Advertisement

Basavanna ಸಾಂಸ್ಕೃತಿಕ ನಾಯಕ ; ಬಸವಕಲ್ಯಾಣದಲ್ಲಿ ಸಿಎಂಗೆ ಅದ್ದೂರಿ ಸಮ್ಮಾನ

05:05 PM Mar 07, 2024 | Team Udayavani |

ಬೀದರ್: ಜಗಜ್ಯೋತಿ ಶ್ರೀ ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಿಸಿದ ಹಿನ್ನಲೆ ಗುರುವಾರ ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

Advertisement

ವಿಶ್ವ ಬಸವ ಧರ್ಮ ಟ್ರಸ್ಟ್- ಅನುಭವ ಮಂಟಪ, ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ಹಾಗೂ ಲಿಂಗಾಯತ ಮಠಾಧೀಪತಿಗಳ ಒಕ್ಕೂಟದಿಂದ ತೇರು ಮೈದಾನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಹಣೆಗೆ ವಿಭೂತಿ ಹಚ್ಚಿ, ರುದ್ರಾಕ್ಷಿ ಮಾಲೆ ಹಾಕಿ ಮತ್ತು ಬಸವಣ್ಣನ ಬಿದ್ರಿ ಕಲಾಕೃತಿಯನ್ನು ಕೊಟ್ಟು ಬಸವ ಜಯಘೋಷಗಳೊಂದಿಗೆ ಕೃತಜ್ಞತೆ ಸಲ್ಲಿಸಲಾಯಿತು.

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಲು ಅವಕಾಶ ಸಿಕ್ಕಿರುವುದು ನನಗೆ ಸಿಕ್ಕರುವ ಸೌಭಾಗ್ಯ. ನನ್ನ ಜೀವನದಲ್ಲಿ ಇದೊಂದು ಅವಿಸ್ಮರಣೀಯ ಘಟನೆ. ನನಗೆ ಸಮ್ಮಾನ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಸನ್ಮಾನವನ್ನು ನಾಡಿನ ಕನ್ನಡಿಗರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.

ಸಾಂಸ್ಕೃತಿಕ ನಾಯಕರಾಗಿ ಬಸವಣ್ಣನನ್ನು ಘೋಷಿಸಬೇಕೆಂದು ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು ನೇತೃತ್ವದ ಮಠಾಧೀಶರ ನಿಯೋಗ ಮನವಿ ಸಲ್ಲಿಸಿತ್ತು. ಬಸವಣ್ಣ ಕನ್ನಡಿಗರ, ಭಾರತೀಯರ ಅಭಿಮಾನದ ಸಂಕೇತ. ಹಾಗಾಗಿ ಈ ವಿಷಯದಲ್ಲಿ ಹಿಂದೆ-ಮುಂದೆ ವಿಚಾರ ಮಾಡದೇ ಸಂಪುಟದಲ್ಲಿ ಅನುಮೋದನೆ ಪಡೆದು ಘೊಷಣೆ ಮಾಡಿದೆ. ಇದಕ್ಕೆ ಸಂಪುಟದ ಎಲ್ಲ ಸಚಿವರು ಒಕ್ಕೋರಲಿನಿಂದ ಒಪ್ಪಿಗೆ ಸೂಚಿಸಿದ್ದರು ಎಂದು ತಿಳಿಸಿದರು.

Advertisement

ನಾನು ದೇವರು ಇಲ್ಲ ಎಂದು ವಾದ ಮಾಡುವುದಿಲ್ಲ, ಆದರೆ, ದೇವರಿದ್ದಾರೆ. ಆದರೆ, ದೇವರು ಒಂದೆ ಕಡೆ ಇಲ್ಲ, ಆತ ಸರ್ವವ್ಯಾಪಿ. ತಪ್ಪು ಮಾಡಿ ತೀರ್ಥ ಯಾತ್ರೆ ಮಾಡಿದರೆ ಅದರಂತ ಮೂರ್ಖತನ ಮತ್ತೊಂದಿಲ್ಲ. ಆತ್ಮಸಾಕ್ಷಿಯಂತೆ ನಡೆದುಕೊಳ್ಳುವುದೇ ನಾನು ದೇವರಿಗೆ ಸಲ್ಲಿಸುವ ಭಕ್ತಿ. ನಮ್ಮ ನಡುವಳಿಕೆಗಳ ಮೇಲೆಯೇ ಸ್ವರ್ಗ- ನರಕ ಇದೆ ಎಂದು ಸಿಎಂ ಹೇಳಿದರು.

ಬಸವಣ್ಣನವರನ್ನು ನೋಡಿದಾಕ್ಷಣ ನಮಗೆಲ್ಲರಿಗೂ ಪ್ರೇರಣೆ ಮತ್ತು ಸ್ಪೂರ್ತಿ ಸಿಗಬೇಕೆಂಬ ಉದ್ದೇಶದಿಂದ ರಾಜ್ಯದ ಎಲ್ಲ ಸರ್ಕಾರಿ ಕಚೇರಿ ಮತ್ತು ಶಾಲಾ- ಕಾಲೇಜುಗಳಲ್ಲಿ ಬಸವಣ್ಣನವರ ಭಾವಚಿತ್ರಗಳನ್ನು ಅಳವಡಿಸಿಲು ಸರ್ಕಾರ ಆದೇಶಿಸಿದೆ ಎಂದು ಹೇಳಿದ ಸಿಎಂ ಸಿದ್ಧರಾಮಯ್ಯ, ನಾನು ಮೊದಲಿನಿಂದಲೂ ಬಸವಾದಿ ಶರಣ ಅನುಯಾಯಿ. ಹಾಗಾಗಿ ೨೦೧೩ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಬಸವ ಜಯಂತಿ ದಿನದಂದೇ ಪ್ರಮಾಣ ವಚನ ಸ್ವೀಕಾರ ಮಾಡಿದ್ದೇನೆ. ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಬುದ್ಧ, ಬಸವ, ಅಂಬೇಡ್ಕರ ಮತ್ತು ಗಾಂಧೀಜಿ ಅವರೇ ನನಗೆ ಸ್ಪೂರ್ತಿಯಾಗಿದ್ದು, ಅವರ ಚಿಂತನೆಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿರಲಿವೆ ಎಂದು ನುಡಿದರು.

ಶಾಸಕರಾದ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರು ಸಮಾರಂಭವನ್ನು ಉದ್ಘಾಟಿಸಿದರು. ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಡಾ. ಗೋ.ರು ಚನ್ನಬಸಪ್ಪ ಅಭಿನಂದನಾ ನುಡಿ ನುಡಿದರು. ಡಾ. ಬಸವಲಿಂಗ ಪಟ್ಟದ್ದೇವರು, ಡಾ. ಮಾತೆ ಗಂಗಾದೇವಿ, ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಶ್ರೀ ರಾಜೇಶ್ವರ ಶಿವಾಚಾರ್ಯರು, ಶ್ರೀ ಗುರುಬಸವ ಪಟ್ಟದ್ದೇವರು, ಸಚಿವರಾದ ಈಶ್ವರ ಖಂಡ್ರೆ, ಎಂ.ಬಿ ಪಾಟೀಲ, ರಹೀಮ್ ಖಾನ್ ಸೇರಿದಂತೆ ಜಿಲ್ಲೆಯ ಮಠಾಧೀಶರು, ಚುನಾಯಿತ ಪ್ರತಿನಿಧಿಗಳು ಮತ್ತು ಬಸವಪರ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next