Advertisement

ಹೆದ್ಧಾರಿ ಕಾಮಗಾರಿಗೆ ಭೂಮಿಪೂಜೆ

03:43 PM Jan 31, 2020 | Naveen |

ಬಸವನಬಾಗೇವಾಡಿ: ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ ನಿರ್ಮಾಣದಿಂದ ಬಸವನಬಾಗೇವಾಡಿ, ತಾಳಿಕೋಟಿ ತಾಲೂಕು ಸೇರಿದಂತೆ ಅನೇಕ ಪಟ್ಟಣ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚಳದೊಂದಿಗೆ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಎರಡು ರಾಜ್ಯಗಳ ಸಂಪರ್ಕಕ್ಕೆ ಈ ರಾಜ್ಯ ಹೆದ್ದಾರಿ ತೂಗು ಸೇತುವೆಯಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

Advertisement

ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು, ಜಲಸಾರಿಗೆ ಇಲಾಖೆ ಯೋಜನೆಯಡಿ ಉಕ್ಕಲಿ ತಾಂಡಾದಿಂದ ಹತ್ತರಕಿಹಾಳವರೆಗೆ 2 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 2004ರಲ್ಲಿ ಪ್ರಥಮ ಬಾರಿಗೆ ಬಸವನಬಾಗೇವಾಡಿ ಮತಕ್ಷೇತ್ರಕ್ಕೆ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಕ್ಷೇತ್ರದ ಕೆಲವು ಹಳ್ಳಿಗಳಿಗೆ ಪ್ರಚಾರದ ವೇಳೆ ತೆರಳಬೇಕಾದರೆ ರಸ್ತೆ ಸಂಪರ್ಕವಿಲ್ಲದೆ.

ಗುಡ್ಡಸುತ್ತಿ ಮೈಲಾರಲಿಂಗಕ್ಕೆ ಬಂದ ಹಾಗೆ ಕೆಲ ಗ್ರಾಮಗಳಿಗೆ ಬರುವಂತ ಸ್ಥಿತಿ ಇತ್ತು. ಇನ್ನೂ ಕೆಲ ಹಳ್ಳಿಗಳಿಗೆ ಹೋಗಬೇಕಾದರೆ ಹುಡಿಕಿಕೊಂಡು ಹೋಗಿದ್ದೆ. ಆದರೆ ಇಂದು ಕ್ಷೇತ್ರದ ಯಾವುದೇ ಹಳ್ಳಿಗೂ ಹೋಗಬೇಕಾದರೆ ಹತ್ತಾರು ರಸ್ತೆಗಳ ಸಂಪರ್ಕವನ್ನು ಕಲ್ಪಿಸಲಾಗಿದೆ. ನೀವು ಯಾವ ದಿಕ್ಕಿನಿಂದವಾದರು ಕೂಡಾ ನಿಮ್ಮ ಹಳ್ಳಿಗಳಿಗೆ ಹೋಗಲು ರಸ್ತೆಗಳು ನಿರ್ಮಾಣವಾಗಿವೆ ಎಂದು ಹೇಳಿದರು.

ಡೋಣಿ ನದಿ ಭಾಗದ ಹತ್ತಾರು ಹಳ್ಳಿಗಳಿಗೆ ರಸ್ತೆ ಸಂಪರ್ಕ ಇಲ್ಲದೆ ಡೋಣಿ ನದಿ ಭಾಗದ ಹಳ್ಳಿಗಳ ಜನರು ಮತ್ತು ರೈತರು ಬಹಳ ಕಷ್ಟಪಡುತ್ತಿದ್ದರು. 2003ರಲ್ಲಿ ನಾನು ತಿಕೋಟಾ ಶಾಸಕಯಿದ್ದ ಸಂದರ್ಭದಲ್ಲಿ ಡೋಣಿ ನದಿ ಭಾಗದ ಹಳ್ಳಿಯೊಂದಕ್ಕೆ ಬಂದ ಸಂದರ್ಭದಲ್ಲಿ ಮಳೆ ಆಯಿತು. ನಂತರ ನಾನು ವಿಜಯಪುರಕ್ಕೆ ತೆರಳಬೇಕಾದರೆ ಡೋಣಿ ನದಿಯಲ್ಲಿ ನನ್ನ ವಾಹನ ಸಿಲುಕಿಕೊಂಡಿತ್ತು. ಹತ್ತು ಜನರ ಸಹಾಯದೊಂದಿಗೆ ವಾಹನ ತೆಗೆದುಕೊಂಡು ಹೋದ ನೆನಪು ಇಂದಿಗೂ ಇದೆ ಎಂದರು.

ಬಸವನಬಾಗೇವಾಡಿ ಪಟ್ಟಣ ಜಿಲ್ಲೆಯಲ್ಲೇ ಒಂದು ಮಾದರಿ ಪಟ್ಟಣವಾಗಿ ಹೊರ ಹೊಮ್ಮುತ್ತಿದೆ. ಈ ಪಟ್ಟಣದಲ್ಲಿ ಬೇರೆ-ಬೇರೆ ಭಾಗದ ಜನರು ಬಂದು ವಾಸಿಸಲು ಮುಂದಾಗುತ್ತಿದ್ದಾರೆ. ಪಟ್ಟಣದಲ್ಲಿ ಒಳಚರಂಡಿ, 24/7 ಕುಡಿಯುವ ನೀರು, ನಿರಂತರ ವಿದ್ಯುತ್‌, ಸುಸಜ್ಜಿತವಾದ ರಸ್ತೆಗಳು ಸೇರಿದಂತೆ ಅನೇಕ ಮೂಲ ಸೌಲಭ್ಯಗಳು ದೊರೆತ ಹಿನ್ನೆಲೆಯಿಂದ ಪಟ್ಟಣ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಹೇಳಿದರು.

Advertisement

ಅಣ್ಣಾಸಾಹೇಬಗೌಡ ಪಾಟೀಲ, ಅಪ್ಪಾಸಾಹೇಬಗೌಡ ಇಂಡಿ, ಸುಭಾಸ ಕಲ್ಯಾಣಿ, ಬಸಪ್ಪ ಹನಮಶೆಟ್ಟಿ, ನಾನಾಸಾಹೇಬ ಪಾಟೀಲ, ಪಂಡಿತ ಹೊಜಿ, ಬಿ.ಬಿ. ಬಿರಾದಾರ, ಭಾರತಿ ಚಲವಯ್ಯ, ಎಸ್‌.ಎನ್‌. ಕೆರೂರ, ಭೀಮನಗೌಡ ಬಿರಾದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next