ಬಸವಕಲ್ಯಾಣ: ನಾರಾಯಣಪುರ ಗ್ರಾಪಂ ವ್ಯಾಪ್ತಿಗೊಳಪಡುವ
ನಾರಾಯಣಪುರವಾಡಿ ಗ್ರಾಮಸ್ಥರಿಗೆ ನೀರಿನ ಸೌಲಭ್ಯ ಒದಗಿಸಲು
20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಕೊಳವೆಬಾವಿ ಒಂದೇ
ವರ್ಷದಲ್ಲಿ ಬತ್ತಿ ಹೋಗಿದೆ.
ತಾಲೂಕಿನ ನಾರಾಯಣಪುರದಿಂದ ಕಿಟ್ಟಾ ಗ್ರಾಮಕ್ಕೆ ಹೋಗುವ ರಸ್ತೆಯ ಮಧ್ಯದಲ್ಲಿ ಒಂದು ವರ್ಷದ ಹಿಂದೆ ಎನ್‌ಆರ್‌ಡಿಪಿ ಯೋಜನೆಯಡಿ ನಾರಾಯಣಪುರ ಗ್ರಾಪಂ ವ್ಯಾಪ್ತಿಗೊಳಪಡುವ ನಾರಾಯಣಪುರವಾಡಿ ಈ ಬಾವಿಯನ್ನು ನಿರ್ಮಿಸಲಾಗಿತ್ತು. ಸಾರ್ವಜನಿಕರಿಗೆ ಕುಡಿಯುವ ನೀರೊದಗಿಸುವ ಉದ್ದೇಶದಿಂದ ನಿರ್ಮಿಸಿದ್ದ ಈ ಬಾವಿ ಇದೀಗ ಬತ್ತಿ ಹೋಗಿದ್ದು, ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.
20 ಲಕ್ಷ ರೂ.ಗಳಲ್ಲಿ ಕೊಳವೆಬಾವಿ ಕೊರೆದು, ಸುತ್ತಮುತ್ತ ಸಿಸಿ ವಾಲ್ ಕೂಡ ನಿರ್ಮಿಸಲಾಗಿತ್ತು. ಆರಂಭದಲ್ಲಿ ಕೆಲ ತಿಂಗಳು ಮಾತ್ರ ಬಾವಿಯಲ್ಲಿ ನೀರು ಕಾಣಿಸಿದ್ದು, ನಂತರ ಸಂಪೂರ್ಣ ಬತ್ತಿ ಹೋಗಿದ್ದು, ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ. ಗುತ್ತಿಗೆದಾರರು ಕಾಟಾಚಾರಕ್ಕಾಗಿ ಸ್ಥಳಾವಕಾಶವಿದ್ದ ಕಡೆ ಬಾವಿ ಕೊರೆಯುತ್ತಾರೆ. ಆದರೆ ನೀರಿನ ಮೂಲ ನೋಡಿ ಅಥವಾ ನೀರಿನ ಮೂಲ ಕಂಡು ಹಿಡಿಯುವ ತಜ್ಞರನ್ನು ಕರೆಸಿ ಬಾವಿ ತೋಡುವುದಿಲ್ಲ. ಅದಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಬಾವಿ ತೋಡಿದ್ದರೂ ನೀರಿನ ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ ಗ್ರಾಮಸ್ಥರು ಆರೋಪಿಸುತ್ತಾರೆ.
ಸದ್ಯ 20 ಲಕ್ಷ ರೂ. ಖರ್ಚು ಮಾಡಿ ತೋಡಿದ ಬಾವಿಯಲ್ಲಿ ಪಕ್ಷಿಗಳಿಗೂ ಹನಿ ನೀರು ಕೂಡಿಯಲು ಸಿಗುತ್ತಿಲ್ಲ. ಬಾವಿಗೆ ಅಳವಾಡಿಸಿದ ಪಂಪ್‌ಸೆಟ್ ಮತ್ತು ವಿದ್ಯುತ್ ತಂತಿಗಳನ್ನು ಸೂಕ್ತ ನಿರ್ವಹಣೆ ಇಲ್ಲದೇ ತೆಗೆದುಕೊಂಡು ಹೋಗಲಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಾವಿ ಮೇಲೆ ರಕ್ಷಣೆಗಾಗಿ ಕಬ್ಬಿಣದ ಜಾಳಿ ಹಾಗೂ ಹೂಳೆತ್ತುವ ಕಾಮಗಾರಿ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.
ವೀರಾರೆಡ್ಡಿ ಆರ್.ಎಸ್