ಕಲಬುರಗಿ: 12ನೇ ಶತಮಾನದಲ್ಲಿ ಅಂಧಕಾರ ಹೊಡೆದೋಡಿಸುವ ನಿಟ್ಟಿನಲ್ಲಿ ಬೆಳಕು ನೀಡಿದ ಬಸವಣ್ಣನವರೇ ನಮ್ಮೆಲ್ಲರಿಗೂ ಬೆಳಕು ಎಂದು ಗದಗ-ಡಂಬಳ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ| ಸಿದ್ದಲಿಂಗ ಮಹಾಸ್ವಾಮೀಜಿ ನುಡಿದರು.
ನಗರದ ಹೊರವಲಯ ತಾಜಸುಲ್ತಾನಪುರದ ಎಸ್. ಬಸವರಾಜ ಶಿವಾನುಭವ ಮಂಟಪದಲ್ಲಿ ಸುಲಫಲ ಮಠದಿಂದ ಬುಧವಾರ ಆಯೋಜಿಸಲಾಗಿದ್ದ ನಿವೃತ್ತ ಎಸ್‌ಪಿ ಎಸ್. ಬಸವರಾಜ ಅವರ 85ನೇ ಜನ್ಮದಿನಾಚರಣೆ ಹಾಗೂ ನೂತನ ಶಾಸಕರ ಸನ್ಮಾನ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಬಸವಣ್ಣನವರು ಬೆಳಕು ಮೂಡಿಸಿದ್ದಾರೆ.
ಆ ಬೆಳಕಿನಲ್ಲಿ ನಾವು ಮುನ್ನಡೆದು ಜೀವನ ಹಾಗೂ ಸಮಾಜವನ್ನು ಸಮೃದ್ಧದೆಡೆಗೆ ಮುನ್ನಡೆಸಬೇಕಿದೆ. ಈ ನಿಟ್ಟಿನಲ್ಲಿ ಸುಲಫಲ ಮಠವು ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು. ಬಸವಣ್ಣನ ಕಾಯಕ, ಆದರ್ಶ, ವಿಶಾಲ ಬಂಧುತ್ವ ನಮ್ಮ ಜೀವನದಲ್ಲಿ ಕಾರ್ಯಗತಗೊಳ್ಳಬೇಕು. ಅಂದಾಗ ಮಾತ್ರ ಬಸವಣ್ಣನವರನ್ನು ಪಾಲನೆ ಮಾಡಿದಂತಾಗುತ್ತದೆ ಎಂದರು.
ಶರಣಬಸವೇಶ್ವರ ಮಹಾ ದಾಸೋಹ ಸಂಸ್ಥಾನದ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪಾ ಸಾನಿಧ್ಯ ವಹಿಸಿ, ಬಸವಣ್ಣನವರ ಕಾಯಕ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದರೆ ಅದು ಬದುಕಿನ ಉನ್ನತಿಗೆ
ದಾರಿ ಮಾಡಿಕೊಡುತ್ತದೆ. ಇದಕ್ಕೆ ಅನೇಕ ಶರಣರೇ ಸಾಕ್ಷಿ ಆಗಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶ್ರೀಶೈಲ ಸಾರಂಗಮಠದ ಹಾಗೂ ಸುಲಫಲ ಮಠದ ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ, ಮುತ್ತಾನ ಬಬಲಾದ ಗುರುಪಾದಲಿಂಗ ಮಹಾಸ್ವಾಮೀಜಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣಬಸಪ್ಪ ಪಾಟೀಲ ಅಷ್ಟಗಿ, ಕೋಲಿ ಸಮಾಜದ ಮುಖಂಡರಾದ ತಿಪ್ಪಣ್ಣಪ್ಪ ಕಮಕನೂರು ಹಾಗೂ ಮತ್ತಿತರರು ಇದ್ದರು.
ನಿವೃತ್ತ ಎಸ್‌ಪಿ ಎಸ್. ಬಸವರಾಜ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ದತ್ತಾತ್ರೇಯ ಪಾಟೀಲ ರೇವೂರ, ಎಂ.ವೈ. ಪಾಟೀಲ, ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮೂಡ ಹಾಗೂ ಖನೀಝಾ ಪಾತೀಮಾ ಅವರನ್ನು ಸನ್ಮಾನಿಸಲಾಯಿತು.