ಬಸವನಬಾಗೇವಾಡಿ: ಪಟ್ಟಣದ ಮೂಲ ನಂದೀಶ್ವರ ದೇವಸ್ಥಾನದ ಉದ್ಯಾನದಲ್ಲಿ ಬಿಡ ಮರಗಳು ನೀರಿಲ್ಲದೆ ಒಣಗುತ್ತಿರುವುದು ಬಸವಾಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಮೂಲ ನಂದೀಶ್ವರ ದೇವಸ್ಥಾನ ಸುತ್ತ ಸುಮಾರು 2ರಿಂದ 3 ಎಕರೆ ವಿಸ್ತಾರ ತೋಟವಿದೆ. ಈ ತೋಟದಲ್ಲಿ ಸುಮಾರು 60-70 ಅಡಿ ಆಳದ ಬಾವಿಯಿದ್ದು ಇದರಿಂದಲೇ ದೇವರ ಪೂಜೆ ಹಾಗೂ ತೋಟದಲ್ಲಿನ ತೆಂಗಿನ ಮರಗಳಿಗೆ ಮತ್ತು ಉದ್ಯಾನಕ್ಕೆ ನೀರು ಪೂರೈಸಲಾಗುತ್ತಿತ್ತು. ಆದರೆ ಕಳೆದ 5-6 ವರ್ಷದಿಂದ ವರುಣ ಮುನಿಸಿಕೊಂಡಿದ್ದರಿಂದ ಅಂತರ್ಜಲ ಮಟ್ಟ ಕುಸಿದು ಪ್ರತಿ ವರ್ಷ ನೀರು ಕಡಿಮೆಯಾಗುತ್ತ ಬಂದಿದೆ. ಈ ವರ್ಷ ಬಾವಿ ಸಂಪೂರ್ಣ ಬತ್ತಿದ್ದು ಹನಿ ನೀರಿಗೂ ಪರದಾಡುವಂತಾಗಿದೆ.
ಈ ಹಿಂದೆ ಮೂಲ ನಂದೀಶ್ವರ ದೇವಸ್ಥಾನ ಉಸ್ತುವಾರಿ ಸ್ಥಳೀಯ ಆಡಳಿತ ಮಂಡಳಿ ನೋಡಿಕೊಳ್ಳುತ್ತಿತ್ತು. 2001-02ರಲ್ಲಿ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಮಂಡಳಿಯಲ್ಲಿ ಈ ದೇವಸ್ಥಾನ ಸೇರ್ಪಡೆಗೊಂಡ ಬಳಿಕ 2005ರಲ್ಲಿ ದೇವಸ್ಥಾನ ಪುನರ್ ಜೀರ್ಣೋದ್ಧಾರ ಮಾಡಿ ಹೂ ಹಾಗೂ ಅಲಂಕೃತ ಗಿಡ ಬೆಳೆಸಿ ದೇವಸ್ಥಾನಕ್ಕೆ ಹೊಸ ರೂಪ ನೀಡಲಾಗಿತ್ತು.
ದೇವಸ್ಥಾನ ಹಿಂಬದಿಯಲ್ಲಿರುವ 1ರಿಂದ 2 ಎಕರೆ ಜಮೀನಿನಲ್ಲಿ ಈ ಹಿಂದೆ ದೇವಾಲಯ ಆಡಳಿತ ಮಂಡಳಿಯವರು ನೂರಾರು ತೆಂಗಿನ ಸಸಿ ನೆಟ್ಟಿದ್ದರು. ನಂತರ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಮಂಡಳಿ ವಿಶಾಲವಾದ ಬಾವಿ ಹಾಗೂ ತೆಂಗಿನ ತೋಟದಲ್ಲಿ ಉದ್ಯಾನ ನಿರ್ಮಿಸಿತು. ಇದರಿಂದ ಪ್ರವಾಸಿಗರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಉದ್ಯಾನ ಅನುಕೂಲವಾಗಿತ್ತು. ಆದರೆ ಈ ವರ್ಷ ಭೀಕರ ಬರಗಾಲದಿಂದ ಉದ್ಯಾನ ಮತ್ತು ದೇವಾಲಯ ಸುತ್ತ ಮುತ್ತ ಹೂವಿನ ಗಿಡ ಹಾಗೂ ಅಲಂಕೃತ ಗಿಡಗಳು ಒಣಗುತ್ತಿದ್ದು ದೇವಸ್ಥಾನ ಸೌಂದರ್ಯ ಕ್ಷೀಣಿಸುತ್ತಿದೆ.
ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಮಂಡಳಿ ತಕ್ಷಣ ಉದ್ಯಾನ ರಕ್ಷಿಸಲು ಮುಂದಾಗಬೇಕು. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಉದ್ಯಾನಕ್ಕೆ ನೀರು ಪೂರೈಸಲು ಮುಂಗಾಬೇಕೆಂಬುದು ಬಸವಾಭಿಮಾನಿಗಳ ಒತ್ತಾಸೆಯಾಗಿದೆ.
ಪ್ರಕಾಶ ಬೆಣ್ಣೂರ