ಬಸವನಬಾಗೇವಾಡಿ: ಸ್ವಾತಂತ್ರ್ಯ ದೊರಕಿ ಏಳು ದಶಕಗಳು ಕಳೆದರೂ ಸಣ್ಣ, ಅತೀ ಸಣ್ಣ ಸಮುದಾಯಗಳಿಗೆ ನೆಮ್ಮದಿಯಿಂದ ಜೀವನ ನಡೆಲು ಸರಕಾರಗಳು ಜಾತಿಯೆಂಬ ಅಡ್ಡಗೋಡೆ ನಿರ್ಮಿಸಿವೆ. ಇದರಿಂದ ಜನರ ಸ್ಥಿತಿಗತಿ ಅದೋಗತಿಗೆ ತಲುಪಿಸಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಸಣ್ಣ ಹಾಗೂ ಅತೀ ಸಣ್ಣ ಸಮುದಾಯಗಳ ಒಕ್ಕೂಟದ ರಾಜಾಧ್ಯಕ್ಷ ಸಾಯಬಣ್ಣ ಮಡಿವಾಳರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕೇಶವ ನಗರದಲ್ಲಿನ ಜ್ಞಾನ ಭಾರತಿ ಶಾಲೆಯಲ್ಲಿ ತಾಲೂಕು ಪದಾಧಿಕಾರಿಗಳ ನೇಮಕದ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಮಾನತೆ ಬರಬೇಕಾದರೆ ಯಾವುದೇ ಜಾತಿ ಇರಲಿ, ಆರ್ಥಿಕವಾಗಿ ಯಾರು ಹಿಂದುಳಿದಿರುವರೋ ಅಂಥವರಿಗೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ತಲುಪುವಂತೆ ಮಾಡಬೇಕು. ಆಗ ಪ್ರತಿಯೊಬ್ಬರು ಸಮಾನತೆಯಿಂದ ಬದುಕಲು ಸಾಧ್ಯವಾಗುತ್ತದೆ. ದೇಶದಲ್ಲಿ ಕೆಲ ಜನರು ಶ್ರೀಮಂತರಾಗಿ ಬದುಕಿದರೆ, ಇನ್ನೂ ಕೆಲವೊಂದು ಸಮುದಾಯಗಳ ಜನರು ಜಾತಿ ಬಲವಿಲ್ಲದೆ ಅಸಹಾಯಕರಾಗಿ ಬದುಕುತ್ತಿದ್ದಾರೆ. ದೇಶದಲ್ಲಿನ ರಾಜಕೀಯ ಪಕ್ಷದ ಜನಪ್ರತಿನಿಧಿಗಳು ಅಸಹಾಯಕರ ಹತ್ತಿರ ಬಂದು ಅವರ ಆಶೋತ್ತರಗಳನ್ನು ಕೇಳುವ ಸುಳಿಯೇ ಇಲ್ಲ ಎಂದು ರಾಜಕೀಯ ಮುಖಂಡರ ವಿರುದ್ಧ ಕಿಡಿಕಾರಿದರು.
ಸಣ್ಣ-ಸಣ್ಣ ಸಮುದಾಯದವರು ತಮ್ಮ ಕುಲಕಸುಬನ್ನೇ ನಂಬಿ ಬದುಕುವ ಜನಾಂಗ. ಆಧುನಿಕ ಯುಗದಲ್ಲಿ ಇವರ ಕುಲಕಸಬಕ್ಕೂ ಕೊಕ್ಕೆ ಬಿದ್ದಿದೆ. ನಿತ್ಯದ ಉಪಜೀವನ ನಡೆಸಲು ಅಸಾಧ್ಯವಾಗಿದ್ದು, ಇಂಥ ಸಂದರ್ಭದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ರಾಜಕೀಯದಲ್ಲಿಂತು ಇವರಿಗೆ ಗಗನ ಕುಸುಮವಾಗಿದ್ದು, ಸಣ್ಣ-ಸಣ್ಣ ಸಮುದಾಯಗಳು ತಾವು ಕುಲಕಸಬಿನೊಂದಿಗೆ ಮಕ್ಕಳನ್ನು ಶಿಕ್ಷಣವಂತರಾಗಿ ಮಾಡಿ ಉನ್ನತ ಮಟ್ಟಕ್ಕೆ ಏರುವಂತೆ ಮಾಡಬೇಕು ಎಂದು ಹೇಳಿದರು.
ಈ ವೇಳೆ ಜಿಲ್ಲಾಧ್ಯಕ್ಷ ಎಸ್.ವಿ. ಕನ್ನೂಳ್ಳಿ, ತಾಲೂಕಾಧ್ಯಕ್ಷ ಎಸ್.ಆರ್. ಹೂಗಾರ ಮಾತನಾಡಿದರು. ಗಂಗಾಧರ ಬಡಿಗೇರ, ಶಿವಾನಂದ ಮಡಿವಾಳರ, ಹಣಮಂತ ಮೇಲಸಕ್ರಿ, ವಿನೋದ ಇಂಗಳೇಶ್ವರ, ಡಾ| ಮಲ್ಲಿಕಾರ್ಜುನ ಹಳ್ಳಿ, ಪರಮಾನಂದ ಬಶೆಟ್ಟಿ, ಸಿದ್ದಯ್ಯ ಮಠಪತಿ, ಸಿ.ಬಿ. ಕಲ್ಯಾಣಿ, ಬಿ.ಐ. ತಡಕೊಡ ಸೇರಿದಂತೆ ಇತರರು ಇದ್ದರು. ನಾಗೇಶ ನಾಗೂರ ಸ್ವಾಗತಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ಒಕ್ಕೂಟದ ತಾಲೂಕಾಧ್ಯಕ್ಷರಾಗಿ ಸಂಗಪ್ಪ ರಾಯಪ್ಪ ಹೂಗಾರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ ಮಲ್ಲಪ್ಪ ನಾಗೂರ ಹಾಗೂ ಜಿಲ್ಲಾ ಸಮಿತಿ ಸದಸ್ಯರಾಗಿ ಗಂಗಾಧರ ಬಡಿಗೇರ(ಹಂಗರಗಿ) ಅವರನ್ನು ನೇಮಕ ಮಾಡಿ ಆದೇಶದ ಪತ್ರ ನೀಡಿದರು.