Advertisement

ನವಯುಗಕ್ಕೆ ನಾಂದಿ ಹಾಡಿದ ಕೀರ್ತಿ ಬಸವಣ್ಣನವರದು

12:09 PM May 08, 2019 | Team Udayavani |

ಬೆಳಗಾವಿ: ಕಾಯಕಯೋಗಿ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮ ಬೆಳಗಾವಿಯಲ್ಲಿ ಮಂಗಳವಾರ ಬಹಳ ವೈಭವದಿಂದ ನಡೆಯಿತು. ಬೆಳಗ್ಗೆ ಜಿಲ್ಲಾಡಳಿತದ ವತಿಯಿಂದ ಗೋವಾವೇಸ್‌ದ ಬಸವೇಶ್ವರ ವೃತ್ತದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ವಿಶಾಲ್ ಆರ್‌. ಬಸವಣ್ಣನವರ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Advertisement

ಈ ಸಂದರ್ಭದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದಲ್ಲದೇ ವಿವಿಧ ಲಿಂಗಾಯತ ಸಂಘಟನೆಗಳ ವತಿಯಿಂದ ಬಸವ ಜಯಂತಿ ಅಂಗವಾಗಿ ವಿಭಿನ್ನ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿತ್ತು.

ಶಾಸಕರಿಂದ ಪೂಜೆ; ಬೆಳಗಾವಿಯ ಬಸವ ದಳ, ಬಸವ ಸೇವಾ ಸಮಿತಿ, ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಅನಿಲ ಬೆನಕೆ ಬಸವೇಶ್ವರರ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಸವೇಶ್ವರರ ವಚನ ಸಾಹಿತ್ಯ, ತತ್ವಗಳು ಹಾಗೂ ಅವರ ಮಾರ್ಗದರ್ಶನ ನಮ್ಮೆಲ್ಲರಿಗೂ ಮಾದರಿಯಾಗಿವೆ. ಈ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ಭವ್ಯ ಮೆರವಣಿಗೆ: ನಂತರ ಸಂಜೆ ನಗರದ ಚನ್ನಮ್ಮ ವೃತ್ತದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಕೇಂದ್ರ ಸಮಿತಿ ಆಶ್ರಯದಲ್ಲಿ ನಡೆದ ಭವ್ಯ ಮೆರವಣಿಗೆಗೆ ನಗರ ಪೊಲೀಸ್‌ ಆಯುಕ್ತ ಲೋಕೇಶಕುಮಾರ, ಡಿಸಿಪಿ ಸೀಮಾ ಲಾಟಕರ ಚಾಲನೆ ನೀಡಿದರು. ವಿವಿಧ ಜಾನಪದ ಕಲಾವಿದರು ಹಾಗೂ ಲಿಂಗಾಯತ ಸಂಘಟನೆಗಳ ಸದಸ್ಯರು ತಮ್ಮ ಕಲಾ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದರು. ಸಾಮೂಹಿಕ ನೃತ್ಯ, ಜಗ್ಗಲಗಿ, ಡೊಳ್ಳು ಕುಣಿತ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿದ್ದವು. ಈ ಸಂದರ್ಭದಲ್ಲಿ ಲಿಂಗಾಯತ ಸಂಘಟನೆ ಮುಖಂಡರಾದ ಕಲ್ಯಾಣರಾವ್‌ ಮುಚಳಂಬಿ, ಡಾ. ಎಚ್.ಬಿ. ರಾಜಶೇಖರ, ಮಾಜಿ ಮಹಾಪೌರ ಸಿದ್ದನಗೌಡ ಪಾಟೀಲ, ಮಾಜಿ ಉಪಮಹಾಪೌರ ಜ್ಯೋತಿ ಭಾವಿಕಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next