ರಬಕವಿ-ಬನಹಟ್ಟಿ; ಉತ್ತಮ ನೀರಾವರಿ ಸೌಲಭ್ಯವಿದ್ದಾಗಲೂ ಬಸವನ ಹುಳುವಿನಿಂದ ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ನಾವಲಗಿ ಗ್ರಾಮಗಳ ರೈತರು ತೊಂದರೆಯನ್ನು ಅನುಭವಿಸುತ್ತಿದ್ದು, ಅವುಗಳ ಕಾಟ ವರ್ಷದಿಂದ ವರ್ಷ ಹೆಚ್ಚಾಗುತ್ತಲೆ ಇದೆ. ಬೆಲೆ ಏರಿಕೆಯ ಇಂದಿನ ಯುಗದಲ್ಲಿ ಅವುಗಳನ್ನು ಆರಿಸಲು ಆಳಿಗೆ ದುಡ್ಡು ಕೊಟ್ಟು ಸಾಕಾಗಿದೆ ಎನ್ನುತ್ತಾರೆ ಇಲ್ಲಿಯ ರೈತರು.
ಕಳೆದ ಹಲವಾರು ವರ್ಷಗಳಿಂದ ಈ ಬಸವನ ಹುಳುವಿನ ಕಾಟದಿಂದ ಈ ಭಾಗದ ರೈತರು ಸಂಪೂರ್ಣ ತತ್ತರಿಸಿ ಹೋಗಿದ್ದಾರೆ. ಮಳೆಗಾಲ ಆರಂಭಕ್ಕೂ ಒಂದು ವಾರ ಮೊದಲೆ ಭೂಮಿಯಿಂದ ಇರವಿಯಂತೆ ಮೇಲೇಳುತ್ತವೆ. ದಿನಕ್ಕೆ ಸಾವಿರಾರು ಮರಿಗಳು ಹುಟ್ಟಿಕೊಳ್ಳುತ್ತವೆ. ಸಂಜೆ ಕತ್ತಲಾಗುತ್ತಿದ್ದಂತೆ ಬೆಳೆಯನ್ನು ತಿನ್ನಲು ಪ್ರಾರಂಭಿಸಿದರೆ ಬೆಳಗಾಗುವುದರೊಳಗಾಗಿ ಆ ಹೊಲ ಸಂಪೂರ್ಣ ಖಾಲಿಯಾಗಿ ಹೋಗುತ್ತದೆ. ಸಧ್ಯ ಮತ್ತೇ ಮಳೆ ಹಾಗೂ ತಂಪಾದ ವಾತಾವರಣದಿಂದ ಬಸವನಹುಳು ಮತ್ತಷ್ಟು ಹೆಚ್ಚಿಗೆ ಆಗಿದ್ದು ರೈತರಿಗೆ ಹವಾಮಾನ ವೈಪರಿತ್ಯ ಒಂದು ಕಡೆ ಆದರೆ ಈ ಹುಳುವಿನ ಕಾಟದಿಂದ ಮತ್ತಷ್ಟು ತೊಂದರೆಯಾಗಿದೆ
ಬಾಳೆ, ಪಪ್ಪಾಯಿ, ಅರಿಷಿಣ, ವಿಳ್ಳೆದೆಲೆ ಸೇರಿದಂತೆ ಅನೇಕ ಕಾಯಿಪಲ್ಲೆಗಳ ಬೆಳೆಗಳನ್ನು ದಿನವಿಡಿ ಗುಂಪಾಗಿ ಸೇರಿ ಹಾಳು ಮಾಡುತ್ತಿವೆ. ಅದರಲ್ಲೂ ಕಾಯಿಪಲ್ಲೆಗಳನ್ನು ಇಲ್ಲಿ ಬೆಳೆಯಲು ಬಿಡುವುದಿಲ್ಲ ಇವು. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಔಷಧಿಗಳನ್ನು ಕೊಟ್ಟರು ಇವುಗಳ ಹತೋಟಿ ಸಂಪೂರ್ಣವಾಗಿ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಜಗದಾಳದ ಪ್ರಗತಿ ಪರ ರೈತರಾದ ಸದಾಶಿವ ಬಂಗಿ.
ಇದರ ಬೆಳವಣಿಗೆ ; ಶೀತವಾತಾವರಣದಲ್ಲಿ ಹೆಚ್ಚಾಗಿ ಬೆಳೆಯುವ ಇದರ ಕಾರ್ಯಾಚರಣೆ ಮಾತ್ರ ಹಗಲಿಗಿಂತ ರಾತ್ರಿಯೇ ಹೆಚ್ಚು, ಸಂಜೆ ಯಾಯಿತೆಂದರೆ ಸಾಕು ಮಣ್ಣಿನಿಂದ ಹೊರಗೆ ಬಂದು ಬೆಳೆಯನ್ನು ತಿನ್ನಲಾರಂಭಿಸುತ್ತವೆ. ಬೇಸಿಗೆ ಸಮಯದಲ್ಲಿಯೂ ಒಳ್ಳೆಯ ನೀರಾವರಿ ಪ್ರದೇಶ ಕಪ್ಪು ಮಣ್ಣು ಇದ್ದ ಕಡೆ ಮಾತ್ರ ಇವು ಬದುಕುತ್ತವೆ. ಬೇಸಿಗೆ ಕಾಲ ಪ್ರಾರಂಭವಾದರೆ ಇದು ತನ್ನೇಲ್ಲ ಶರೀರವನ್ನು ಶಂಖದಲ್ಲಿ ಮುಚ್ಚಿಕೊಂಡು ಅದರ ಕೊನೆಯ ಭಾಗದಲ್ಲಿ ತೆಳ್ಳನೆ ಪರದೆಯ ಹಾಗೆ ಎಂಜಿಲ ಬಿಟ್ಟು ಬಾಗಿಲ ಬಂದ್ ಮಾಡಿ, ಹಾಗೆ ಕಪ್ಪು ಮಣ್ಣಿನಲ್ಲಿ ಆಳಕ್ಕೆ ಹೋಗಿಬಿಡುತ್ತದೆ. ಸುಮಾರು ೪ ತಿಂಗಳ ವರೆಗೂ ಕಾಣಿಸಿಕೊಳ್ಳದ ಇದು ಮತ್ತೆ ಮಳೆಗಾಲ ಆರಂಭವಾದ ಬಳಿಕ ಮಣ್ಣಿನಿಂದ ಹೊರಬಂದು ಪರದೆ ಹರಿದು ಒಂದೇ ದಿನದಲ್ಲಿ ಸುಮಾರು 50ರಿಂದ 250 ರವರೆಗೆ ತತ್ತಿಗಳನ್ನು ಹಾಕುತ್ತದೆ. ತತ್ತಿ ಹಾಕಿದ ಮರುದಿನದಲ್ಲಿ ಸಣ್ಣ ಸಣ್ಣ ಶಂಖದಂತಾಗುವ ಮರಿಗಳು ಹರಿದಾಡಲು ಪ್ರಾರಂಭಿಸುತ್ತವೆ. ಕೇವಲ ಮೂರೇ ದಿನದಲ್ಲಿ ಆ ಎಲ್ಲ ಮರಿಗಳು ದೊಡ್ಡ ಶಂಖದ ಆಕಾರ ಹೊಂದಿ ಹರಿದಾಡಲು ಪ್ರಾರಂಭಿಸುತ್ತವೆ. ಹೀಗೆ ಅದರ ಸಂತತಿ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗಿ ರೈತ ಬೆಳೆದ ಎಲ್ಲ ಬೆಳೆಗಳ ಮೇಲೆ ಯುದ್ದಮಾಡಿದಂತೆ ಮಾಡಿ ನಾಶ ಪಡಿಸುತ್ತಿವೆ. ಅಕಾಲಿಕ ಮಳೆಯಿಂದಾಗಿ ಬೆಳೆದ ಬೆಳೆಗಳು ಕೊಳೆರೋಗಕ್ಕೆ ತುತ್ತಾಗಿ ತೀವ್ರ ಸಂಕಷ್ಟದಲ್ಲಿರುವ ರೈತ ಈ ಬಸವನ ಹುಳುವಿನ ಕಾಟ ಒಂದೆಡೆಯಿಂದ ರೈತ ಹೈರಾಣಾಗಿದ್ದಾನೆ.
ರೈತರು ಹತ್ತೋಟಿಗೆ ಅನುಸರಿಸಿದ ಮಾರ್ಗ : ಕೂಲಿ ಕಾರ್ಮಿಕರನ್ನು ಹಚ್ಚಿ ಆ ಬಸವನ ಹುಳುಗಳನ್ನು ಉಡಿ ಕಟ್ಟಿಕೊಂಡು ಆರಿಸುತ್ತಿದ್ದಾರೆ, ನಂತರ ಅವುಗಳನ್ನು ಚೀಲದಲ್ಲಿ ಕಟ್ಟಿ ಇಡುತ್ತಾರೆ. ಇಲ್ಲವೇ ತಂಬಾಕಿನ ಪುಡಿ ಇವುಗಳ ಮೇಲೆ ಸಿಂಪಡಿಸುವುದರಿಂದ ಅಲ್ಪ ಪ್ರಮಾಣದಲ್ಲಿ ಸಾಯುತ್ತಿವೆ. ಇದರ ಕೀಟನಾಶಕ ದುಬಾರಿಯಾಗಿದ್ದು, ಅದನ್ನು ಸಹ ಕೆಲವು ಸಲ ಹಾಕಿ ನಾಶ ಮಾಡಲು ಪ್ರಯತ್ನಿಸಿದ್ದು ಅದು ತುಂಬಾ ಧುಬಾರಿಯಾಗುತ್ತಿರುವುದರಿಂದ ಕೈ ಬಿಟ್ಟಿರುವುದಾಗಿ ತಿಳಿಸುತ್ತಾರೆ ಇಲ್ಲಿನ ರೈತರು.
ಶಂಖದ ಹುಳುವಿನ ಕಾಟ ಹೆಚ್ಚಾಗಿದ್ದು, ಅದಕ್ಕೇ ತೋಟಗಾರಿಕೆ ಇಲಾಖೆಯವರು ಪರಿಹಾರ ಕ್ರಮಗಳನ್ನು ತಿಳಿಸಿದ್ದಾರೆ. ಆದರೆ ಅವುಗಳನ್ನು ಆರಿಸುವುದು ಮತ್ತು ಅದರ ನಾಶಕ್ಕೆ ಬಳಸುವ ಔಷಧಿ ತುಂಬಾ ವೆಚ್ಚದಾಯಕವಾಗಿರುವುದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಆ ನಿಟ್ಟಿನಲ್ಲಿ ಕೃಷಿ ಇಲಾಖೆಯವರು ಔಷಧಿ ರಿಯಾಯತಿ ದರದಲ್ಲಿ ದೊರೆಯುವಂತೆ ಮಾಡಬೇಕು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಸಂಪೂರ್ಣ ನಿರ್ಮೂಲಣೆಗೆ ಯೋಜನೆ ರೂಪಿಸಿ ಹೆಚ್ಚಿನ ಕ್ರಮತೆಗೆದುಕೊಳ್ಳುವುದು ಅವಶ್ಯ
– ಸದಾಶಿವ ಬಂಗಿ ಪ್ರಗತಿಪರ ರೈತರು, ಜಗದಾಳ
-ಕಿರಣ ಶ್ರೀಶೈಲ ಆಳಗಿ