Advertisement

ಕೈ ಅಧಿಕಾರ ಕಸಿಯಲು ಕಮಲ ಕಸರತ್ತು

01:42 PM May 22, 2019 | Naveen |

ಬಸವನಬಾಗೇವಾಡಿ: ಬಸವನಬಾಗೇವಾಡಿ ಪಟ್ಟಣದ ಪುರಸಭೆ 23 ವಾರ್ಡ್‌ಗಳ ಚುನಾವಣೆಗೆ ಕಾಂಗ್ರೆಸ್‌ನಿಂದ 21, ಬಿಜೆಪಿಯಿಂದ 18, ಜೆಡಿಎಸ್‌ನಿಂದ 7 ಹಾಗೂ 19 ಜನ ಪಕ್ಷೇತರಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದು ಮತದಾರರ ಬಳಿ ರಾಜಕೀಯ ಚದುರಂಗದಾಟ ಪ್ರಾರಂಭಿಸಿದ್ದಾರೆ.

Advertisement

2013-14ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ 10 ಸ್ಥಾನ, ಬಿಜೆಪಿಯಿಂದ 9 ಸ್ಥಾನ, ಪಕ್ಷೇತರರು 4 ಸ್ಥಾನ ಗಳಿಸುವ ಮೂಲಕ ಕಾಂಗ್ರೆಸ್‌ ಪಕ್ಷ ಆಡಳಿತ ನಡೆಸಿತ್ತು. ಕಳೆದ ಬಾರಿ ಚುನಾವಣೆಗಿಂತ ಈ ಬಾರಿಯ ಚುನಾವಣೆ ಕಾವು ಚೋರಾಗಿದೆ. ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಬಂಡಾಯ ಅಭ್ಯರ್ಥಿಗಳ ಬಿಸಿ ತಟ್ಟುವ ಲಕ್ಷಣಗಳು ಹೆಚ್ಚಾಗಿದ್ದು ಪಕ್ಷೇತರರ ಪ್ರಚಾರವೂ ಜೋರಾಗಿದೆ.

ಬಿಜೆಪಿ: ಕಳೆದ ಪುರಸಭೆ ಚುನಾವಣೆಯಲ್ಲಿ ಬಿಜೆಪಿ 9 ಸ್ಥಾನ ಪಡೆದುಕೊಂಡಿತ್ತು. ಆದರೆ ಈ ಬಾರಿ ಇನ್ನೂ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಪುರಸಭೆಯ ಅಧಿಕಾರದ ಗದ್ದುಗೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸರಕಾರದ ಸಾಧನೆ ಮತ್ತು ಯಡಿಯೂರಪ್ಪನವರ ಹೆಸರಿನ ಮೇಲೆ ತಮ್ಮ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದು ಶತಾಯಗತಾಯ ಪುರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲು ತಂತ್ರಗಾರಿಕೆ ರೂಪಿಸುತ್ತಿದೆ.

ಕಾಂಗ್ರೆಸ್‌: ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 10 ಸ್ಥಾನಗಳನ್ನು ಪಡೆದುಕೊಂಡು ಪಕ್ಷೇತರ ಬೆಂಬಲದೊಂದಿಗೆ 5 ವರ್ಷ ಆಡಳಿತ ನಡೆಸಿದೆ. ಕಾಂಗ್ರೆಸ್‌ ಪಕ್ಷ ಈ ಬಾರಿ ಕೂಡಾ 23 ವಾರ್ಡ್‌ಗಳ ಪೈಕಿ ಈಗಾಗಲೇ ಒಂದು ಕ್ಷೇತ್ರದಲ್ಲಿ ಅವಿರೋಧ ಆಯ್ಕೆಯಾಗಿದೆ. ಇನ್ನೂ 21 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಹಾಗೂ ಇನ್ನೊಂದರಲ್ಲಿ ಬೆಂಬಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರು ಹಾಗೂ ಸಚಿವ ಶಿವಾನಂದ ಪಾಟೀಲ ರಾಜಕೀಯ ತಂತ್ರಗಾರಿಕೆ ತೋರಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಕಾರ್ಯದಲ್ಲಿ ತೊಡಗಿದ್ದಾರೆ.

ಜೆಡಿಎಸ್‌: ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ಖಾತೆ ತೆಗೆದಿರಲಿಲ್ಲ. ಈ ಬಾರಿ ಹೇಗಾದರು ಮಾಡಿ ಖಾತೆ ತೆಗೆಯಬೇಕೆಂಬ ಉದ್ದೇಶದಿಂದ 23 ವಾರ್ಡ್‌ಗಳ ಪೈಕಿ ಪಕ್ಷದಿಂದ 7 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಅಪ್ಪುಗೌಡ ಪಾಟೀಲ ಅವರು ಪಟ್ಟಣದಲ್ಲಿ ಹೆಚ್ಚು ಮತ ಪಡೆದಿದ್ದು ನಾವೇಕೆ ಪುರಸಭೆ ಚುನಾವಣೆಗೆ ಒಂದು ಕೈ ನೋಡಬಾರದು ಎಂಬ ಉದ್ದೇಶದಿಂದ ಈ ಬಾರಿ ಜೆಡಿಎಸ್‌ ಕಣಕ್ಕಿಳಿದಿದೆ.

Advertisement

ಕಳೆದ ವಿಧಾನಸಭಾ ಚುನಾವಣೆಲ್ಲಿ ಬಿಜೆಪಿಯಲ್ಲಿ ಆಂತರಿಕ ತಿಕ್ಕಾಟ ಜೆಡಿಎಸ್‌ ಪಕ್ಷಕ್ಕೆ ಅನುಕೂಲವಾಗಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿದ್ದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಈಗ ಜೆಡಿಎಸ್‌ ಪಕ್ಷದಲ್ಲಿಲ್ಲ. ಜೆಡಿಎಸ್‌ ಪಕ್ಷ ಈ ಪುರಸಭೆ ಚುನಾವಣೆಯಲ್ಲಿ ಯಾವ ತಂತ್ರಗಾರಿಕೆ ರೂಪಿಸಿ ತನ್ನ ಖಾತೆ ತೆರೆಯಲಿದೆ ಎಂಬ ಕುತೂಹಲ ಮೂಡಿದೆ.

ರಾಜ್ಯ ಹಾಗೂ ಕೇಂದ್ರದಲ್ಲಿ ಶೀಘ್ರದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ. ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೆ ಸರಕಾರ ಇರಲಿದ್ದು ಹೆಚ್ಚು ಅನುದಾನ ತರಲು ಅನುಕೂವಾಗುತ್ತದೆ. ಆ ನಿಟ್ಟಿನಲ್ಲಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಆಶೀರ್ವಾದ ಮಾಡಬೇಕೆಂದು ಜನರ ಬಳಿ ಮತವನ್ನು ಕೇಳುತ್ತೇವೆ.
ಬಿ.ಕೆ. ಕಲ್ಲೂರ
ಬಿಜೆಪಿ ಮಂಡಲ ಅಧ್ಯಕ್ಷ

ಹಲವಾರು ಬಾರಿ ಕಾಂಗ್ರೆಸ್‌ ಪಕ್ಷ ಪುರಸ» ಯಲ್ಲಿ ಆಡಳಿತ ನಡೆಸಿದೆ. ಒಂದು ಬಾರಿ ಬಿಜೆಪಿ ಆಡಳಿತ ನಡೆಸಿದೆ. ಆದರೆ ಪಟ್ಟಣದ ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡು ಜನರ ಬಳಿ ಮತ ಕೇಳುತ್ತೇವೆ. ಜನರು ಜೆಡಿಎಸ್‌ ಪಕ್ಷಕ್ಕೆ ಖಂಡಿತ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆಯಿದೆ.
ಎನ್‌.ಎಸ್‌. ಪಾಟೀಲ
ಜೆಡಿಎಸ್‌ ಪಕ್ಷದ ತಾಲೂಕಾಧ್ಯಕ್ಷ

ಪುರಸಭೆಯಿಂದ 24×7 ಕುಡಿಯುವ ನೀರು, ಮೆಘಾ ಮಾರುಕಟ್ಟೆ, ಮಾದರಿ ಆಸರೆ ಬಡಾವಣೆ ಹಾಗೂ ಪಟ್ಟಣದಲ್ಲಿ ಸುಸಜ್ಜಿತ ರಸ್ತೆ, ಒಳಚರಂಡಿ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸಚಿವ ಶಿವಾನಂದ ಪಾಟೀಲ ಅಭಿವೃದ್ಧಿ ಕಾರ್ಯ ಮನಗಂಡಿರುವ ಪಟ್ಟಣದ ಜನತೆ ಈ ಬಾರಿಯೂ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಲಿದ್ದು ಪುನಃ ನಾವೇ ಅಧಿಕಾರ ಹಿಡಿಯುತ್ತೇವೆ.
ಈರಣ್ಣ ಪಟ್ಟಣಶೆಟ್ಟಿ
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ಪ್ರಕಾಶ ಬೆಣ್ಣೂರ

Advertisement

Udayavani is now on Telegram. Click here to join our channel and stay updated with the latest news.

Next