Advertisement

ಬರ ಹೊಡೆತಕ್ಕೆ ಅನ್ನದಾತ ತತ್ತರ

10:52 AM May 16, 2019 | Team Udayavani |

ಬಸವನಬಾಗೇವಾಡಿ: ಭೀಕರ ಬರಗಾಲಕ್ಕೆ ತೋಟಗಾರಿಕೆ ಬೆಳೆಗಳು ಸಂಪೂರ್ಣ ಹಾಳಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ರೈತರಿಗೆ ಬರ ಹೊಡೆತದ ಮೇಲೆ ಮತ್ತೂಂದು ಬರೆ ಎಳೆದಂತಾಗಿದೆ.

Advertisement

ಕಳೆದ 4 ವರ್ಷಗಳಿಂದ ಬಸವನಬಾಗೇವಾಡಿ ತಾಲೂಕು ಭೀಕರ ಬರಗಾಲಕ್ಕೆ ತುತ್ತಾಗಿದೆ. ಆದರೆ ಕಳದೆರೆಡು ವರ್ಷಗಳಿಂದ ಕೊಳವೆ ಬಾವಿ, ತೆರೆದ ಬಾವಿಗಳಲ್ಲಿದ್ದ ಸ್ವಲ್ಪ ಪ್ರಮಾಣದ ನೀರಿನಿಂದ ಈ ಭಾಗದ ರೈತರು ತಮ್ಮ ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಲಿಂಬೆ, ಮಾವು, ಪೇರು, ಸೀತಾಫಲ, ತೆಂಗು, ಬಾಳೆ, ಪಪ್ಪಾಯಿ, ದ್ರಾಕ್ಷಿ ಬೆಳೆಸಿದ್ದರು. ಈಗ ನೀರಿನ ಕೊರತೆಯಿಂದ ಬರಸಿಡಿಲು ಬಡಿದಂತಾಗಿದೆ.

ಬಸವನಬಾಗೇವಾಡಿ ತಾಲೂಕಿನಲ್ಲಿ 2017-18 ರ ಸಾಲಿನಲ್ಲಿ ಅಂದಾಜು 4ರಿಂದ 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗಿದೆ. ಇದರಲ್ಲಿ ಬಹು ವಾರ್ಷಿಕ ಬೆಳೆಯಾದ ದಾಳಿಂಬೆ, ದ್ರಾಕ್ಷಿ, ಲಿಂಬೆ, ಪೇರು ಹಾಗೂ ಇನ್ನಿತರ ಹಣ್ಣು ಹಂಪಲ 1,800ರಿಂದ 2,000 ಹೆಕ್ಟೇರ್‌ ಇವೆ. ಇನ್ನೂ ವಾರ್ಷಿಕ ಬೆಳೆಯಾದ ಉಳ್ಳಾಗಡ್ಡಿ, ಮೆಣಸು, ಬದನೆಕಾಯಿ, ಟೊಮೋಟೋ ಸೇರಿದಂತೆ ಅನೇಕ ತರಕಾರಿಗಳನ್ನು 3,000ದಿಂದ 4,000 ಹೇಕ್ಟರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

2018-19 ಸಾಲಿನಲ್ಲಿ ಎಷ್ಟು ಹೆಕ್ಟೇರ್‌ ಹಾನಿಯಾಗಿದೆ ಎಂಬ ಬಗ್ಗೆ ಸರ್ವೇ ಮಾಡಿದ ಬಳಿಕ ಮಾಹಿತಿ ದೊರೆಯಲಿದೆ. ಈ ವರ್ಷ ಭೀಕರ ಬರಗಾಲವಿದ್ದು ಇದರಲ್ಲಿ ತೋಟಗಾರಿಕೆ ಬೆಳೆ ಎಷ್ಟು ಹಾನಿಯಾಗಿದೆ ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ತೋಟಗಾರಿಕೆ ಇಲಾಖೆಗೆ ಸಿಕ್ಕಿಲ್ಲ.

ತೋಟಗಾರಿಕೆ ಬೆಳೆಗಳು ಫಸಲು ಕೊಡುವ ವರ್ಷಕ್ಕೆ ಬಂದಾಗಲೇ ನೀರಿನ ಕೊರತೆಯಿಂದ ಸಂಪೂರ್ಣ ಒಣಗಿವೆ. ಮತ್ತೆ ಇವುಗಳು ಪುನರ ಚೇತನ ಮಾಡಿದರೆ ಮೂರು ವರ್ಷ ಕಾದ ಬಳಿಕ ಫಸಲು ಪಡೆಯಲು ಸಾಧ್ಯವಾಗುತ್ತದೆ. ಹೀಗಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ತಾಲೂಕಾಡಳಿತ ತೋಟಗಾರಿಕೆ ಬೆಳೆಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ.

Advertisement

ಆಲಮಟ್ಟಿ ಆಣೆಕಟ್ಟು ತಾಲೂಕಿನಲ್ಲಿ ಇದ್ದರು ಕೂಡಾ ತಾಲೂಕಿನ ನೀರಾವರಿ ಯೋಜನೆಗಳು ಪೂರ್ಣಗೊಂಡು ರೈತರ ಜಮೀನುಗಳಿಗೆ ನೀರು ಹರಿಸಲು ಸರಕಾರ ಮತ್ತು ಈ ಭಾಗದ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಆಲಮಟ್ಟಿ ಆಣೆಕಟ್ಟಿನಲ್ಲಿನ ನೀರನ್ನು ಜಿಲ್ಲೆಯ ಕುಡಿಯಲು ನೀರು ಕೊಡಿ ಎಂದು ಕೇಳಿದರೆ ಕೊಡದೆ ಅನೇಕ ಕಂಪನಿಗಳಿಗೆ ನೀಡುತ್ತಾರೆ.
ಅರವಿಂದ ಕುಲಕರ್ಣಿ,
ರೈತ ಮುಖಂಡ

4 ಎಕರೆ ಜಮೀನಿನಲ್ಲಿ ಲಿಂಬೆ ನಾಟಿ ಮಾಡಿದ್ದೆ. ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗಿ ಅಂತರ್ಜಲ ಕುಸಿದಿದ್ದು ಕೊಳವೆ ಬಾವಿ ಕೊರೆಸಿದರು ಹನಿ ನೀರು ಸಿಗುತ್ತಿಲ್ಲ. ಹೀಗಾಗಿ ಕಳೆದ 3-4 ವರ್ಷದಿಂದ ಕಷ್ಟ ಪಟ್ಟು ಬೆಳೆಸಿದ ಲಿಂಬೆ ಬೆಳೆಗಳು ಸಂಪೂರ್ಣ ಹಾಳಾಗಿದೆ.
ಮಮ್ಮದಸಾಬ ವಾಲೀಕಾರ,
ಕರಭಂಟನಾಳ ರೈತ

ಕೊಲ್ಹಾರ, ಬಸವನಬಾಗೇವಾಡಿ, ನಿಡಗುಂದಿ, ಮನಗೂಳಿ ಹೋಬಳಿಗಳಲ್ಲಿ ಸ್ವಲ್ಪ ಪ್ರಮಾಣದ ನೀರಿದ್ದು ಅಷ್ಟು ಪ್ರಮಾಣದ ತೋಟಗಾರಿಕೆ ಬೆಳೆಗಳು ಹಾಳಾಗಿಲ್ಲ. ಜೂನ್‌ ಅಥವಾ ಆಗಸ್ಟ್‌ ತಿಂಗಳಲ್ಲಿ ಸ್ವಲ್ಪ ಪ್ರಮಾಣದ ಮಳೆಯಾದರು ದ್ರಾಕ್ಷಿ ಮತ್ತು ದಾಳಿಂಬರಿ ಪುನರ ಚೇತನಗೊಳ್ಳುತ್ತದೆ. ಇಳುವರಿಯಲ್ಲಿ ಶೇ. 25 ಹಾನಿಯಾಗುವ ಸಾಧ್ಯತೆ ಇದೆ. ಆದರೆ ಲಿಂಬೆ ಬೆಳೆ ಒಮ್ಮೆ ಒಣಗಿದೆ ಪುನರ ಚೇತನಗೊಳ್ಳುವುದಿಲ್ಲ.
ಬಿ.ಸಿ. ಪಾಟೀಲ,
ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ

ಕಳೆದ 10 ವರ್ಷದ ಹಿಂದೆ 6 ಎಕರೆಯಲ್ಲಿ ಪೇರು ನಾಟಿ ಮಾಡಿದ್ದೆ. ಈ ಹಿಂದೆ ಒಳ್ಳೆ ಫಸಲು ಬಂದಿತ್ತು. ಆದರೆ ಈ ವರ್ಷ ಭೀಕರ ಬರಗಾಲಕ್ಕೆ ಪೇರು ಸಂಪೂರ್ಣ ಒಣಗಿದೆ. ಇನ್ನೂ ಸ್ವಲ್ಪ ಚಿಕ್ಕು ಮತ್ತು ತೆಂಗು ಇದ್ದು ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದ್ದೇನೆ. ಒಂದು ಟ್ಯಾಂಕರ್‌ಗೆ 600 ರೂ. ನೀಡಬೇಕಾಗಿದೆ.
ಮೈಬುಸಾಬ ಟಾಂಗೇವಾಲ್

ಪ್ರಕಾಶ ಬೆಣ್ಣೂರ

Advertisement

Udayavani is now on Telegram. Click here to join our channel and stay updated with the latest news.

Next