Advertisement

ಅನುದಾನ ಮರಳಿ ಹೋದರೆ ಅಧಿಕಾರಿಗಳ ವಿರುದ್ಧ ಕ್ರಮ: ಪಾಟೀಲ

05:12 PM Feb 26, 2020 | Naveen |

ಬಸವನಬಾಗೇವಾಡಿ: ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳ ಕಾಮಗಾರಿಗಳು ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳ್ಳಬೇಕು. ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ಯೋಜನೆಗಳ ಅನುದಾನ ಮರಳಿ ಹೋದರೆ ಅಂಥ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

Advertisement

ಮಂಗಳವಾರ ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ಮೂರನೇ ತ್ತೈ ಮಾಸಿಕ (ಕೆಡಿಪಿ) ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಲವು ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದ್ದು ಅಭಿವೃದ್ಧಿ ಕುಂಠಿತವಾಗುತ್ತಿದೆ. ಆದ್ದರಿಂದ ಎಲ್ಲ ಇಲಾಖೆ ತಾಲೂಕಾಧಿಕಾರಿಗಳು ಸಮರ್ಪಕವಾಗಿ ಯೋಜನೆಗಳ ಅನುದಾನ ಸದ್ಬಳಕೆ ಮಾಡಿಕೊಂಡು ಎಲ್ಲ ಕಾಮಗಾರಿಗಳನ್ನು ಅವಧಿ ಪೂರ್ವದಲ್ಲಿ ಮುಗಿಸಿ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬಸವನಬಾಗೇವಾಡಿ ತಾಲೂಕಿನ ಒಟ್ಟು 30 ಕೆರೆಗಳು ಬರುತ್ತವೆ. ಆ ಎಲ್ಲ ಕೆರೆಗಳಿಗೆ ಮಾರ್ಚ್‌ 2020 ಮೊದಲ ವಾರದಲ್ಲೇ ಕೃಷ್ಣ ಭಾಗ್ಯ ಜಲ ನಿಗಮದಿಂದ (ಕೆಬಿಜೆಎನ್‌ಎಲ್‌)ದಿಂದ ಎಲ್ಲ ಕೆರೆಗಳಿಗೆ ವಿವಿಧ ಏತ ನೀರಾವರಿ ಕಾಲುವೆಗಳ ಮೂಲಕ ಮತ್ತು ಹಳ್ಳ ಕೊಳ್ಳಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವಾಗಬೇಕಾಗಿದೆ. ಆದ್ದರಿಂದ ಸಣ್ಣ ನೀರಾವರಿ, ಕೆಬಿಜೆಎನ್‌ಎಲ್‌ ಇಲಾಖೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು. ಬೇಸಿಗೆಯಲ್ಲಿ ತಾಲೂಕಿನ ಯಾವುದೇ ಗ್ರಾಮಕ್ಕಾಗಲಿ ಕುಡಿಯುವ ನೀರಿನ ತೊಂದರೆಯಾಗದ ರೀತಿಯಲ್ಲಿ ನಿಗಾವಹಿಸಬೇಕು. ತಾಲೂಕಿನ 30 ಕೆರೆಗಳಿಗೆ ನೀರು ತುಂಬಿಸುವುದರಿಂದ ಆ ಭಾಗದ ರೈತರ ಕೊಳವೆ ಬಾವಿ, ತೆರೆದ ಬಾವಿಗಳಿಗೆ ಅಂತರ್ಜಲ ಹೆಚ್ಚಾಗುತ್ತದೆ. ಸಾರ್ವಜನಿಕರಿಗೆ ಮತ್ತು ಪ್ರಾಣಿ ಪಕ್ಷಿಗಳು ಹಾಗೂ ದನ ಕರುಗಳಿಗೆ ಕುಡಿಯುವ ನೀರಿನ ಸಮಸ್ಯೆಗಳನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಾರ್ಚ್‌ ಮೊದಲ ವಾರದಲ್ಲಿ ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ಎಲ್ಲ ತಯಾರಿ ಮಾಡಿಕೊಳ್ಳಬೇಕು. ಆ ಸಂದರ್ಭದಲ್ಲಿ ಯಾವುದೇ ನೆಪ ಹೇಳಬಾರದು ಎಂದು ಹೇಳಿದರು.

ಬಸವನಬಾಗೇವಾಡಿ ಬಸ್‌ ಘಟಕದಿಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಮತ್ತು ಪಟ್ಟಣದಿಂದ ಬೇರೆ ಪಟ್ಟಣ ಪ್ರದೇಶಗಳಿಗೆ ಬಸ್‌ ಸೌಕರ್ಯ ಕಲ್ಪಿಸಬೇಕು. ಬಸವನಬಾಗೇವಾಡಿ ಪಟ್ಟಣದ ಜನತೆಗೆ ಹುಬ್ಬಳ್ಳಿ ಸೇರಿದಂತೆ ಅನೇಕ ನಗರ ಪ್ರದೇಶಗಳಿಗೆ ನೇರ ಬಸ್‌ ಸಂಪರ್ಕ ಕಲ್ಪಿಸಬೇಕು. ತಾಲೂಕಿನ ಆಲಮಟ್ಟಿ, ಮನಗೂಳಿ, ಉಕ್ಕಲಿ ಗ್ರಾಮಗಳಿಗೆ ಬಸ್‌ ನಿಲ್ದಾಣ ಹಾಗೂ ನವೀಕರಣ ಮಾಡಬೇಕು ಎಂದು ಬಸವನಬಾಗೇವಾಡಿ ಬಸ್‌ ಘಟಕದ ವ್ಯವಸ್ಥಾಪಕರಿಗೆ ಸೂಚಿಸಿದರು.

ತಾಲೂಕಿನ ಮನಗೂಳಿ ಪಟ್ಟಣದ ಹೊರ ವಲಯದಲ್ಲಿ 4 ಎಕರೆ ಜಾಗೆಯಲ್ಲಿ ಬಿಸಿಎಂ ಇಲಾಖೆಯಿಂದ 3 ಕೋಟಿ ವೆಚ್ಚದಲ್ಲಿ ವಸತಿ ಶಾಲೆ ನಿರ್ಮಾಣ ಕಾರ್ಯ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಆ ವಸತಿ ಶಾಲೆ ಸುತ್ತ ಮುತ್ತ ವಿವಿಧ ತಳಿಗಳ ಸಸಿಗಳು ಹಾಗೂ ಗಿಡ ಮರಗಳನ್ನು ಬೆಳೆಸಿ ಉತ್ತಮ ವಾತಾವರಣ ನಿರ್ಮಾಣವಾಗಬೇಕು ಎಂದು ಅರಣ್ಯ ಮತ್ತು ಬಿಸಿಎಂ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ತಾಲೂಕಿನ ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಬಿಸಿಯೂಟ ನೀಡುವುದರ ಜೊತೆಗೆ ಶಾಲೆ ಆವರಣದಲ್ಲಿ ಬಿಸಿಯೂಟಕ್ಕೆ ಅಗತ್ಯವಿರುವ ತರಕಾರಿಗಳು ಹಾಗೂ ಹಣ್ಣು ಹಂಪಲನ್ನು ಬೆಳೆಸುವ ಕಾರ್ಯವಾಗಬೇಕು. ಅದರ ಜೊತೆಯಲ್ಲೇ ಬೇರೆ ಬೇರೆ ಆಹಾರ ನೀಡುವ ಕೆಲಸವಾಗಬೇಕು ಎಂದರು.

ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಸುಜಾತಾ ಪಾಟೀಲ, ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ, ತಾಪಂ ಇಒ ಭಾರತಿ ಚಲುವಯ್ಯ ವೇದಿಕೆಯಲ್ಲಿದ್ದರು. ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next