Advertisement

ಬಸವಣ್ಣನ ದಿಲ್ಲಿಯಾತ್ರೆ

10:04 AM Jan 26, 2020 | Lakshmi GovindaRaj |

ನಾಳೆ ಬೆಳಗಾದರೆ ಗಣತಂತ್ರದ ಹಬ್ಬದ ಸಂಭ್ರಮ, ರಾಜಧಾನಿ ದೆಹಲಿಯನ್ನು ರಂಗೇರಿಸಲಿದೆ. ರಾಜಪಥದಲ್ಲಿ ನಡೆಯುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಈ ಬಾರಿ ಕರ್ನಾಟಕದ ಕಲಾರಚನೆ, “ಅನುಭವ ಮಂಟಪ’ ಪಾಲ್ಗೊಳ್ಳುತ್ತಿದೆ. 12ನೇ ಶತಮಾನದ ಬಸವಣ್ಣನ ಪರಿಕಲ್ಪನೆಯನ್ನು ಸ್ತಬ್ಧಚಿತ್ರದಲ್ಲಿ ಮೂಡಿಸಿದ ಕಲಾವಿದರು, ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ…

Advertisement

ಈ ಬಾರಿ ದೆಹಲಿಯ ರಾಜಪಥದ ಮಂಜಿನ ಬೆಳಗಿನಲ್ಲಿ ಅನುಭವ ಮಂಟಪದ ಬೆಳಕು ಚೆಲ್ಲಲಿದೆ. ಗಣರಾಜ್ಯೋತ್ಸವಕ್ಕೆ ಒಂದು ತಿಂಗಳ ಮೊದಲು, 9 ಅಡಿಯ ಎತ್ತರದ ಬಸವಣ್ಣನ ಬೃಹತ್‌ ವಿಗ್ರಹವನ್ನು, ಶರಣರ ವಿಗ್ರಹಗಳನ್ನು ಬೆಂಗಳೂರಿನಲ್ಲಿಯೇ ಸಿದ್ಧಪಡಿಸಿದೆವು. ಅಲ್ಲಿಂದ ಮೂರು ಟ್ರಕ್ಕುಗಳಲ್ಲಿ ಹೊರಟ ಈ ಕಲಾಮಾದರಿಗಳು, ಬಂದು ತಲುಪಿದ್ದು ದೆಹಲಿಯ ರಾಷ್ಟ್ರೀಯ ರಂಗಶಾಲಾ ಕ್ಯಾಂಪ್‌ಗೆ. ಜ.26ರ ಸ್ತಬ್ಧಚಿತ್ರ ಮೆರವಣಿಗೆಗೆ ಆಯ್ಕೆಯಾದ ರಾಜ್ಯಗಳ ಕಲಾವಿದರೆಲ್ಲ, ಇಲ್ಲಿ ಜಮಾವಣೆ ಆಗಿರುತ್ತಾರೆ. ಸ್ತಬ್ಧಚಿತ್ರದ ರಚನೆಗಳು ಸಿದ್ಧಗೊಳ್ಳುವ ಕಲಾ ಅಖಾಡ ಇದಾಗಿದೆ.

ಟ್ಯಾಬ್ಲೋ ಕೆಲಸಗಳು ರಕ್ಷಣಾ ಇಲಾಖೆಯ ಅಡಿಯಲ್ಲಿ ನಡೆಯುವುದರಿಂದ, ಬಹಳ ಬಿಗಿಭದ್ರತೆ ಇರುತ್ತದೆ. ಅನಗತ್ಯ ವಸ್ತುಗಳನ್ನು ಒಳತರುವ ಹಾಗಿಲ್ಲ. ಪ್ರತಿ ವಸ್ತುಗಳೂ ಪರೀಕ್ಷೆಗೊಳಪಡುತ್ತವೆ. ಇಲ್ಲಿಗೆ ಬರುವ ಕಲಾವಿದರ ಮೇಲೆ ಯಾವುದೇ ಕ್ರಿಮಿನಲ್‌ ಕೇಸ್‌ ಇರುವಂತಿಲ್ಲ. ರಾಜ್ಯ ಪೊಲೀಸ್‌, ದೆಹಲಿ ಪೊಲೀಸ್‌, ಪ್ರಧಾನ ಮಂತ್ರಿ ಭದ್ರತಾಪಡೆಯಿಂದ ಕ್ಲಿಯರೆನ್ಸ್‌ ಪತ್ರ ಪಡೆದೇ, ಇಲ್ಲಿಗೆ ಬರಬೇಕು. ತುಂಬಾ ಶಿಸ್ತಿನಿಂದ, ಫ್ಯಾಕ್ಟರಿಯ ಕಾರ್ಮಿಕರಂತೆ ಕಾರ್ಯನಿರ್ವಹಿಸುವ ವಾತಾವರಣ ಇಲ್ಲಿರುತ್ತದೆ.

ಅನುಭವ ಮಂಟಪವನ್ನು ನಾವು ಇದೇ ಮೊದಲ ಬಾರಿಗೆ ತೆಗೆದುಕೊಂಡು ಹೋಗಿದ್ದಲ್ಲ. ಈ ಹಿಂದೆ 3 ಸಲ ಈ ಕಲ್ಪನೆಯವನ್ನು ಕಮಿಟಿಯ ಮುಂದಿಟ್ಟಿದ್ದೆವು. ಆದರೆ, ಒಪ್ಪಿಗೆ ಸಿಕ್ಕಿರಲಿಲ್ಲ. ಈ ಬಾರಿ ಅನುಭವ ಮಂಟಪದ ಜೊತೆಗೆ, ಉಡುಪಿ ಸಮೀಪದ ಮೆಕ್ಕಿಕಟ್ಟೆಯ ಗೊಂಬೆಗಳು, ಲಕ್ಕುಂಡಿ ದೇವಾಲಯದ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದೆವು. ಅನುಭವ ಮಂಟಪ ಜಗತ್ತಿನ ಮೊದಲ ಧಾರ್ಮಿಕ, ಸಾಮಾಜಿಕ ಪಾರ್ಲಿಮೆಂಟ್‌ ಎಂಬ ಸಂಗತಿಯನ್ನು ಒತ್ತಿ ಹೇಳಿದ ಮೇಲೆ, ಈ ಸ್ತಬ್ಧಚಿತ್ರಕ್ಕೆ ಒಪ್ಪಿಗೆ ಸಿಕ್ಕಿತು.

ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಕನ್ನಡ ಪದಗಳನ್ನು ಬಳಸಲು ಅನುಮತಿ ಸಿಕ್ಕಿರುವುದು ಖುಷಿಯ ಸಂಗತಿ. “ಅನುಭವ್‌ ಮಂಟಪ್‌ - ಮಾನವ್‌ ಇತಿಹಾಸ್‌ ಕಾ ಪ್ರಥಮ್‌ ಧಾರ್ಮಿಕ್‌ ಸಾಮಾಜಿಕ್‌ ಸಂಸದ್‌- ಅಂತ ಹಿಂದಿಯಲ್ಲಿ ಬರೆಯಲಾಗಿದೆ. ಉಳಿದಂತೆ ಅಲ್ಲಿರುವುದು ಕನ್ನಡ ಪದಗಳು. ಬಸವಣ್ಣನ ಕೆಳಗೆ “ಕಾಯಕವೇ ಕೈಲಾಸ’, “ದಯವೇ ಧರ್ಮದ ಮೂಲವಯ್ಯ’, “ಎನ್ನ ದೇಹವೇ ದೇಗುಲ’ ಎನ್ನುವ ಸಾಲುಗಳನ್ನು ತಾಳೆಗರಿಯಲ್ಲಿ ಬರೆದಂತೆ ಭಾಸವಾಗುವ ಹಾಗೆ ಚಿತ್ರಿಸಲಾಗಿದೆ.

Advertisement

ಬಸವಣ್ಣನ ಹಿಂಬದಿಯ ಟ್ರೈಲರ್‌ ಭಾಗದಲ್ಲಿ ಅಲ್ಲಮಪ್ರಭು, ಅಕ್ಕಮಹಾದೇವಿ ಮಾತುಕತೆ ಆಡುತ್ತಿರುವಂತೆ ಕಲಾವಿದರು ನಟಿಸುತ್ತಾರೆ. ಅಲ್ಲಿ ಶರಣರೆಲ್ಲ ಇದ್ದಾರೆ. ಹರಳಯ್ಯ, ಕಲ್ಯಾಣಮ್ಮ, ಕುಂಬಾರ ಗುಂಡಣ್ಣ, ಹಡಪದ ಅಪ್ಪಣ್ಣನವರು, ಚನ್ನಬಸವಣ್ಣ ಸೇರಿದಂತೆ 16 ಶರಣರ ಮೂರ್ತಿಗಳಿವೆ. ಮರ ಕೆತ್ತುವ, ಕಲ್ಲು ಕುಟ್ಟುವ, ಮಡಿಕೆ ಮಾಡುವ, ಚಪ್ಪಲಿ ಹೊಲಿಯುವ ಕಾಯಕದಲ್ಲಿ ಅವರೆಲ್ಲರೂ ನಿರತರಾಗಿರುವಂತೆ ಭಾವ ಮೂಡಿಸಲಾಗಿದೆ.

ಇನ್ನು ನೆಲದ ಮೇಲೆ, ಶರಣ ಪರಂಪರೆಯ ಪ್ರತಿಪಾದಕರು ಕಾಣಿಸುತ್ತಾರೆ. ಅವರು 18 ಕಲಾವಿದರು; ಸಾಣೇಹಳ್ಳಿಯಿಂದ ಬಂದವರು. ವೀರಗಾಸೆಯವರು, ಸುಡುಗಾಡು ಸಿದ್ಧರು, ಚೌಡಿಕೆ ಪದ ಹೇಳುವವರು… ಹೀಗೆ ಕಲೆಯನ್ನೇ ಕಾಯಕ ಮಾಡಿಕೊಂಡಂತೆ ನಟಿಸಲಿದ್ದಾರೆ. “ಕಲ್ಲ ನಾಗರ ಕಂಡರೆ…’ ವಚನವೂ ಈ ಸ್ತಬ್ಧಚಿತ್ರದೊಟ್ಟಿಗೆ ಕೇಳಿಸುತ್ತಿರುತ್ತೆ. ಅಂತಿಮ ವಾಕ್ಯವಾಗಿ, “ಕಾಯಕವೇ ಕೈಲಾಸ’ ಎಂದು ಕನ್ನಡದಲ್ಲಿ, “ಕರಂ ಹಿ ಕೈಲಾಸ’ ಎಂದು ಹಿಂದಿಯಲ್ಲಿ ಬರುತ್ತೆ. ಪ್ರವೀಣ್‌ ಡಿ. ರಾವ್‌ ಅವರ ಸಂಗೀತ ಸ್ಪರ್ಶವಿದೆ.

ಗಣತಂತ್ರ ಹಬ್ಬದ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಕರ್ನಾಟಕ ಸತತ 12ನೇ ಬಾರಿಗೆ ಪಾಲ್ಗೊಳ್ಳುತ್ತಿದೆ. ಬಹುಶಃ ಇಂಥ ಅವಕಾಶ ಬೇರೆ ಯಾವ ರಾಜ್ಯಗಳಿಗೂ ಸಿಕ್ಕಿಲ್ಲ. ನಮ್ಮ ರಾಜ್ಯದ ವಾರ್ತಾ ಇಲಾಖೆಯ ಅಧಿಕಾರಿಗಳ ಕಾಳಜಿಯಿಂದಾಗಿ, ನಮ್ಮ ತಂಡದ ಕಲಾವಿದರ ಶ್ರಮದಿಂದಾಗಿ, ನಾವು ಈ ವರ್ಷವೂ ಅರ್ಹತೆ ಪಡೆದಿದ್ದೇವೆ.

ಸ್ತಬ್ಧಚಿತ್ರದ ನಂಟು…: 80ರ ದಶಕದಲ್ಲಿ ಮೊದಲ ಬಾರಿಗೆ ನಾನು ಟಿವಿಯಲ್ಲಿ ಟ್ಯಾಬ್ಲೋ ಮೆರವಣಿಗೆಯನ್ನು ನೋಡಿದ್ದೆ. ಅಷ್ಟೊತ್ತಿಗೆ ನನಗೊಂದು ಐಡಿಯಾ ಬಂದಿತ್ತು. ಕರ್ನಾಟಕದಿಂದ ಸ್ತಬ್ಧಚಿತ್ರ ತಯಾರಿಸುತ್ತಿದ್ದ ಜಯದೇವ್‌ರ ಪರಿಚಯವಾಗಿತ್ತು. ವಾರ್ತಾ ಇಲಾಖೆಯಲ್ಲಿ ಪಾಟೀಲ್‌ ಎನ್ನುವ ಕಲಾವಿದರೂ ಇದ್ದರು. ಅವರ ನಂಟು ಇತ್ತು. ಜಯದೇವ್‌ರ ಬಳಿ ಇಂದಿರಾಗಾಂಧಿ ಅವರ ಜತೆಗೆ ನಿಂತ ಫೋಟೋಗಳೆಲ್ಲ ಇದ್ದವು. 60- 70ರ ದಶಕದಲ್ಲಿ “ಖೆಡ್ಡಾ’ ವಿಷಯದ ಮೇಲೆ ಸ್ತಬ್ಧಚಿತ್ರ ಮಾಡಿದ್ದರು. ಗೊಮ್ಮಟೇಶ್ವರ, ಹಂಪಿ… ಹೀಗೆ ಕರ್ನಾಟಕದ ಪ್ರಮುಖ ಸಾಂಸ್ಕೃತಿಕ ಗುರುತುಗಳನ್ನು ಅಂದಿನ ಸ್ತಬ್ಧಚಿತ್ರ ಮಾಧ್ಯಮ ಸ್ಪರ್ಶಿಸಿತ್ತು.

* ಶಶಿಧರ ಅಡಪ, ಕಲಾ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next