Advertisement

ಬಸವ ಜಯಂತಿ ಆಚರಣೆಗೆ ಸೀಮಿತವಾಗದಿರಲಿ

05:13 PM May 10, 2019 | Team Udayavani |

ಬಸವನಬಾಗೇವಾಡಿ: ಬಸವಣ್ಣನವರ ಜನ್ಮಸ್ಥಳದಲ್ಲಿ ಬಸವ ಜಯಂತ್ಯುತ್ಸವ ಕೇವಲ ಬಾಯಿ ಮಾತಿಗೆ ಸೀಮಿತವಾಗದೇ ದೇಶದ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಉತ್ಸವ ಆಚರಣೆಯಾಗಬೇಕು ಎಂದು ಕಾರಟಗಿಯ ಲೀಲಾ ಮಲ್ಲಿಕಾರ್ಜುನ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವ ಜಯಂತಿ ಅಂಗವಾಗಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಸವವೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆದರ್ಶ ಸಮಾಜ ನಿರ್ಮಾಣ ಮಾಡುವ ಉದ್ದೇಶವನ್ನಿಟ್ಟುಕೊಂಡು ಬಸವ ಜಯಂತಿ ಆಚರಣೆಯಾಗಬೇಕಿದೆ. ದೆಹಲಿಯಲ್ಲಿ ಅಕ್ಷರಧಾಮದ ರೀತಿಬಸವೇಶ್ವರರ ಸಂದೇಶ ಸಾರುವ ರೀತಿಯಲ್ಲಿ ಭವ್ಯ ಕಟ್ಟಡ ನಿರ್ಮಾಣವಾಗಬೇಕಿದೆ. ಸರಕಾರ ಸೇರಿದಂತೆ ಜನರು ಇಚ್ಛಾಶಕ್ತಿ ಪ್ರದರ್ಶಿಸಿದಾಗ ಮಾತ್ರ ಈ ಸ್ಥಳವು ಜಗತ್ತಿನ ಆಕರ್ಷಣೆ ಕೇಂದ್ರವಾಗಲಿದೆ ಎಂದು ಹೇಳಿದರು.

ಸ್ತ್ರೀಯರಿಗೆ ಆತ್ಮ ವಿಶ್ವಾಸದ ಶಕ್ತಿ ಕೊಟ್ಟ ಬಸವಣ್ಣನವರು ಸಮಾನತೆಗಾಗಿ ಸಾಮಾಜಿಕ ಕ್ರಾಂತಿ ಮಾಡಿದ್ದಾರೆ. ಬಸವಣ್ಣನವರ ಚಿಂತನೆಗಳ ಕಡೆಗೆ ಗಮನಹರಿಸಿ ಅವುಗಳನ್ನು ಜೀವನದಲ್ಲಿ ಪಾಲಿಸುವಂತಾಗಬೇಕು ಎಂದು ಹೇಳಿದರು.

ಸಾನ್ನಿಧ್ಯವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಪ್ರತಿ ವರ್ಷ ಬಸವ ಜಯಂತಿ ರಾಷ್ಟ್ರಮಟ್ಟದ ಉತ್ಸವವಾಗಬೇಕು ಎಂಬ ಇಚ್ಛೆ ಬಸವ ಭಕ್ತರದ್ದಾಗಿದೆ. ಈ ಬಗ್ಗೆ ಸರಕಾರ ಹೆಚ್ಚು ಗಮನ ಹರಿಸದೇ ಇರುವುದು ಬೇಸರದ ಸಂಗತಿಯಾಗಿದೆ. ಇಡೀ ಜಗತ್ತು ಬಸವನಾಗೇವಾಡಯತ್ತ ನೋಡುವ ರೀತಿಯಲ್ಲಿ ಮುಂದಿನ ಬಸವ ಜಯಂತಿ ಆಚರಣೆ ಮಾಡುವತ್ತ ಬಸವಾಭಿಮಾನಿಗಳು ಮನಸ್ಸು ಮಾಡಬೇಕಿದೆ. ಬಸವನಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಮಂಡಳಿಯಾದರೆ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದು ಹೇಳಿದರು.

Advertisement

ಮಲ್ಲಿಕಾರ್ಜುನ ವೇದಿಕೆಯಲ್ಲಿದ್ದರು. ಕಲಾವಿದ ಕೆ. ಗಂಗಾಧರ ಸ್ವಾಗತಿಸಿದರು. ಬಸವರಾಜ ನಂದಿಹಾಳ ನಿರೂಪಿಸಿದರು. ಬಸವರಾಜ ಹಂಚಲಿ ವಂದಿಸಿದರು.

ಕೆಂಭಾವಿಯ ಗವಾಯಿಗಳಾದ ಬಸವರಾಜ ಬಂಟನೂರ ಹಾಗೂ ಸಂಗಡಿಗರಿಂದ ವಚನ ಸಂಗೀತೋತ್ಸವ ಹಾಗೂ ಧಾರವಾಡದ ನಾಗರತ್ನ ಹಡಗಲಿ ಸಾರಥ್ಯದಲ್ಲಿ ಋತಿಕಾ ನೃತ್ಯ ನಿಕೇತನ ತಂಡ ಪ್ರಸ್ತುತ ಪಡಿಸಿದ ವಚನ ನೃತ್ಯ ರೂಪಕ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next