ಬಸವನಬಾಗೇವಾಡಿ: ತಾಲೂಕಿನ ಕೂಡಗಿ ಬಳಿ ಹಾಯ್ದು ಹೋಗಿರುವ ರೈಲು ಕ್ರಾಸಿಂಗ್ ಬ್ರಿಜ್ ಕೆಳಗಡೆ ನಿರ್ಮಾಣ ಮಾಡುತ್ತಿರುವ ಪುಸ್ಸಿಂಗ್ ಬಾಕ್ಸ್ ಕಾಮಗಾರಿ ನಿಲ್ಲಿಸಿ. ಮೊದಲು ಕಾಲುವೆಗೆ ನೀರು ಹರಸಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ವಿಜಯಪುರ ರೈಲು ನಿಲ್ದಾಣದ ಆವರಣದಲ್ಲಿ ಆ.9ರಂದು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಮಂಗಳವಾರ ನಡೆದ ಅಖಂಡ ಕರ್ನಾಟಕ ರೈತ ಸಂಘದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ 5-6 ತಿಂಗಳುಗಳಿಂದ ರೈಲ್ವೆ ಇಲಾಖೆ ಪುಸ್ಸಿಂಗ್ ಬಾಕ್ಸ್ ನಿರ್ಮಿಸುವ ನೆಪದಲ್ಲಿ ಮುಳವಾಡ ಏತ ನೀರಾವರಿ ಮುಖ್ಯ ಕಾಲುವೆಗೆ ನೀರು ಹರಿಸುವುದನ್ನು ತಡೆಹಿಡಿಯುತ್ತಿದೆ. ಇದರಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ. ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿದೆ ಎಂದು ಹೇಳಿದರು.
ಅಂದು ಬೆಳಗ್ಗೆ 11:00ಕ್ಕೆ ವಿಜಯಪುರದ ಗಾಂಧಿ ವೃತ್ತದಿಂದ ಮೆರವಣಿಗೆ ಮೂಲಕ ರೈಲ್ವೆ ನಿಲ್ದಾಣ ಆವರಣಕ್ಕೆ ತೆರಳಿದಲ್ಲಿ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಗುವದು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಧರಣಿಯಲ್ಲಿ ಭಾಗವಹಿಸಬೇಕು. ಎಂದು ಮನವಿ ಮಾಡಿದರು.
ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಮಾತನಾಡಿ ರೈಲ್ವೆ ಇಲಾಖೆಗೆ ಕೇವಲ ರೈಲು ಸಂಚರಿಸುವುದು ಅಷ್ಟೇ ಮುಖ್ಯವಾಗಿದೆ. ಹೊರತು ಜಿಲ್ಲೆಯ ರೈತರು ಜನ ಜಾನುವಾರಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ ಎಂಬುದು ಅವರ ಅರಿವಿಗೆ ಬರುತ್ತಿಲ್ಲ. ರೈಲ್ವೆ ಇಲಾಖೆಯವರು ಮೊದಲಿನಿಂದಲೂ ಪುಸ್ಸಿಂಗ್ ಬಾಕ್ಸ್ ನಿರ್ಮಾಣದ ನೆಪದಲ್ಲಿ ನೀರು ಹರಿಸುವುದನ್ನು ತಡೆ ಹಿಡಿಯುತ್ತಿರುವುದು ಸರಿಯಲ್ಲಾ ಎಂದು ಹೇಳಿದರು.
ಈಗ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದೆ. ಮಹಾರಾಷ್ಟ್ರದ ಕೋಯ್ನಾ ಅಣೆಕಟ್ಟೆಯಿಂದ ಲಕ್ಷಾಂತರ ಕ್ಯೂಸೆಕ್ ನೀರು ಹರಿದು ಆಲಮಟ್ಟಿಗೆ ಬರುತ್ತಿದೆ.
ಆ ನೀರನ್ನು ನಾರಾಯಣಪುರ ಅಣೆಕಟ್ಟೆ ಮೂಲಕ ಸಮುದ್ರದ ಪಾಲಾಗುತ್ತಿದೆ. ಆದ್ದರಿಂದ ಜಿಲ್ಲೆಯ ಕೆರೆಗಳಿಗೆ ಹಾಗೂ ಡೋಣಿ ನದಿಗೆ ನೀರು ತುಂಬಿಸುವ ಕಾರ್ಯ ಮಾಡಿದಾಗ ಮಾತ್ರ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿದ್ರಾಮ ಅಂಗಡಿಗೇರಿ, ಗೌರವ ಅಧ್ಯಕ್ಷ ಈರಣ್ಣ ದೇವರಗುಡಿ, ಶಾಂತಗೌಡ ಬಿರಾದಾರ, ಚಂದ್ರಾಮ ತೆಗ್ಗಿ, ಹಣಮಂತ ತೋಟದ, ಮಾಚಪ್ಪ ಹೋರ್ತಿ, ರಾಮಣ್ಣ ವಾಲೀಕಾರ, ಸಿದ್ದಲಿಂಗಯ್ಯ ಹಿರೇಮಠ, ಮಲ್ಲಿಕಾರ್ಜುನ ಮಳ್ಳಿ ಗೋಪಾಲ ಕಣಕಾಲ, ಅಪ್ಪಾಲಾಲ ರಾಠೊಡ, ಸಿದ್ದಣ್ಣ ಪೂಜಾರಿ, ರೇವಣಸಿದ್ದ ನಂದಿಹಾಳ, ಚಂದ್ರಕಾಂತ ಪಟ್ಟಣಶೆಟ್ಟಿ, ಸಿದ್ರಾಮ ನಂದಿಹಳ, ಶೆಟ್ಟೆಪ್ಪ ಲಮಾಣಿ ಭಾಗವಹಿಸಿದ್ದರು.