ಬಸವನಬಾಗೇವಾಡಿ: ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಗಳ ಮೂಲಕ ಕಾಲುವೆಗಳಿಗೆ ನೀರು ಹರಿಸಿ ಕೆರೆಗಳನ್ನು ತುಂಬಿಸುವ ಕಾರ್ಯ ಏ. 20 ಅಥವಾ 21ರಂದು ನಡೆಯಲಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಶನಿವಾರ ಕೂಡಗಿ ಗ್ರಾಮದ ಬಳಿ ರೈಲ್ವೆ ಕ್ರಾಸಿಂಗ್ ಕಾಮಗಾರಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಡಿವ ನೀರಿನ ತೊಂದರೆ ನೀಗಿಸಲು ಉಪ ಮುಖ್ಯಮಂತ್ರಿ ಗೊವಿಂದ ಕಾರಜೋಳ ಅವರು 2 ಟಿಎಂಸಿ ಅಡಿ ನೀರು ಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.
ಈ ಯೋಜನೆಯಡಿ ಬರುವ ಎಲ್ಲ ಸಾರ್ವಜನಿಕರು, ರೈತರು ನೀರನ್ನು ಮಿತವಾಗಿ ಬಳಸಬೇಕು. ಬೇಸಿಗೆ ಇನ್ನೂ ಎರಡು ತಿಂಗಳಿದ್ದು ಈ ನೀರನ್ನು ಕುಡಿಯಲು ಮಾತ್ರ ಬಳಸಬೇಕು ಎಂದು ಹೇಳಿದರು. ಕೆಬಿಜೆಎನ್ನೆಲ್ ಅಧಿಕಾರಿ ಆರ್. ಕೆ. ಕುಲಕರ್ಣಿ ಮಾತನಾಡಿ, ಕೂಡಗಿ ಗ್ರಾಮದ ಬಳಿ ರೈಲ್ವೆ ಕ್ರಾಸಿಂಗ್ ಕಾಮಗಾರಿ ಶೇ. 90 ಪೂರ್ಣಗೊಂಡಿದ್ದು ನೀರು ಹರಿಸಲು ತೊಂದರೆಯಿಲ್ಲ ಎಂದರು.
ಜಿಲ್ಲೆಯ ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಗಳ ಮೂಲಕ ಜಿಲ್ಲೆಯ 97 ಕೆರೆಗಳಿಗೆ ನೀರನ್ನು ತುಂಬಲಾಗುವುದು. ಜಿಲ್ಲೆಯ ಜನ ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ಎಲ್ಲ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದರು.
ವಿಜಯಕುಮಾರ ಡಿ.ಕೆ, ಡಿ.ಬಸವರಾಜ, ವಿಜಯಕುಮಾರ, ಗ್ರಾಪಂ ಅಧ್ಯಕ್ಷ ಹುಸೇನಸಾಬ ಕೊಲ್ಹಾರ, ಡಿ.ಹೇಮಂತಕುಮಾರ, ಮುಖಂಡರಾದ ಪಿಂಟು ಪಾಟೀಲ, ಎಸ್.ಎಸ್. ಹರಸಂಗಿ, ಕೃಷ್ಣಪ್ಪ ಬೊಮ್ಮರೆಡ್ಡಿ, ಅಜೀಜ್ ಬಾಗವಾನ ಇದ್ದರು.