ವಿಜಯಪುರ: ಹಣ್ಣಿನ ರಾಜ ಮಾವು ಈ ಬಾರಿ ಆದಿಲ್ ಶಾಹಿ ಸಾಮ್ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ. ಮಳೆ ಕೊರತೆ, ಇಳುವರಿಯಲ್ಲಿ ಕುಸಿತ, ಬೆಲೆಯಲ್ಲಿ ಏರಿಕೆ ಅಂತೆಲ್ಲ ಹಲವು ಕಾರಣಗಳಿಂದ ಮಾವಿನ ಮಾರುಕಟ್ಟೆ ಸೊರಗಿ ನಿಂತಿದೆ. ಸ್ಥಳೀಯ ಉತ್ಪಾದನೆ ಇಲ್ಲದ ಕಾರಣ ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳ ಜೊತೆ ಆಂಧ್ರಪ್ರದೇಶ ರಾಜ್ಯದಿಂದ ಮಾವು ಆವಕವಾಗುತ್ತಿರುವ ಕಾರಣ ಸ್ಥಳೀಯ ಮಾವಿನೊಂದಿಗೆ ಹೊರ ರಾಜ್ಯದ ಮಾವು ಪೈಪೋಟಿಗಿಳಿದಿವೆ.
ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆ ಕಾರಣ ಅತ್ಯಂತ ಭೀಕರ ಬರ ಎದುರಿಸುತ್ತಿರುವ ವಿಜಯಪುರ ಜಿಲ್ಲೆಯಲ್ಲಿ ದೀರ್ಘ ಕಾಲಿನ ಬೆಳೆಗಗಳಾದ ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ಅನ್ನದಾತ ಪರದಾಡುತ್ತಿದ್ದಾನೆ. ದ್ರಾಕ್ಷಿ, ಲಿಂಬೆ, ದಾಳಿಂಬೆ ಜೊತೆಗೆ ಮಾವು ಬೆಳೆ ಉಳಿಸಿಕೊಳ್ಳಲು ಜಿಲ್ಲೆಯ ರೈತ ಹೆಣಗುತ್ತಿದ್ದಾನೆ. ಪರಿಣಾಮ ಈ ಬಾರಿ ಸ್ಥಳೀಯವಾಗಿ ಮಾವಿನ ಉತ್ಪಾನೆ ಭಾರಿ ಕುಸಿತ ಕಂಡಿದೆ.
ಜಿಲ್ಲೆಯಲ್ಲಿ ಮಾವಿನ ಉತ್ಪಾದನೆ ಕಡಿಮೆ ಆಗಿರುವ ಕಾರಣ ರಾಜ್ಯದ ದಕ್ಷಿಣ ಭಾಗದ ತುಮಕೂರು, ಕೋಲಾರ, ಪಾವಗಡ, ಚಿತ್ರದುರ್ಗ, ಚಳ್ಳಕೆರೆ ಮಾತ್ರವಲ್ಲ ನೆರೆಯ ಮಹಾರಾಷ್ಟ್ರದ ಕಲ್ಯಾಣದುರ್ಗ, ಸೀಮಾಂಧ್ರದ ಅನಂತಪುರ, ಕರ್ನೂಲ್ ಜಿಲ್ಲೆಗಳಿಂದ ಬಸವನಾಡಿಗೆ ಮಾವು ಪ್ರವೇಶ ಪಡೆದಿದೆ. ಸೀಮಾಂಧ್ರ ರಾಜ್ಯದಿಂದ ನಿತ್ಯವೂ ವಿಜಯಪುರಕ್ಕೆ 1-2 ಲೋಡ್ ಮಾವು ಬರುತ್ತಿದ್ದು, ಬುಧವಾರ ಹಾಗೂ ರವಿವಾರ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಕಾಯಿ-ಹಣ್ಣು ಹೊತ್ತ ವಾಹನಗಳು ವಿಜಯಪುರ ಮಾರುಕಟ್ಟೆಗೆ ಬರುತ್ತಿವೆ.
ಮಾವುಗಳಲ್ಲಿ ಬೇನಿಶ, ರಸಪೂರಿ, ತೋತಾಪುರಿ, ಆಪೂಸ್, ರತ್ನಗಿರಿ ಆಲ್ಫೋನ್ಸಾ, ಮಲಗೋಬಾ, ನೀಲಂ, ಕೇಸರ ಹೀಗೆ ಹಲವು ತಳಿ ವೈವಿಧ್ಯದಲ್ಲಿ ಮಾವಿನ ಹಣ್ಣು ಹಾಗೂ ಹಸಿ ಕಾಯಿ ಮಾರುಕಟ್ಟೆಗೆ ಬರುತ್ತಿವೆ. ಆದರೆ ಮಳೆ ಕೊರತೆ ಕಾರಣ ಅನ್ಯ ಪ್ರದೇಶದಲ್ಲೂ ಮಾವು ಇಳುವರಿಯಲ್ಲಿ ನಿರೀಕ್ಷೆ ಮೀರಿ ಕುಸಿತವಾಗಿದೆ. ಹೀಗಾಗಿ ದೂರದ ಪ್ರದೇಶಗಳಿಂದ ವಿಜಯಪುರ ಮಾರುಕಟ್ಟೆಗೆ ಮಾವು ಪ್ರವೇಶ ಪಡೆದಿದೆ.
ದೂರದಿಂದ ಬಂದರೂ ವಿಜಯಪುರ ಹಣ್ಣಿನ ಮಾರುಕಟ್ಟೆಯಲ್ಲಿ ಮಾವಿಗೆ ನಿರೀಕ್ಷಿತ ಪ್ರಮಾಣದಲ್ಲಿ ಬೆಲೆ ಸಿಗುತ್ತಿಲ್ಲ. ಈ ಮಾರುಕಟ್ಟೆಯೊಂದಿಗೆ ನಿರಂತರ ವಹಿವಾಟು ಇರಿಸಿಕೊಂಡಿದ್ದೇವೆ. ಬೆಲೆಯಲ್ಲಿನ ಹೊಯ್ದಾಟದಿಂದ ವ್ಯಾಪಾರದ ಸಂಪರ್ಕ ಕಳೆದುಕೊಳ್ಳಬಾರದು ಎಂದು ಎರಡು ದಶಕಗಳಿಂದ ಇಲ್ಲಿಗೆ ಮಾವು ತರುತ್ತಿರುವ ಹೊರ ರಾಜ್ಯದಿಂದ ಮಾವು ತಂದಿರುವ ರಪ್ತುದಾರರು ಗೊಣಗುತ್ತಿದ್ದಾರೆ.
ಇತ್ತ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಮಾವು ಬಂದರೂ ಮಾರುಕಟ್ಟೆಯ ಬೆಲೆಯಲ್ಲಿ ಅಸ್ಥಿರತೆ ಹೆಚ್ಚಾಗಿ ಕಾಡುತ್ತಿದೆ. ಮತ್ತೂಂದೆಡೆ ಸಗಟು ವ್ಯಾಪಾರದಲ್ಲಿ ಬೆಲೆ ಕುಸಿತ ಕಂಡು ಬಂದರೆ ಹಣ್ಣು ಬೆಳೆದ ಅನ್ನದಾತನಿಂದ ಸಗಟುದಾರರು, ಮಧ್ಯವರ್ತಿಗಳನ್ನು ದಾಟಿ ಕಿರುಕುಳ ವ್ಯಾಪಾರಿ ಹಂತಕ್ಕೆ ಬರುವಾಗ ಮಾವಿನ ಬೆಲೆ ಮುಗಿಲು ಮುಟ್ಟಿದೆ. ಹೀಗಾಗಿ ಸಗಟು ವಹಿವಾಟಿನ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಇದ್ದರೂ, ಮಧ್ಯವರ್ತಿಗಳು, ದೊಡ್ಡ ಮಟ್ಟದ ಹಣ್ಣಿನ ವ್ಯಾಪಾರಿಗಳು, ಕಿರುಕುಳ ವ್ಯಾಪಾರಿಗಳನ್ನು ದಾಟಿ ಗ್ರಾಹಕರನ್ನು ತಲುಪುವ ಹಂತದಲ್ಲಿ ಮಾವಿನ ಹಣ್ಣಿನ ಬೆಲೆ ಹಲವು ಪಟ್ಟು ಹೆಚ್ಚಿರುವುದು ಹಣ್ಣುಗಳ ರಾಜ ಎನಿಸಿರುವ ಮಾವಿನ ವ್ಯಾಪಾರದ ವಿಚಿತ್ರ ಸ್ಥಿತಿಯನ್ನು ಮನವರಿಕೆ ಮಾಡಿಸುತ್ತದೆ.
ಪರಿಣಾಮ ಬೀದಿ ಬದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಮಾರಾಟಗಾರರು ಕಂಡು ಬಂದರೂ ಬೆಲೆಯಲ್ಲಿ ಏರಿಕೆ ಇರುವ ಕಾರಣ ಮಾವು ಕೊಳ್ಳಲು ಗ್ರಾಹಕರಿಲ್ಲದೇ ಬಿಕೋ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಯಾರಾದರೂ ಗ್ರಾಹಕರು ಬೆಲೆಯಲ್ಲಿ ಚೌಕಾಸಿಗೆ ಇಳಿದಿರೆ ಮುಖ ಸಿಂಡರಿಸಿಕೊಂಡೇ ವಹಿವಾಟು ಮಾಡುವ ಸ್ಥಿತಿ ಮಾವಿನ ಮಾರಾಟಗಾರರಲ್ಲಿ ಕಂಡು ಬರುತ್ತಿದೆ.
ಜಿ.ಎಸ್.ಕಮತರ