Advertisement

ದ್ರಾಕ್ಷಿ ಬೆಳೆ‌ಗಾರರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಿ

04:31 PM Feb 23, 2020 | Naveen |

ಬಸವನಬಾಗೇವಾಡಿ: ಬೇರೆ ಬೇರೆ ಕ್ಷೇತ್ರಗಳಲ್ಲಿ ಮೂರ್ನಾಲ್ಕು ಸಮಸ್ಯೆಗಳು ಬರುತ್ತವೆ ಹಾಗೆ ಪರಿಹಾರವು ಸಿಗುತ್ತವೆ. ಆದರೆ ಕೃಷಿ ಕ್ಷೇತ್ರದಲ್ಲಿ ಹತ್ತಾರು ಸಮಸ್ಯೆಗಳು ಎದುರಾಗುತ್ತವೆ. ಆದರೆ ಯಾವ ಸಮಸ್ಯೆ ಕೂಡಾ ಪರಿಹಾರವಾಗದ ಹಿನ್ನಲೆಯಲ್ಲಿ ಅನ್ನದಾತ ಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಪಟ್ಟಣದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯಶ್ರೀಗಳು ಹೇಳಿದರು.

Advertisement

ಪಟ್ಟಣದ ವಿಜಯಪುರ ರಸ್ತೆಯ ಯಾತ್ರಿ ನಿವಾಸದಲ್ಲಿ ವಿಜಯಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಸ್ಥಳೀಯ ಉಪ ಮಾರುಕಟ್ಟೆ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಣ ದ್ರಾಕ್ಷಿ ಉತ್ಪನ್ನಕ್ಕೆ ಆನ್‌ಲೈನ್‌ (ಇ-ಟ್ರೇಡಿಂಗ್‌) ವ್ಯವಸ್ಥೆ ಜಾರಿಗೊಳಿಸುವ ಕುರಿತು ದ್ರಾಕ್ಷಿ ಬೆಳೆಗಾರರ ಪೂರ್ವಭಾವಿ ಸಭೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅನ್ನದಾತನಿಗೆ ಒಂದಡೆ ಅತಿವೃಷ್ಟಿ, ಅನಾವೃಷ್ಟಿ, ರೋಗ ರುಜಿನಗಳಿಂದ ಬೆಳೆ ಹಾನಿ, ಬರಗಾಲ ಇವುಗಳ ಮಧ್ಯದಲ್ಲಿ ಬೆಳೆ ಬಂದರು ಕೂಡಾ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗದೆ ಹತ್ತಾರು ಸಮಸ್ಯೆಗಳಿಂದ ಅನ್ನದಾತ ಹೊರ ಬರಲು ಸಾಧ್ಯವಾಗುತ್ತಿಲ್ಲ. ಬೆಳೆವಿಮೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಅನ್ನದಾತ ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಿದ್ದಾನೆ ಎಂದು ಹೇಳಿದರು.

ದ್ರಾಕ್ಷಿ ಬೆಳಗಾರರು ಎದುರಿಸುವ ಸಮಸ್ಯೆ ಪರಿಹರಿಸಿಕೊಳ್ಳುವುದಕ್ಕಾಗಿ ಮೇಲಿಂದ ಮೇಲೆ ಸಭೆಗಳು ನಡೆಯಬೇಕು. ಬೆಳೆವಿಮೆ ಕುರಿತಂತೆ ತೋಟಗಾರಿಕೆ ಇಲಾಖೆ ರೈತರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು. ದಲ್ಲಾಳಿಗಳ ಹಾವಳಿ ನಿಲ್ಲಬೇಕು. ತಜ್ಞ ಕೃಷಿ ವಿಜ್ಞಾನಿಗಳನ್ನು ನೇಮಕ ಮಾಡಬೇಕು. ಉತ್ತಮ ಫಲಸು ತೆಗೆಯುವ ನಿಟ್ಟಿನಲ್ಲಿ ಸಲಹೆ ನೀಡಬೇಕು ಅಂದಾಗ ಮಾತ್ರ ಅನ್ನದಾತ ಹಲವಾರು ಸಮಸ್ಯೆಯಿಂದ ಹೊರ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದ್ರಾಕ್ಷಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಅಭಯಕುಮಾರ ನಾಂದ್ರೇಕರ ಮಾತನಾಡಿ, ದ್ರಾಕ್ಷಿ ಬೆಳಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಣದ್ರಾಕ್ಷಿ ಉತ್ಪನ್ನಕ್ಕೆ ಉತ್ತಮ ಮಾರುಕಟ್ಟೆ ಒದಗಿಸುವುದಕ್ಕಾಗಿ ಆನ್‌ಲೈನ್‌ (ಇ-ಟ್ರೇಡಿಂಗ್‌) ವ್ಯವಸ್ಥೆ ಯನ್ನು ವಿಜಯಪುರದಲ್ಲಿ ಜಾರಿಗೊಳಿಸಲಾಗುವುದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

Advertisement

ವಿಜಯಪುರ ಡಿಸಿಸಿ ಬ್ಯಾಂಕ್‌ ನಿರ್ದೇಶಕಿ ಸಂಯುಕ್ತಾ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚು ರೈತರು ದ್ರಾಕ್ಷಿ ಬೆಳೆಯುತ್ತಿದ್ದಾರೆ. ಒಣದ್ರಾಕ್ಷಿ ಮಾರಾಟಕ್ಕಾಗಿ ಹೊರ ರಾಜ್ಯಗಳಿಗೆ ತೆರಳುವ ಪರಿಸ್ಥಿತಿ ಇದೆ. ಜಿಲ್ಲೆಯಲ್ಲಿ ಆನ್‌ಲೈನ್‌ ಮಾರಾಟ ವ್ಯವಸ್ಥೆಯೊಂದಿಗೆ ಕೋಲ್ಡ್‌ ಸ್ಟೋರೇಜ್‌ಗಳ ಸಂಖ್ಯೆ ಹೆಚ್ಚಳವಾಗಬೇಕು. ಯಾವುದೇ ಒಂದು ಕಾರ್ಯ ಒಂದೇ ದಿನದಲ್ಲಿ ಪೂರ್ಣಗೊಳ್ಳುವುದಿಲ್ಲ. ಹಂತ ಹಂತವಾಗಿ ರೈತರ ಸಮಸ್ಯೆ ಪರಿಹರಿಸಬೇಕು. ಇಂತಹ ಕಾರ್ಯಗಳಿಗೆ ರೈತರ ಸಹಕಾರ ಅಗತ್ಯವಾಗಿದೆ ಎಂದರು.

ದ್ರಾಕ್ಷಿ ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪೀರಗೊಂಡ ಗದ್ಯಾಳ ಮಾತನಾಡಿ, ಬೇಸಿಗೆ ಕಾಲದಲ್ಲಿ ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಟ್ಯಾಂಕರ್‌ ನೀರಿಗೆ ಮೊರೆ ಹೋಗಿದ್ದಾರೆ. ಬೆಳೆಗೆ ಸೂಕ್ತ ಬೆಲೆ ಸಿಗದಿದ್ದಾಗ ರೈತರು ಸಂಕಷ್ಟ ಎದುರಿಸಬೇಕಾಗುತ್ತದೆ. ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಗೆ ಸೂಕ್ತ ವಾತಾವರಣವಿದೆ. ದ್ರಾಕ್ಷಿ. ಒಣ ದ್ರಾಕ್ಷಿ ಮಾರಾಟದಲ್ಲಿ ಜಿಲ್ಲೆ ಅಂತಾರಾಷ್ಟ್ರೀಯ ಮಾರುಕಟ್ಟೆ ಕೇಂದ್ರವಾಗಬೇಕಿದೆ. ದ್ರಾಕ್ಷಿ ಬೆಳೆಗಾರರಿಗೆ ರಾಜ್ಯ ಸರಕಾರ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ. ಬೆಳೆದ ಬೆಳೆಯನ್ನು ಅನ್ಯ ರಾಜ್ಯದ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿ ಪೀರ್‌ಜಾರದೆ, ಎಪಿಎಂಸಿ ಅಧ್ಯಕ್ಷ ಸುರೇಶಗೌಡ ಬಿರಾದಾರ, ಎಪಿಎಂಸಿ ನಿರ್ದೇಶಕರಾದ ಶೇಖರ ಗೊಳಸಂಗಿ, ಚಂದ್ರಶೇಖರ ಪಾಟೀಲ, ವಿಶ್ವನಾಥ ಪಾಟೀಲ, ರಾಜುಗೌಡ ಪಾಟೀಲ, ಪಿಕೆಪಿಎಸ್‌ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಎಸ್‌.ಎಸ್‌. ಜಾಲಗೇರಿ, ಡಾ| ಕರುಣಾಕರ ಚೌಧರಿ, ಎಪಿಎಂಸಿ ಸಹಾಯಕ ಕಾರ್ಯದರ್ಶಿ ಬಿ.ಎಲ್‌. ಜುಮನಾಳ, ನವೀನ ಪಾಟೀಲ ಸೇರಿದಂತೆ ಅನೇಕರು ಇದ್ದರು. ಐ.ಎಸ್‌. ಅವರಂಗಬಾದ ಸ್ವಾಗತಿಸಿದರು. ಧನರಾಜ ಪಟ್ಟಣಶೆಟ್ಟಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next