Advertisement

ಮಹಿಳಾ ಪ್ರತಿಭೆಗೆ ಬೇಕು ಸಾಂಸ್ಕೃತಿಕ ಮಹತ್ವ: ಪ್ರೊ|ಮೀನಾಕ್ಷಿ

03:55 PM Jun 24, 2019 | Naveen |

ಬಸವಕಲ್ಯಾಣ: ಆತ್ಮವಿಶ್ವಾಸ ಮತ್ತು ಸ್ವಸಾಮರ್ಥ್ಯ ಮಹಿಳೆಯ ಅಸ್ತಿತ್ವದ ಪ್ರತೀಕವಾಗಿವೆ. ಸಾಂಸ್ಕೃತಿಕ ವಲಯದಲ್ಲಿ ಮಹಿಳಾ ಅಸ್ಮಿತೆಯ ಸಂಕಥನದ ಅಗತ್ಯವಿದೆ ಎಂದು ಬಸವಕಲ್ಯಾಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕಿ ಪ್ರೊ| ಮೀನಾಕ್ಷಿ ಬಿರಾದಾರ ಹೇಳಿದರು.

Advertisement

ನಗರದ ಸಂಕಲ್ಪ ವಿಜ್ಞಾನ ಕಾಲೇಜಿನಲ್ಲಿ ರವಿವಾರ ನಡೆದ ಡಾ| ಜಯದೇವಿತಾಯಿ ಲಿಗಾಡೆ ಅವರ 107ನೇ ಜನ್ಮದಿನ ಹಾಗೂ ಡಾ| ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ 40ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಹಿಳೆ ಮತ್ತು ಸಂವಿಧಾನ’ ಕುರಿತು ಅವರು ಮಾತನಾಡಿದರು.

ಮಹಿಳೆ ಸಾಮಾಜಿಕ ಹೇರಿಕೆಗಳಿಂದ ಮತ್ತು ಶೋಷಣೆಗಳಿಂದ ಹಿಂಜರಿಕೆ ಅನುಭವಿಸಿ ತನ್ನನು ತಾನು ಮಾನಸಿಕ ದೌರ್ಬಲ್ಯಳಾಗಿಸಿಕೊಂಡಿದ್ದಾಳೆ. ಮಹಿಳೆಯ ಪ್ರತಿಭೆಗೆ ಮಹತ್ವ ನೀಡುವ ಸಾಂಸ್ಕೃತಿಕ ವಲಯದ ಅಗತ್ಯವಿದೆ.

ಸಂವಿಧಾನದಿಂದ ದೊರೆತ ಅನೇಕ ನಿಯಮಗಳನ್ನು ಮಹಿಳೆ ತನ್ನ ಸಾಧನೆಯ ದಾರಿಯಾಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮಹಿಳೆಗೂ ಕಾನೂನು ಪ್ರಜ್ಞೆಯ ಅಗ್ಯವಿದೆ ಎಂದರು.

ಮಹಿಳೆ ಮತ್ತು ಸಂವಿಧಾನ ಕುರಿತು ಕವಿ ಚೆನ್ನಬಸವ ಕೋಹಿನೂರ ಉಪನ್ಯಾಸ ನೀಡಿ, ಮಹಿಳೆಗೆ ಆರ್ಥಿಕ, ಸಾಮಾಜಿಕ, ರಾಜಕಿಯ, ಸಾಂಸ್ಕೃತಿಕ ಸಮಾನತೆ ಮತ್ತು ಅವಕಾಶವನ್ನು ನೀಡಿದ ಭಾರತೀಯ ಸಂವಿಧಾನವು ಬಹುದೊಡ್ಡ ಸ್ತ್ರೀವಾದವನ್ನು ಪ್ರತಿಪಾದಿಸುತ್ತದೆ ಎಂದರು.

Advertisement

ಬಸವಣ್ಣ ಮತ್ತು ಅಂಬೇಡ್ಕರರು ಮಹಿಳೆಯ ಸಾಂಸ್ಕೃತಿಕ ಅಸ್ತಿತ್ವ, ಸ್ವಾತಂತ್ರ್ಯ ಮತ್ತು ಸಾಮಾನತೆಯ ಬಗೆಗೆ ಆಲೋಚಿಸಿದ ಭಾರತದ ಸ್ತ್ರೀವಾದಿ ಚಿಂತಕರಾಗಿದ್ದಾರೆ. ಈ ನೆಲದ ಮಹತ್ವದ ಸಾಂಸ್ಕೃತಿಕ ಚಿಂತಕರಾದ ಬಸವಣನವರು ಮಹಿಳೆಗೆ ಸಾಮಾಜಿಕ ಸಮಾನತೆ ಒದಗಿಸುವ ಕನಸಿನಿಂದ, ಅನುಭವ ಮಂಟಪದ ಮೂಲಕ ಹಾಗೂ ಅಂಬೇಡ್ಕರರು ಸಂವಿಧಾನದ ಮೂಲಕ ಮಹಿಳಾ ಸ್ವಾತಂತ್ರ್ಯ, ಸಮಾನತೆ ಅನುಷ್ಠಾನಗೊಳಿಸಿದ ಇವರಿಬ್ಬರೂ ಭಾರತದ ಮಹತ್ವದ ಸ್ತ್ರೀವಾದಿ ಚಿಂತಕರಾಗಿದಾರೆ ಎಂದರು.

ಹುಲಸೂರು ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಪ್ರೊ| ಬಸವರಾಜ ಮೈಲಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಮಹಿಳೆಯರ ಕೊಡುಗೆ ಅನನ್ಯವಾದದ್ದು. ದೇಶ-ಕಾಲದ ಮತ್ತು ಸಾಮಾಜಿಕ ಸಂದರ್ಭದ ಬಿಕ್ಕಟ್ಟುಗಳನ್ನು ಮೀರಿ ಮಹಿಳೆಯರು ಮಹತ್ವದ ಸಾಧನೆ ಮಾಡಿದ್ದಾರೆ. ಭಾರತೀಯ ಸಂವಿಧಾನವು ಸಮಾನತೆ, ಸಮಾನ ಕೆಲಸ-ವೇತನ, ಮಹಿಳೆಯರಿಗೆ ವಿಶೇಷ ಹಕ್ಕು, ಚುನಾವಣಾ ಮೀಸಲಾತಿ ಮೊದಲಾದ ಅಂಶಗಳನ್ನು ಒಳಗೊಂಡಿದೆ. ಹೆಣ್ಣು ಭ್ರೂಣ ಹತ್ಯೆ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಪಿಡುಗು, ನಿಂದನೆಗೆ ನೈತಿಕವಾಗಿ, ಸಮಾಜಿಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ನಿಷೇಧವಿದೆ ಎಂದರು.

ಕಲಬುರಗಿಯ ಎನ್‌.ವಿ. ಕಾಲೇಜಿನ ಅಧ್ಯಾಪಕ ಡಾ|ಶಿವಾಜಿ ಮೇತ್ರೆ ಮಾತನಾಡಿ, ಬಸವಣ್ಣನವರ ಹಾಗೂ ಗಾಂಧೀಜಿಯವರ ತತ್ವವನ್ನೇ ಬದುಕಾಗಿಸಿಕೊಂಡ ಡಾ| ಜಯದೇವಿತಾಯಿ ಲಿಗಾಡೆ ಅವರು ಸ್ವಾತಂತ್ರ್ಯ ಚಳವಳಿ ಹಾಗೂ ಕರ್ನಾಟಕ ಏಕೀಕರಣ ಎರಡರಲ್ಲೂ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಮಹಿಳಾ ವಾದವನ್ನು ಕ್ರಿಯಾತ್ಮಕವಾಗಿಸಿದ ಶ್ರೇಯಸ್ಸು ಲಿಗಾಡೆತಾಯಿ ಅವರಿಗೆ ಸಲ್ಲುತದೆ ಎಂದರು.

ಕಾಲೇಜಿನ ಪ್ರಾಚಾರ್ಯ ವೇದಪ್ರಕಾಶ ಹುಲಸೂರಕರ್‌ ಅಧ್ಯಕ್ಷತೆ ವಹಿಸಿದ್ದರು. ಡಾ|ಭೀಮಾಶಂಕರ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಪ್ರೊ| ಟಿ.ರಘುಪ್ರಸಾದ, ಹನುಮಂತರಾವ್‌ ವಿಸಾಜಿ, ಬಕ್ಕಯ್ಯ ಸ್ವಾಮಿ, ನಾಗಪ್ಪ ನಿಣ್ಣೆ, ಹರೀಶ ಕೋಹಿನೂರ, ವೈಶಾಲಿ ನಾಗರಾಳೆ, ಪ್ರಸಾದ ದೀಕ್ಷಿತ್‌ ಪ್ರಣಿತಾ ಕರಾಡೆ, ಮಹಾಂತೇಶ ಅಜೂರ, ತಸ್ಮಿಮ್‌ ಮಲಂಗ್‌, ಬಬಿತಾ ಬಿರಾದಾರ್‌ ಇದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ಸ್ವಾಗತಿಸಿದರು. ಅಂಬರೀಶ ಬಿಮಾಣೆ ನಿರೂಪಿಸಿದರು. ಪ್ರತಿಷ್ಠಾನ ಅಧ್ಯಕ್ಷ ಎಸ್‌.ಜಿ.ಹುಡೇದ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next