Advertisement

ಬಸವನಬಾಗೇವಾಡಿ ಜಿಲ್ಲಾ ಕೇಂದ್ರಕ್ಕೆ ಮುಖಂಡರ ಆಗ್ರಹ

03:45 PM Oct 03, 2019 | Naveen |

ಬಸವನಬಾಗೇವಾಡಿ: ಭೌಗೋಳಿಕವಾಗಿ ಹಾಗೂ ಮಧ್ಯವರ್ತಿ ಸ್ಥಳವಾದ ಬಸವನಬಾಗೇವಾಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಹಾಗೂ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.

Advertisement

ಬುಧವಾರ ಪಟ್ಟಣದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವನ ಬಾಗೇವಾಡಿ ತಾಲೂಕು ಐತಿಹಾಸಿಕ ಹಿನ್ನೆಲೆ ಇರುವ ತಾಲೂಕು ಕೇಂದ್ರವಾಗಿದ್ದು ಮತ್ತು ಆಲಮಟ್ಟಿ ಆಣೆಕಟ್ಟು ನಿರ್ಮಾಣಕ್ಕೆ ಹಾಗೂ 4 ಸಾವಿರ ಮೆಘಾ ವ್ಯಾಟ್‌ ಉಷ್ಣವಿದ್ಯುತ್‌ ಸ್ಥಾವರ ನಿರ್ಮಾಣಕ್ಕೆ ಈ ಭಾಗದ ರೈತರು ತಮ್ಮ ಫಲವತ್ತದಾದ ಲಕ್ಷಾಂತರ ಎಕರೆ ಭೂಮಿಯನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ್ದಾರೆ ಎಂದರು.

ಬಸವನಬಾಗೇವಾಡಿ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡಬೇಕೆಂಬ ಬೇಡಿಕೆ ನಿನ್ನೆ ಮೊನ್ನೆಯದಲ್ಲ. ದಶಕಗಳಿಂದ ಬೇಡಿಕೆಯನ್ನು ಸರಕಾರದ ಮುಂದೆ ಇಡುತ್ತಾ ಬಂದಿದೆ. ಮಾಜಿ ಮುಖ್ಯಮಂತ್ರಿ ಜಿ.ಎಸ್‌. ಪಟೇಲ್‌ ಅವರು ಏಳು ಜಿಲ್ಲೆಗಳನ್ನು ಮಾಡುವ ಸಂದರ್ಭದಲ್ಲಿ ಕೂಡಾ ಬೇಡಿಕೆಯನ್ನು ಇಡಲಾಗಿತ್ತು.

ಆದರೆ ಆಗ ತಾಲೂಕು ಕೇಂದ್ರಗಳು ಹೆಚ್ಚು ಇಲ್ಲದ ಕಾರಣ ಹಾಗೇ ಉಳಿಯಿತು. ಈಗ ಬಸವನಬಾಗೇವಾಡಿ, ಮುದ್ದೇಬಿಹಾಳ, ತಾಳಿಕೋಟಿ, ದೇವರಹಿಪ್ಪರಗಿ, ಕೊಲ್ಹಾರ, ನಿಡಗುಂದಿ ಸೇರಿ 6 ತಾಲೂಕುಗಳನ್ನು ಒಳಗೊಂಡಿದೆ. ಹೀಗಾಗಿ ಬಸವನಬಾಗೇವಾಡಿಯನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂದು ಹೇಳಿದರು.

ಈಗಾಗಲೇ ಬಸವನಬಾಗೇವಾಡಿ ಪಟ್ಟಣದಲ್ಲಿ ಹೆಸ್ಕಾಂ, ಪೊಲೀಸ್‌ ಇಲಾಖೆ ಸೇರಿದಂತೆ ಅನೇಕ ಉಪ ವಿಭಾಗ ಕಚೇರಿಗಳು ಕಾರ್ಯಾರಂಭ ಮಾಡುತ್ತಿವೆ. ಈ 5 ತಾಲೂಕುಗಳಿಗೆ ಮಧ್ಯ ಸ್ಥಳವಾದ ಬಸವನಬಾಗೇವಾಡಿ ಪಟ್ಟಣ 5 ತಾಲೂಕಿಗೆ ಕೇವಲ 30 ಕಿ.ಮೀ. ಅಂತರದಲ್ಲಿ ಇರುತ್ತದೆ. ಈಗಾಗಲೇ ತಾಲೂಕಿನಲ್ಲಿ ಉಷ್ಣ ವಿದ್ಯುತ್‌ ಸ್ಥಾವರ, ವಿಂಡ್‌ ಪವರ್‌, ಸೋಲಾರ ಸೇರಿದಂತೆ ಅನೇಕ ದೊಡ್ಡ ದೊಡ್ಡ ಕೈಗಾರಿಕಾ ಕ್ಷೇತ್ರಗಳು ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇನ್ನೂ ಹೆಚ್ಚು ಕೈಗಾರಿಕಾ ಕೇಂದ್ರಗಳು ತಾಲೂಕಿನಲ್ಲಿ ಪ್ರಾರಂಭಿಸಲು ಮುಂದಾಗಿವೆ. ಆದ್ದರಿಂದ ರಾಜ್ಯ ಸರಕಾರ ರಾಜ್ಯದ ಚಿಕ್ಕೋಡಿ, ವಿಜಯನಗರ (ಹೊಸಪೇಟೆ), ಜಮಖಂಡಿ, ಮಧುಗಿರಿ ಸೇರದಂತೆ ಅನೇಕ ನೂತನ ಜಿಲ್ಲೆಗಳನ್ನು ಮಾಡುವ ಸಂದರ್ಭದಲ್ಲಿ ಬಸವನಬಾಗೇವಾಡಿಯನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ಆಗ್ರಹಿಸಿದರು.

Advertisement

ದಸರಾ ಹಬ್ಬ ಮುಗಿದ ಬಳಿಕ ಮತ್ತೂಮ್ಮೆ ತಾಲೂಕಿನ ಎಲ್ಲಾ ಮಠಾಧೀಶರು ವಿವಿಧ ಪಕ್ಷದ ಮುಖಂಡರು ಹಾಗೂ ಎಲ್ಲ ಕನ್ನಡಪರ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಭೆ ಕರೆದು ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಲಾಗುವುದು.

ಆಮರಣ ಉಪವಾಸ ಸತ್ಯಾಗ್ರಹ ಮಾಡಬೇಕು ಅಥವಾ ಯಾವ ರೀತಿ ಹೋರಾಟ ಮಾಡಬೇಕು ಎಂಬ ಕುರಿತು ದಸರಾ ಹಬ್ಬದ ಮರುದಿನ ಸಭೆ ಕರೆದು ಚರ್ಚಿಸಲಾಗುವುದು. ಅ. 5 ಮತ್ತು 6ರಂದು ಜಿಲ್ಲೆಯ ಆಲಮಟ್ಟಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆಗಮಿಸಲಿದ್ದು ಆ ಸಂದರ್ಭದಲ್ಲಿ ಬಸವನಬಾಗೇವಾಡಿಯನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ವಿವಿಧ ಮಠಾಧೀಶರು ಹಾಗೂ ಸಂಘಟನೆಗಳ ಮುಖಂಡರು, ರಾಜಕೀಯ ಪಕ್ಷದ ಮುಖಂಡರು ಸೇರಿಕೊಂಡು ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಚಂದ್ರಮ ತೆಗ್ಗಿ, ಕೃಷ್ಣಪ್ಪ ಭ್ರಮರೆಡ್ಡಿ, ಸದಾಶಿವ ಬರಟಗಿ, ಹೊನಕೇರಪ್ಪ ತೆಲಗಿ, ಬಸವರಾಜ ಹೆಬ್ಟಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next