Advertisement

ಕೈ ಅಧಿಕಾರ ಕಿತ್ತುಕೊಳ್ಳಲು ಕಮಲ ಯತ್ನ

05:06 PM May 06, 2019 | Naveen |

ಬಸವನಬಾಗೇವಾಡಿ: ಬಸವನಬಾಗೇವಾಡಿ ಪುರಸಭೆ ಚುನಾವಣೆಗೆ ಈ ಬಾರಿ ಚುನಾವಣೆ ಕಾವು ಜೋರಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಬಾರಿ ಕಾಂಗ್ರೆಸ್‌ -ಜೆಡಿಎಸ್‌-ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದೆ. ಇದರ ಮಧ್ಯದಲ್ಲಿ ಪಕ್ಷೇತರ ಹಾವಳಿ ಹೆಚ್ಚಾಗಿದೆ.

Advertisement

ಬಸವನಬಾಗೇವಾಡಿ ಪುರಸಭೆಗೆ ಮೊದಲಿನಿಂದ ಕೂಡಾ ಕಾಂಗ್ರೆಸ್‌-ಬಿಜೆಪಿ ಮಧ್ಯೆ ಹೋರಾಟ ನಡೆಯುತ್ತಿತ್ತು. ಇದರ ಮಧ್ಯದಲ್ಲಿ ಪಕ್ಷೇತರರು ಹೆಚ್ಚಾಗಿ ಸ್ಪರ್ಧೆ ಮಾಡಿ ಆಯ್ಕೆಯಾಗಿ ನಂತರ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಿ ಪುರಸಭೆಯ ಗದ್ದುಗೆ ಹಿಡಿದು ಅಧಿಕಾರ ಅನುಭವಿಸಿದ ಉದಾಹರಣೆಗಳು ಹೆಚ್ಚಿವೆ. ಆದರೆ ಜೆಡಿಎಸ್‌ ಪಕ್ಷ ಒಂದೆಡು ಬಾರಿ ಆಯ್ಕೆಯಾಗಿದ್ದನ್ನು ಹೊರತು ಪಡಿಸಿದರೆ ಅಧಿಕಾರ ಚುಕ್ಕಾಣಿ ಹಿಡಿದಿಲ್ಲ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಪಕ್ಷದ ಮಧ್ಯೆ ನೇರ ಹಣಾಹಣಿ ಬಿದ್ದಿರುವುದರಿಂದ ಈ ಬಾರಿ ನಾವೇಕೆ ಪುರಸಭೆ ಚುನಾವಣೆಗೆ ಒಂದು ಕೈ ನೋಡಬಾರದು ಎಂಬ ಉದ್ದೇಶದಿಂದ ಈ ಬಾರಿ ಜೆಡಿಎಸ್‌ ಪಕ್ಷ 23 ವಾರ್ಡ್‌ಗೂ ಕೂಡಾ ತನ್ನ ಅಭ್ಯರ್ಥಿಯನ್ನು ಹಾಕಲು ನಿರ್ಧರಿಸಿದೆ.

ಬಿಜೆಪಿಗೆ ಬಸವನಬಾಗೇವಾಡಿ ಪಟ್ಟಣದಲ್ಲಿ ತನ್ನದೇಯಾದ ಒಂದು ನೆಲೆಯಿದೆ. ಹೀಗಾಗಿ ಪುರಸಭೆಯ ಪ್ರತಿ ಚುನಾವಣೆಯಲ್ಲಿ ಏಕಾಂಗಿಯಾಗಿ ಬಿಜೆಪಿ ಸ್ಪರ್ಧೆ ಮಾಡಿದರು ಕೂಡಾ ಕನಿಷ್ಠ ಪಕ್ಷ 4ರಿಂದ 9 ಸ್ಥಾನ ಗೆಲ್ಲುತ್ತ ಬಂದಿದೆ. ಹೀಗಾಗಿ ಬಿಜೆಪಿಯಲ್ಲಿ ಅಭ್ಯರ್ಥಿಗಳ ಕೊರತೆಯಿಲ್ಲ. ಟೀಕೆಟ್ ಆಕಾಂಕ್ಷಿಗಳ ಪಟ್ಟಿ ಸಹಜವಾಗಿಯೇ ಹೆಚ್ಚಿದೆ. ಕೆಲವು ವಾರ್ಡ್‌ಗಳಲ್ಲಿ ಬಿಜೆಪಿಯಿಂದ ನಮಗೆ ಟೀಕೆಟ್ ಸಿಕ್ಕರೆ ಗೆಲವು ನಿಶ್ಚಿತ ಎಂಬ ಉದ್ದೇಶದಿಂದ ಟೀಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ.

ಕಾಂಗ್ರೇಸ್‌ ಪಕ್ಷದಿಂದ ಸ್ಪರ್ಧಿಸುವವರ ಸಂಖ್ಯೆಯೂ ಕಡಿಮೆಯಿಲ್ಲ. ಸದ್ಯ ಪಕ್ಷ ಪುರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಪ್ರತಿ ವಾರ್ಡ್‌ಗೆ ಇಬ್ಬರು ಮೂವರು ಆಕಾಂಕ್ಷಿಗಳ ಪಟ್ಟಿ ಹೆಚ್ಚಿದೆ. ಇದರ ಜೊತೆಯಲ್ಲೇ ಕಾಂಗ್ರೆಸ್‌ ಪಕ್ಷದ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳ ಪಟ್ಟಿ ಕೂಡಾ ಹೆಚ್ಚಿದೆ. ಬಸನಬಾಗೇವಾಡಿ ಪುರಸಭೆಗೆ ಕಾಂಗ್ರೆಸ್‌ ಪಕ್ಷದಿಂದ ಕನಿಷ್ಠ 10ರಿಂದ 14 ಸ್ಥಾನ ಗೆಲ್ಲುತ್ತ ಬಂದಿದೆ. ಇನ್ನೂ ಪಕ್ಷೇತರ ಬೆಂಬಲದೊಂದಿಗೆ ಹೆಚ್ಚು ಕಾಲ ಪುರಸಭೆ ಅಧಿಕಾರದ ಚುಕ್ಕಾಣಿಯನ್ನು ಕಾಂಗ್ರೇಸ್‌ ಪಕ್ಷ ಹಿಡಿದಿದೆ.

ಪಕ್ಷೇತರರಿಗೆ ಡಿಮ್ಯಾಂಡ್‌: ಬಸವನಬಾಗೇವಾಡಿ ಪುರಸಭೆಯಲ್ಲಿ ಹೆಚ್ಚಾಗಿ ಕಾಂಗ್ರೆಸ್‌ ಪಕ್ಷ ಅಧಿಕಾರ ನಡೆಸಿದರು ಕೂಡಾ ಪಕ್ಷೇತರ ಸದಸ್ಯರ ಬೆಂಬಲ ಪಡೆದಿದೆ. ಹೀಗಾಗಿ ಪಕ್ಷೇತರರಾಗಿ ಸ್ಪರ್ಧೆ ಮಾಡುವರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ಚುನಾವಣೆಯಲ್ಲಿ 3ರಿಂದ 5 ಸ್ಥಾನ ಪಕ್ಷೇತರ ಸದಸ್ಯರು ಆಯ್ಕೆಯಾಗುತ್ತ ಬಂದಿದ್ದರೆ ಪಕ್ಷತೇರರಾಗಿ ಆಯ್ಕೆಯಾದರೆ ನಮಗೆ ಯಾವುದಾದರು ಸ್ಥಾನ ಸಿಗುತ್ತದೆ ಎಂಬ ಉದ್ದೇಶದಿಂದ ಬಸವನಬಾಗೇವಾಡಿ ಪುರಸಭೆಯಲ್ಲಿ ಪಕ್ಷೇತರ ಹಾವಳಿಯೇ ಹೆಚ್ಚಾಗಿದೆ.

Advertisement

2007-08ರಲ್ಲಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ 12 ಸ್ಥಾನ, ಬಿಜೆಪಿಯಿಂದ 5 ಸ್ಥಾನ, ಓರ್ವ ಜೆಡಿಎಸ್‌ ಸ್ಥಾನವನ್ನು ಪಡೆದರೆ ಪಕ್ಷೇತರರಾಗಿ 7 ಜನ ಆಯ್ಕೆಯಾಗಿದ್ದರು. 2013-14ರ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ 10 ಸ್ಥಾನ, ಬಿಜೆಪಿಯಿಂದ 9 ಸ್ಥಾನ, ಪಕ್ಷೇತರರು 4 ಸ್ಥಾನ ಗಳಿಸುವ ಮೂಲಕ ಹೆಚ್ಚು ಕಾಂಗ್ರೆಸ್‌ ಪಕ್ಷ ಆಡಳಿತ ನಡೆಸಿದೆ.

ಬಸವನಬಾಗೇವಾಡಿ ಪುರಸಭೆ ವ್ಯಾಪ್ತಿಯಲ್ಲಿ ಬರುವ 23 ವಾರ್ಡ್‌ಗಳಲ್ಲಿ ಒಟ್ಟು ಮತದಾರರ ಸಂಖ್ಯೆ 26,810. ಇದರಲ್ಲಿ 13,390 ಪುರುಷರು, 13,400 ಮಹಿಳೆಯರು ಹಾಗೂ 20 ಇತರೆ ಇದ್ದಾರೆ.

ಚುನಾವಣೆ ಕಾವು ಬಲು ಜೋರು: ಪುರಸಭೆ ಚುನಾವಣೆ ಸ್ಪರ್ಧಾ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ನಾನು ಆ ವಾರ್ಡ್‌ನಿಂದ ಸ್ಪರ್ಧೆ ಮಾಡುತ್ತೇನೆ, ನಾನು ಈ ವಾರ್ಡ್‌ನಿಂದ ಸ್ಪರ್ಧೆ ಮಾಡುತ್ತೇನೆ ಎಂದು ಜನರ ಮುಂದೆ ಹೇಳಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಇನ್ನೂ ಕೆಲವರು ಜನತೆಯ ಆಶೀರ್ವಾದ ಬಯಸಿ ಸೋಷಿ‌ಯಲ್ ಮಿಡಿಯಾದಲ್ಲಿ ಪೋಸ್ಟ್‌ ಹಾಕುವರ ಸಂಖ್ಯೆ ಹೆಚ್ಚಾಗುತ್ತಿದೆ.

ವಾರ್ಡ್‌ವಾರು ಮೀಸಲಾತಿ ವಿವರ: ವಾರ್ಡ್‌ ನಂ. 1 ಹಿಂದುಳಿದ ವರ್ಗ (ಎ) ಮಹಿಳೆ, 2. ಸಾಮಾನ್ಯ, 3. ಹಿಂದುಳಿದ ವರ್ಗ (ಎ) ಮಹಿಳೆ, 4. ಸಾಮಾನ್ಯ, 5. ಹಿಂದುಳಿದ ವರ್ಗ (ಬಿ), 6.ಹಿಂದುಳಿದ ವರ್ಗ (ಎ), 7. ಸಾಮಾನ್ಯೆ ಮಹಿಳೆ, 8. ಸಾಮಾನ್ಯ, 9. ಸಾಮಾನ್ಯ, 10. ಹಿಂದುಳಿದ ವರ್ಗ (ಎ), 11. ಸಾಮಾನ್ಯ, 12. ಪರಿಶಿಷ್ಟ ಜಾತಿ ಮಹಿಳೆ, 13. ಪರಿಶಿಷ್ಟ ಜಾತಿ ಮಹಿಳೆ, 14. ಪರಿಶಿಷ್ಟ ಜಾತಿ, 15. ಪರಿಶಿಷ್ಟ ಜಾತಿ, 16. ಸಾಮಾನ್ಯ, 17. ಸಾಮಾನ್ಯ ಮಹಿಳೆ, 18. ಪರಿಶಿಷ್ಟ ಪಂಗಡ, 19. ಸಾಮಾನ್ಯ ಮಹಿಳೆ, 20. ಸಾಮಾನ್ಯ ಮಹಿಳೆ, 21. ಪರಿಶಿಷ್ಟ ಜಾತಿ, 22. ಸಾಮಾನ್ಯ ಮಹಿಳೆ, 23. ಸಾಮಾನ್ಯ ಮಹಿಳೆ.

Advertisement

Udayavani is now on Telegram. Click here to join our channel and stay updated with the latest news.

Next