ಪುತ್ತೂರು: ಶ್ರೇಷ್ಠ ವಚನಕಾರರಾಗಿ ಗುರುತಿಸಿಕೊಂಡಿರುವ ಬಸವಣ್ಣನವರು ಕೇವಲ ಸಾಹಿತಿ ಯಾಗದೆ ಸಮಾಜವಾದಿ, ಸಮತಾ ವಾದಿ, ಯುಗಪುರುಷ ಹಾಗೂ ದಾರ್ಶನಿಕರಾಗಿಯೂ ಖ್ಯಾತಿ ಗಳಿಸಿದ್ದರು. ಅವರನ್ನು 12ನೇ ಶತಮಾನದ ಕ್ರಾಂತಿ ಪುರುಷ ಎಂದೇ ಕರೆಯಲಾಗುತ್ತಿದೆ ಎಂದು ಪುತ್ತೂರು ಸಹಾಯಕ ಕಮೀಷನರ್ ಡಾ| ಎಚ್.ಕೆ. ಕೃಷ್ಣಮೂರ್ತಿ ಹೇಳಿದರು.
ಅವರು ಮಂಗಳವಾರ ಪುತ್ತೂರು ಮಿನಿ ವಿಧಾನಸೌಧದಲ್ಲಿ ಪುತ್ತೂರು ತಾ| ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ನಡೆದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಸವಣ್ಣನವರು ಯಾರ ಮನಸ್ಸನ್ನೂ ನೋಯಿಸದೆ ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ವಿವರಿಸಿ, ಅದನ್ನು ತಿದ್ದುವ ಪ್ರಯತ್ನ ಮಾಡುತ್ತಿದ್ದರು. ಜಾತಿ ವ್ಯವಸ್ಥೆಯ ವಿರುದ್ಧ ಸಾಹಿತ್ಯ ರಚಿಸಿ ಹೆಣ್ಣು ಮತ್ತು ಗಂಡು ಜಾತಿ ಮಾತ್ರ ಎಂದು ಸಾರಿದ್ದರು. ಅವರನ್ನು ಮಾರ್ಟಿನ್ ಲೂಥರ್‌ಗೆ ಹೋಲಿಸಲಾಗುತ್ತಿದೆ. ಆದರೆ ಲೂಥರ್‌ಗಿಂತ ಮೊದಲೇ ಬಸವಣ್ಣ ಜನಿಸಿದ್ದರು ಎಂಬುದು ಉಲ್ಲೇಖನೀಯ ಎಂದರು.
ಪುತ್ತೂರು ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಮುರಳೀಧರ್ ಮಾತನಾಡಿ, ಸಮಾಜದ ಜಾತಿ ವ್ಯವಸ್ಥೆಯನ್ನು ತೊಲಗಿಸುವ ನಿಟ್ಟಿನಲ್ಲಿ ಹೊಸ ಧರ್ಮದ ಪ್ರಸ್ತಾವವನ್ನಿಟ್ಟಿದ್ದರು.
ಪ್ರಸ್ತುತ ದಿನಗಳಲ್ಲಿ ಜನರು ಹೆಚ್ಚು ತಿಳಿವಳಿಕೆ ಹೊಂದಿದ್ದು, ನಾವೆಲ್ಲರೂ ಬಸವಣ್ಣನವರ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಪ್ರದೀಪ್‌ಕುಮಾರ್ ಮಾತನಾಡಿ, ವಚನಗಳ ಮೂಲಕ ಸಮಾಜಕ್ಕೆ ಸಮಾನತೆಯ ಪಾಠವನ್ನು ಬೋಧಿಸಿದ ಬಸವಣ್ಣನವರು ಶ್ರೇಷ್ಠ ದಾರ್ಶನಿಕರಾಗಿ ಗುರುತಿಸಿಕೊಂಡಿದ್ದಾರೆ ಎಂದರು.
ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ದಯಾನಂದ್ ಸ್ವಾಗತಿಸಿದರು. ಗ್ರಾಮ ಲೆಕ್ಕಿಗ ಚಂದ್ರ ನಾಯ್ಕ ವಂದಿಸಿದರು.