತಡೆ ಉಂಟಾಗುವುದಿಲ್ಲ. ಹೆಚ್ಚುವರಿ ನೀರನ್ನು ಮಾತ್ರ ಕರ್ನಾಟಕ ಬಳಕೆ ಮಾಡುತ್ತದೆ. ಉಭಯ ರಾಜ್ಯಗಳಿಗೆ ಯೋಜನೆಯಿಂದ ಲಾಭವಾಗುತ್ತದೆ. ಆದರೂ ಕೂಡ ಈ ಯೋಜನೆಯನ್ನು ತಮಿಳುನಾಡು ಸರ್ಕಾರ ವಿರೋಧಿಸುತ್ತಿದೆ. ಅದೇ ರೀತಿ ಮಾರ್ಕಂಡೇಯ ಯೋಜನೆಗೆ ತಮಿಳುನಾಡಿನ ತಕರಾರು ಮೊದಲಿನಿಂದಲೂ ಇದೆ. ಅಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದೊಂದು ರಾಜಕೀಯ ಸಾಹಸ. ಸಣ್ಣ ವಿಷಯಗಳನ್ನು ದೊಡ್ಡದು ಮಾಡಿ ರಾಜಕೀಯ ಸಾಹಸ ಪ್ರದರ್ಶನ ಮಾಡಲಾಗುತ್ತಿದೆ. ರಾಜಕೀಯಕ್ಕೆ ಏನು ಬೇಕು ಅದನ್ನು ತಮಿಳುನಾಡು ಮಾಡುತ್ತಿದೆ. ಆದರೆ ನಾವು ಕಾನೂನಾತ್ಮಕವಾಗಿ ಸರಿಯಾಗಿ ಇದ್ದೇವೆ. ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ ಎಂದರು.
ಇದನ್ನೂ ಓದಿ : ಶೃಂಗೇರಿ ಅಪ್ರಾಪ್ತೆ ಮೇಲೆ 42 ಕೀಚಕರಿಂದ ಅತ್ಯಾಚಾರ ಪ್ರಕರಣ:30 ಚಾರ್ಜ್‌ಶೀಟ್ ಸಲ್ಲಿಕೆ
ತಮಿಳುನಾಡು ರಾಜ್ಯಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬರೆದಿರುವ ಪತ್ರಕ್ಕೆ ತಮಿಳುನಾಡು ಸ್ಪಂದಿಸಲೇ ಬೇಕಾಗುತ್ತದೆ. ಏಕೆಂದರೆ ಇದು ಕುಡಿಯುವ ನೀರಿನ ಯೋಜನೆ. ಕೆ ಆರ್ ಎಸ್ ಬಿಟ್ಟರೆ ಕಾವೇರಿ ನದಿ ನೀರನ್ನು ಶೇಖರಿಸಿಡಲು ಬೇರೆ ಸ್ಥಳ ಇಲ್ಲ. ಮೇಕೆದಾಟು ಯೋಜನೆಯಿಂದ ಸಂಕಷ್ಟ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಾಗುತ್ತದೆ. ಅವರಿಗೂ ಅನುಕೂಲ ನಮಗೂ ಅನುಕೂಲ ಎಂದು ಸಚಿವರು ಯೋಜನೆ ಬಗ್ಗೆ ವಿವರಿಸಿದರು.
15ನೇ ಹಣಕಾಸು ಆಯೋಗ ದಿಂದ ರಾಜ್ಯಕ್ಕೆ 5 ಸಾವಿರಕ್ಕೂ ಹೆಚ್ಚು ಕೋಟಿ ರೂಪಾಯಿ ಹಣ ಬರಬೇಕೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ. ನಾವು ಕೂಡ ಒತ್ತಾಯ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ದೆಹಲಿಗೆ ಹೋಗಿ ಮತ್ತೊಮ್ಮೆ ಒತ್ತಾಯ ಮಾಡುತ್ತೇವೆ.
– ಬಸವರಾಜ್ ಬೊಮ್ಮಾಯಿ ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರು.