ಬೆಂಗಳೂರು: ರಾಜಧಾನಿ ಬೆಂಗಳೂರು ಸಹಿತ ರಾಜ್ಯಾದ್ಯಂತ ಮಾದಕ ವಸ್ತುಗಳ ಮಾರಾಟ ಜಾಲ ಸಕ್ರಿಯವಾಗಿರುವ ಬಗ್ಗೆ ವಿಧಾನಸಭೆಯಲ್ಲಿ ಪಕ್ಷಾತೀತವಾಗಿ ಪ್ರಸ್ತಾವಿಸಿದ ಸದಸ್ಯರು ಕಠಿನ ಕ್ರಮಕ್ಕೆ ಆಗ್ರಹಿಸಿದರು.
ಶಾಲಾ-ಕಾಲೇಜುಗಳ ಬಳಿ ಯಾವುದೇ ಭಯ ಇಲ್ಲದೆ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಯುವ ಸಮೂಹ ಚಟಕ್ಕೆ ಬಲಿಯಾಗುತ್ತಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನ
ಕೆ.ಜೆ.ಜಾರ್ಜ್ ಅವರು, ವಿಷಯ ಪ್ರಸ್ತಾವಿಸಿದ ಸಂದರ್ಭದಲ್ಲಿ ಪಕ್ಷಾತೀತವಾಗಿ ಸದಸ್ಯರು ಮಾದಕ ವಸ್ತು ಜಾಲ ಹಬ್ಬುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಗೃಹ ಸಚಿವ
ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯದಲ್ಲಿ ಮಾದಕ ವಸ್ತುಗಳ ವಿರುದ್ಧ ಸಮರ ಸಾರಲಾಗಿದ್ದು, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಹಂತದಲ್ಲೂ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ಮಾತೇ ಇಲ್ಲ ಎಂದು ಹೇಳಿದರು.
ಆನ್‌ಲೈನ್ ಮೂಲಕ ಮಾದಕ ವಸ್ತು ಮಾರಾಟ ಮಾಡಲಾಗುತ್ತಿದೆ. ಡಾರ್ಕ್ ವೆಬ್‌ಗಳು ಅದಕ್ಕಾಗಿಯೇ ಕಾರ್ಯನಿರ್ವಹಿಸುತ್ತಿವೆ. ಈ ಜಾಲಗಳ ಮೂಲ ಹುಡುಕುವ ಕೆಲಸದಲ್ಲಿ ನಾವು ನಿರತರಾಗಿದ್ದೇವೆ ಎಂದರು.