Advertisement
ತಾಪಂ ಸಭಾ ಭವನದಲ್ಲಿ ನಡೆದ 11ನೇ ಸಾಮಾನ್ಯ ಸಭೆ ಹಾಗೂ ವಿವಿಧ ಇಲಾಖೆ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಅನೇಕ ದೊಡ್ಡ ದೊಡ್ಡ ಕೆರೆಗಳು ಇದ್ದು ಅವುಗಳಲ್ಲಿ ಹೂಳು ತುಂಬಿದೆ. ಹೂಳನ್ನು ತೆಗೆಯುವುದರಿಂದ ಈ ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗುತ್ತದೆ. ಆ ಭಾಗದ ಕೊಳವೆ ಬಾವಿ ಮತ್ತು ತೆರೆದ ಬಾವಿಗೆ ಅಂತರ್ಜಲ ಹೆಚ್ಚಾಗುತ್ತದೆ ಎಂದು ಹೇಳಿದರು.
Related Articles
Advertisement
ತೋಟಗಾರಿಕೆ ಇಲಾಖೆ ಅಧಿಕಾರಿ ಸಿ.ಡಿ. ಪಾಟೀಲ ಮಾತನಾಡಿ, ತಾಲೂಕಿನಲ್ಲಿ ಕಳೆದ 2 ವರ್ಷದಿಂದ ಭೀಕರ ಬರಗಾಲ ಆವರಿಸಿದೆ. ಹೀಗಾಗಿ ಹೂವಿನಹಿಪ್ಪರಗಿ ಹೋಬಳಿ ಭಾಗದಲ್ಲಿ ತೋಟಗಾರಿಕೆ ಬೆಳೆಗಳು ಹೆಚ್ಚು ಹಾನಿಗೆ ಒಳಗಾಗಿವೆ. ಸುಮಾರು 45 ಹೆಕ್ಟೇರ್ ಲಿಂಬೆ ಹಾಳಾಗಿದೆ. ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ನಾವು ಕೂಡಾ ಸರ್ವೇ ಮಾಡಿ ಬೆಳೆ ಹಾನಿ ಬಗ್ಗೆ ವರದಿ ಸಲ್ಲಿಸಿದ್ದೇವೆ ಎಂದು ಸಭೆಗೆ ವಿವರಿಸಿದರು.
ತಾಪಂ ಅಧ್ಯಕ್ಷ ದೇವೇಂದ್ರ ನಾಯಕ ಮಾತನಾಡಿ, ಬಸವನಬಾಗೇವಾಡಿ ಪಟ್ಟಣದಲ್ಲಿ ಇರುವ ಬಸ್ ಘಟಕ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವು ಗ್ರಾಮಗಳಿಗೆ ಮತ್ತು ಕೆಲವು ಪಟ್ಟಣ ಪ್ರದೇಶಗಳಿಗೆ ಬಸವನಬಾಗೇವಾಡಿ ಪಟ್ಟಣದಿಂದ ನೇರ ಸಂಪರ್ಕ ಕಲ್ಪಿಸುವ ಬಸ್‌ನ ಕೊರತೆ ಇದೆ. ಹೀಗಾಗಿ ಸಾರ್ವಜನಿಕರು ಹಾಗೂ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ. ಅಣ್ಣ ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿ ಪಟ್ಟಣಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ರೈಲು ಮುಖಾಂತರ ಪ್ರವಾಸಿಗರು ಬರುತ್ತಾರೆ. ಆದರೆ ರೈಲು ನಿಲ್ದಾಣದಿಂದ ಪಟ್ಟಣಕ್ಕೆ ಬಸ್ ಸೌಕರ್ಯವಿಲ್ಲ. ಇದರಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ ಎಂದರು.
ಆಗ ಬಸ್ ಘಟಕದ ವ್ಯವಸ್ಥಾಪಕ ವಿನಾಯಕ ಸಾಲಿಮಠ ಮಾತನಾಡಿ, ಬಸ್ ಘಟಕದಲ್ಲಿ ಚಾಲಕರ ಮತ್ತು ನಿರ್ವಾಹಕರ ಕೊರತೆಯಿಂದ ಕೆಲವು ಗ್ರಾಮಕ್ಕೆ ಪಟ್ಟಣ ಪ್ರದೇಶಕ್ಕೆ ಬಸ್ ಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಶೀಘ್ರದಲ್ಲೇ ಈ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಸಭೆಗೆ ವಿವರಿಸಿದಾಗ, ಕೂಡಗಿ ತಾಪಂ ಸದಸ್ಯ ಈಶ್ವರ ಜಾಧವ ಮಾತನಾಡಿ, ನಾವು ಹಲವಾರು ಸಾಮಾನ್ಯ ಸಭೆಗಳಲ್ಲಿ ಬಸವನಬಾಗೇವಾಡಿ ಪಟ್ಟಣದಿಂದ ಬಸವನಬಾಗೇವಾಡಿ ರೋಡ್ ರೈಲ್ವೆ ನಿಲ್ದಾಣಕ್ಕೆ ಬಸ್ ಸೌಕರ್ಯ ಒದಗಿಸಬೇಕು ಎಂದು ಹಲವಾರು ಬಾರಿ ಹೇಳಿದರು ಕೂಡಾ ನೀವು ಮಾಡುತ್ತಿಲ್ಲ ಎಂದು ಆರೋಪಿಸಿದರು.
ತಾಪಂ ಸದಸ್ಯ ಶಿವಾನಂದ ಅಂಡಗಿ ಮಾತನಾಡಿ, ಸಿಂದಗಿಯಿಂದ ಬೆಂಗಳೂರಿಗೆ ತೆರಳುವ ಸ್ಲೀಪರ್ ಬಸ್ ವ್ಹಾಯಾ ಬಸವನಬಾಗೇವಾಡಿ ಮಾರ್ಗವಾಗಿ ಚಲಿಸಬೇಕು. ಬಸವನಬಾಗೇವಾಡಿಯಿಂದ ಹುಬ್ಬಳ್ಳಿಗೆ ನೇರ ಬಸ್ ಸೌಕರ್ಯ ಒದಗಿಸಬೇಕು. ಮತ್ತು ರಾತ್ರಿ 10ಕ್ಕೆ ವಿಜಯಪುರ ನಗರದಿಂದ ಬಸವನಬಾಗೇವಾಡಿ ಪಟ್ಟಣಕ್ಕೆ ಬಸ್ ಸೌಕರ್ಯ ಒದಗಿಸಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಗುಳೆದಗುಡ್ಡ ಮಾತನಾಡಿ, ರಾಜ್ಯ ಸರಕಾರ ಎಲ್ಲ ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದ ಶಿಷ್ಯವೇತನ ನೀಡಲಾಗುತ್ತದೆ. ಇದರ ಲಾಭವನ್ನು ಪ್ರತಿಯೊಬ್ಬರು ಪಡೆಯಬೇಕು. ಇದರಿಂದ ಮುಂದೆ ನಿಮ್ಮ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಎಂದರು.
ಸಭೆ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷ ದೇವೇಂದ್ರ ನಾಯಕ ವಹಿಸಿದ್ದರು. ತಾಪಂ ಉಪಾಧ್ಯಕ್ಷೆ ಸುಜಾತಾ ಪಾಟೀಲ ಇದ್ದರು.